ನ್ಯೂಯಾರ್ಕ್: ಈ ಬಾರಿಯ ಯುಎಸ್ ಓಪನ್ ವನಿತಾ ವಿಭಾಗ ನೂತನ ಚಾಂಪಿಯನ್ ಒಬ್ಬರನ್ನು ಕಾಣುವ ಕ್ಷಣಗಣನೆಯಲ್ಲಿದೆ. ಆತಿ ಥೇಯ ನಾಡಿನ ಕೊಕೊ ಗಾಫ್ ಮತ್ತು ಬೆಲರೂಸ್‌ನ ಅರಿನಾ ಸಬಲೆಂಕಾ ಪ್ರಶಸ್ತಿ ಸಮರದಲ್ಲಿ ಸೆಣಸಲಿದ್ದಾರೆ. ಯಾರೇ ಗೆದ್ದರೂ ಇಲ್ಲಿ ಮೊದಲ ಸಲ ಕಿರೀಟ ಏರಿಸಿಕೊಳ್ಳಲಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಯುಎಸ್ ಓಪನ್ ಫೈನಲ್ ಎಂಬುದು ವಿಶೇಷ.
ಸೆಮಿಫೈನಲ್ ಹಣಾಹಣಿಯಲ್ಲಿ ಕೊಕೊ ಗಾಫ್ 6 -4, 7-5 ಅಂತರ ದಿಂದ ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕ್ಚೋವಾ ಆಟವನ್ನು ಮುಗಿಸಿದರು. ದ್ವಿತೀಯ ಸೆಮಿಫೈನಲ್‌ನಲ್ಲಿ ಅರಿನಾ ಸಬಲೆಂಕಾ ಅಮೆರಿಕದ ಮ್ಯಾಡಿಸನ್ ಕೀಸ್ ವಿರುದ್ಧ 0-6, 7-6 (7-1), 7-6 (10-5) ಅಂತರದ ಕಠಿನ ಜಯವನ್ನು ಒಲಿಸಿಕೊಂಡರು. ಇಲ್ಲವಾದರೆ ಇದೊಂದು “ಆಲ್ ಅಮೆರಿಕನ್ ಫೈನಲ್’ ಆಗುತ್ತಿತ್ತು.
19 ವರ್ಷದ ಕೊಕೊ ಗಾಫ್ ಈವರೆಗೆ ಗ್ರ್ಯಾನ್‌ಸ್ಲಾಮ್ ಗೆದ್ದವರಲ್ಲ. ಇದು ಅವರ ದ್ವಿತೀಯ ಫೈನಲ್. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್ ತಲುಪಿ ಅಲ್ಲಿ ಇಗಾ ಸ್ವಿಯಾಟೆಕ್‌ಗೆ ಶರಣಾಗಿದ್ದರು.
25 ವರ್ಷದ ಅರಿನಾ ಸಬಲೆಂಕಾ ಅವರಿಗೂ ಇದು 2ನೇ ಗ್ರ್ಯಾನ್‌ಸ್ಲಾಮ್ ಫೈನಲ್. ಆದರೆ ಇದೇ ವರ್ಷಾರಂಭದಲ್ಲಿ ಅವರು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದು ಖಾತೆ ತೆರೆದಿದ್ದಾರೆ. ಅಲ್ಲಿ ಎಲೆನಾ ರಿಬಾಕಿನಾಗೆ ಸೋಲುಣಿಸಿದ್ದರು. ಇದೀಗ ಯುಎಸ್ ಓಪನ್ ಸರದಿ.
ಕೊಕೊ ಗಾಫ್ಗೆ ಹೋಲಿಸಿದರೆ ಅರಿನಾ ಸಬಲೆಂಕಾ ಅವರ ಸೆಮಿಫೈನಲ್ ಗೆಲುವು ಬಹಳ ಕಠಿನವಾಗಿತ್ತು. ಕಳೆದೆರಡು ವರ್ಷ ನ್ಯೂಯಾರ್ಕ್ ಕೂಟದ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಸಬಲೆಂಕಾ ಈ ಸಲವೂ ಇದೇ ಹಾದಿಯಲ್ಲಿದ್ದರು. ಆದರೆ ಅದೃಷ್ಟ ಚೆನ್ನಾಗಿತ್ತು. ಈಗಾಗಲೇ ಅವರು ವಿಶ್ವದ ನಂ.1 ಆಟಗಾರ್ತಿಯೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಈ ರ್‍ಯಾಂಕಿಂಗ್ ಆಧಿಕೃತಗೊಳ್ಳಲಿದೆ.