ವಾಷಿಂಗ್ಟನ್ : ಕಳೆದ ವರ್ಷ ವಾಷಿಂಗ್ಟನ್ ಹೊರವಲಯದ ಕ್ಯಾನ್ಸಾಸ್ ನಗರದ ಬಾರ್ ಒಂದರಲ್ಲಿ ಭಾರತೀಯ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲ ಅವರ ಹತ್ಯೆಗೈದು ಇನ್ನಿಬ್ಬರನ್ನು ಕೊಲ್ಲುವ ಉದ್ದೇಶದಲ್ಲಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದ ಅಮೆರಿಕ ನೌಕಾ ಪಡೆಯ ಹಿರಿಯ ಅಧಿಕಾರಿ, 52ರ ಹರೆಯದ ಆ್ಯಡಮ್ ಪ್ಯೂರಿಂಟನ್ ಅವರಿಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
32ರ ಹರೆಯದ ಭಾರತೀಯ ಟೆಕ್ಕಿ ಕುಚಿಬೋಟ್ಲ ಅವರನ್ನು ಹತ್ಯೆಗೈಯುವಲ್ಲಿ ಪೂರ್ವ ನಿರ್ಧಾರದ ಮೊದಲ ದರ್ಜೆಯ ಕೊಲೆ ಅಪರಾಧ ಮತ್ತು ಕುಚಿಬೋಟ್ಲ ಸ್ನೇಹಿತ ಆಲೋಕ್ ಮದಸಾನಿ ಮತ್ತು ಇನ್ನೊಬ್ಬ ದಾರಿಹೋಕನ ಮೇಲೆ ಗುಂಡೆಸೆದ ಮೊದಲ ದರ್ಜೆಯ ಕೊಲೆ ಯತ್ನದ ಅಪರಾಧವನ್ನು ಎಸಗಿದ್ದಕ್ಕಾಗಿ ಆ್ಯಡಮ್ ಪ್ಯೂರಿಂಟನ್‌ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿತು.
ಕಳೆದ ವರ್ಷ ಫೆ.22ರಂದು ಈ ಕೊಲೆ ಮತ್ತು ಕೊಲೆ ಯತ್ನದ ಅಪರಾಧ ಎಸಗಿದ ಬಳಿಕ ಆರೋಪಿ ಪ್ಯೂರಿಂಟನ್ ಓಲೇತ್ ನಗರದ ಆಸ್ಟಿನ್ ಬಾರ್ ಆ್ಯಂಡ್ ಗ್ರಿಲ್‌ನಿಂದ ಪರಾರಿಯಾಗಿದ್ದ.
ಕುಚಿಬೋಟ್ಲ ಕೊಲೆ ಅಪರಾಧಕ್ಕಾಗಿ ಪ್ಯೂರಿಂಟನ್‌ಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ನೀಡಿತಾದರೆ ಇನ್ನಿಬ್ಬರ ಕೊಲೆ ಯತ್ನದ ಅಪರಾಧಕ್ಕಾಗಿ 165 ತಿಂಗಳ ಪ್ರತ್ಯೇಕ ಜೈಲು ಶಿಕ್ಷೆಯನ್ನು ವಿಧಿಸಿತು.
50 ವರ್ಷಗಳಲ್ಲಿ ಪ್ಯೂರಿಂಟನ್ ಪೆರೋಲ್‌ಗೆ ಅರ್ಹನಾಗುತ್ತಾನೆ; ಆದರೆ ತನ್ನ ಉಳಿದ ಜೀವಮಾನವನ್ನು ಆತ ಪೂರ್ತಿಯಾಗಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.