ವಾಷಿಂಗ್ಟನ್ : ಇರಾನ್ ಪರ್ಯಾಯ ತೈಲವನ್ನು ಭಾರತಕ್ಕೆ ಪೂರೈಸುವ ದಿಶೆಯಲ್ಲಿ ತಾನು ಹೆಚ್ಚಿನ ಆದ್ಯತೆ ನೀಡಿ ಭಾರತಕ್ಕೆ ಯಾವುದೇ ತೊಂದರೆ ಆಗದಂತೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಅಮೆರಿಕ ಹೇಳಿದೆ.
ಭಾರತ ತಾನು ಆಮದಿಸಿಕೊಳ್ಳುವ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬಹುಪಾಲನ್ನು ಇರಾನ್ ನಿಂದ ಪಡೆದುಕೊಳ್ಳುತ್ತಿದೆ. ಈಚೆಗೆ ಇರಾನ್ ಮೇಲೆ ಅಮೆರಿಕ ವಾಣಿಜ್ಯ ನಿಷೇಧ ಹೇರಿರುವ ಕಾರಣ ಭಾರತದ ಇರಾನ್ ತೈಲ ಆಮದು ಗಮನಾರ್ಹವಾಗಿ ಕಡಿಮೆಯಾಗಿಲಿದೆ. ಇದರಿಂದ ಇರಾನಿಗೂ ಭಾರತಕ್ಕೂ ಬಿಸಿಮುಟ್ಟಲಿದೆ.
ಈ ನಡುವೆ ಇರಾನ್ ನಿಂದ ತೈಲ ಆಮದಿಸಿಕೊಳ್ಳುವ ಭಾರತ ಸಹಿತ ಎಲ್ಲ ದೇಶಗಳು ನವೆಂಬರ್ 4ರೊಳಗೆ ತಮ್ಮ ಇರಾನ್ ತೈಲ ಆಮದನ್ನು ಶೂನ್ಯಕ್ಕೆ ತರುವಂತೆ ಅಮೆರಿಕ ಕಟ್ಟಪ್ಪಣೆ ಮಾಡಿರುವುದು ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಜಾನ್ ಬೋಲ್ಟನ್ ಅವರು ಶ್ವೇತ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ “ಇರಾನ್ ತೈಲ ಕುರಿತಂತೆ ನಾನು ಭಾರತೀಯ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇರಾನ್ ಗೆ ಪರ್ಯಾಯವಾಗಿ ಭಾರತಕ್ಕೆ ಪರ್ಯಾಪ್ತ ತೈಲ ಪೂರೈಸುವ ದಿಶೆಯಲ್ಲಿ ನಾವು ಹೆಚ್ಚಿನ ಆದ್ಯತೆಯಲ್ಲಿ ನೆರವಾಗುವುದಾಗಿ ಹೇಳಿದ್ದೇವೆ’ ಎಂದು ಹೇಳಿದರು.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕೆ ದೋವಾಲ್ ಅವರನ್ನು ವಾರದ ಹಿಂದೆ 2 ಪ್ಲಸ್ 2 ನೆಲೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವ ಬೋಲ್ಟನ್ ಅವರು ಭಾರತಕ್ಕೆ ಇರಾನ್ ಪರ್ಯಾಯ ತೈಲ ಪೂರೈಕೆಯ ಭರವಸೆ ನೀಡಿದ್ದಾರೆ.