Advertisement
ಅಷ್ಟಕ್ಕೂ ಅಮೆರಿಕ ಪಡೆಗಳು, ಅಫ್ಘನ್ ನೆಲದಿಂದ ಹಿಂದಕ್ಕೆ ಮರಳಲು ಕಾರಣ, ಅಮೆರಿಕದಲ್ಲಿ ಈ ಹಿಂದಿದ್ದ ಟ್ರಂಪ್ ಸರಕಾರ, ತಾಲಿಬಾನ್ ಉಗ್ರರ ಜತೆಗೆ 2020ರಲ್ಲಿ ಜಾರಿಯಾದ ಶಾಂತಿ ಒಪ್ಪಂದ. ಅಸಲಿಗೆ 2016ರ ನ. 22ರಲ್ಲೇ ಎರಡೂ ಬಣಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತ್ತು. 2020ರ ಫೆ. 29ರಂದು ಎರಡನೇ ಹಂತದ ಒಪ್ಪಂದಕ್ಕೆ ಎರಡೂ ಪಕ್ಷಗಳ ನಾಯಕರು ಸಹಿ ಹಾಕಿದ್ದರು. ಅಂದಿನಿಂದಲೇ ಈ ಒಪ್ಪಂದ ಜಾರಿಯಾಗಿದೆ. ಅದರ ಫಲವಾಗಿಯೇ, ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುತ್ತಿದೆ.
Related Articles
Advertisement
ಪರಿಸ್ಥಿತಿ ಲಾಭ ಪಡೆಯಲಿರುವ ಪಾಕ್: ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ್ದಕ್ಕೆ ಈಗಾಗಲೇ ಎಫ್ಎಟಿಎಫ್ನ ಗ್ರೇ ಲಿಸ್ಟ್‌ನಲ್ಲಿರುವ ಪಾಕಿಸ್ಥಾನ, ಸದ್ಯದ ಮಟ್ಟಿಗೆ ಬ್ಲಾಕ್ ಲಿಸ್ಟ್ ಗೆ ಸೇರುವುದನ್ನು ತಪ್ಪಿಸಿಕೊಳ್ಳಲು ಶತಾಯ ಗತಾಯ ಶ್ರಮಿಸುತ್ತಿದೆ. ಇಂಥ ಸಂದರ್ಭದಲ್ಲಿ ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಬಂದರೆ, ತನ್ನಲ್ಲಿರುವ ಎಲ್ಲ ಉಗ್ರರ ನೆಲೆಗಳನ್ನು ಅಫ್ಘಾನಿಸ್ಥಾನಕ್ಕೆ ರವಾನಿಸಿಬಿಡುವ ಪಾಕಿಸ್ತಾನ, ಜಗತ್ತಿನ ದೃಷ್ಟಿಯಲ್ಲಿ ಹಾಗೂ ಉಗ್ರ ಧನಸಹಾಯ ವಿಚಕ್ಷಣ ಪಡೆಯ (ಎಫ್ಎಟಿಎಫ್) ದೃಷ್ಟಿಯಲ್ಲಿ ತನ್ನನ್ನು ತಾನು ಸ್ವತ್ಛ ಎಂದು ಬಿಂಬಿಸಿಕೊಂಡು ಬಿಡುತ್ತದೆ. ಗ್ರೇ ಲಿಸ್ಟ್ ನಿಂದ ಅದು ಹೊರ ಬಂದರೆ, ಅಮೆರಿಕ ಹಾಗೂ ಮುಂತಾದ ದೇಶಗಳಿಂದ ಆರ್ಥಿಕ ಸವಲತ್ತುಗಳನ್ನು ಪಡೆಯಲು ಇರುವ ನಿರ್ಬಂಧಗಳು ದೂರವಾಗುತ್ತವೆ. ಅಲ್ಲಿಗೆ, ಪಾಕಿಸ್ಥಾನಕ್ಕೆ ಹೇರಳವಾಗಿ ಅಂತಾರಾಷ್ಟ್ರೀಯ ಧನಸಹಾಯ ಹರಿದುಬರುತ್ತದೆ. ಆ ಹಣವನ್ನು ಪಾಕಿಸ್ಥಾನ, ಜಮ್ಮು ಕಾಶ್ಮೀರದಲ್ಲಿ ನಡೆಸುವ ಉಗ್ರ ಕೃತ್ಯಗಳಿಗೆ ಬಳಸುತ್ತದೆ!
ಅಫ್ಘಾನಿಸ್ಥಾನ ನಂಟು ಮಾಯ?: 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಬಂದ ಅನಂತರ, ಭಾರತ-ಅಫ್ಘಾನಿಸ್ಥಾನ ನಡುವೆ ಹೊಸ ಅಧ್ಯಾಯ ಶುರುವಾಗಿದೆ. ಭಾರತದಿಂದ ಅಫ್ಘಾನಿಸ್ಥಾನಕ್ಕೆ ರಫ್ತಾಗುತ್ತಿದ್ದ ಸರಕು ಸಾಮಗ್ರಿಗಳು ಪಾಕಿಸ್ಥಾನದ ಮೂಲಕ ಹಾದು ಹೋಗುವುದನ್ನು ತಪ್ಪಿಸಲು ಭಾರತ ಪರ್ಯಾಯವಾಗಿ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತ್ತು. ಅದಕ್ಕಾಗಿ ಇರಾನ್‌ನಲ್ಲಿರುವ ಚಬಾಹರ್ ಬಂದರನ್ನು ಅಭಿವೃದ್ಧಿಗೊಳಿಸಲು ಭಾರತ ಸರಕಾರ, ಇರಾನ್ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಆ ಯೋಜನೆ ಈಗಾ ಗಲೇ ಮುಕ್ತಾಯದ ಹಂತಕ್ಕೆ ಬಂದಿದ್ದು ಭಾರತ- ಇರಾನ್-ಅಫ್ಘಾನಿಸ್ತಾನ ಮಾರ್ಗವಾಗಿ ಭಾರತದಿಂದ ಅಫ್ಘಾನಿಸ್ತಾನಕ್ಕೆ ರಫ್ತು, ಆಮದು ವ್ಯವಹಾರವೀಗ ಅಲ್ಪ ಪ್ರಮಾಣದಲ್ಲಿ ಸಮುದ್ರ ಮಾರ್ಗದಲ್ಲಿ ಶುರುವಾಗಿದೆ.
ಇದೇ ಜೂನ್-ಜುಲೈ ಹೊತ್ತಿಗೆ ಚಬಾಹರ್ ಬಂದರು ಅಭಿವೃದ್ಧಿ ಪೂರ್ಣಗೊಂಡು, ಭಾರತ-ಅಫ್ಘಾನಿಸ್ಥಾನ ನಡುವಿನ ರಫ್ತು-ಆಮದು ಪೂರ್ಣಪ್ರಮಾಣದಲ್ಲಿ ಶುರುವಾಗಲಿದೆ.
ಆದರೆ ತಾಲಿಬಾನಿಗಳ ಆಡಳಿತ ಬಂದರೆ ಈ ವ್ಯವಹಾರಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಗಳು ದಟ್ಟವಾಗಿದೆ.
ಸ್ನೇಹದ ಕುರುಹುಗಳಿಗೂ ಧಕ್ಕೆ?: ಭಾರತ- ಅಫ್ಘಾನಿ ಸ್ತಾನದ ಸ್ನೇಹ-ಸಂಬಂಧ ಇಂದು ನಿನ್ನೆಯದ್ದಲ್ಲ. 2010 ರವರೆಗೆ ಭಾರತ, ಅಫ್ಘಾನಿಸ್ಥಾನದಲ್ಲಿ ಮೂಲಸೌಕರ್ಯಕ್ಕಾಗಿ 70,000 ಕೋಟಿ ರೂ.ಗಳನ್ನು ವ್ಯಯಿಸಿತ್ತು. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಎರಡೂ ದೇಶಗಳ ನಡುವೆ ಹೊಸ ಅಧ್ಯಾಯ ಶುರುವಾಯಿತು. ಆ ದೇಶದಲ್ಲಿ ಸಂಸತ್ ಭವನ, ಅಣೆಕಟ್ಟುಗಳು, ಜಲವಿದ್ಯುದಾ ಗಾರಗಳನ್ನು ಭಾರತ ಕಟ್ಟಿಕೊಟ್ಟಿತು. ಕಳೆದ ವರ್ಷವಷ್ಟೇ, ಅಫ್ಘಾನಿಸ್ಥಾನ ಸರಕಾರ ಕೈಗೊಳ್ಳುವ 100ಕ್ಕೂ ಹೆಚ್ಚು ಯೋಜನೆಗಳಿಗೆ ಅಂದಾಜು 5.9 ಲಕ್ಷ ಕೋಟಿ ರೂ.ಗಳನ್ನು ನೀಡುವುದಾಗಿ ಭಾರತ ಘೋಷಿಸಿದೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದರೆ, ಇವೆಲ್ಲದಕ್ಕೂ ಬ್ರೇಕ್ ಬೀಳಲಿದೆ.
ಇದಲ್ಲದೆ, ಭಾರತ-ಅಫ್ಘನ್ ನಡುವಿನ ಬಾಂಧವ್ಯದ ಕೊಂಡಿ ಕಳಚಲಿದೆ. ಭಾರತದ ಉಡುಗೊರೆಗಳಾದ ಆ ಕುರುಹುಗಳನ್ನು ನಾಶ ಮಾಡಬಹುದು. ಈಗಾಗಲೇ, ಆ ಕುರುಹುಗಳ ಮೇಲೆ ತಾಲಿಬಾನಿ ಬೆಂಬಲಿತ “ಹಕ್ಕಾನಿ’ ಗುಂಪಿನ ಉಗ್ರರು ಕೆಲವಾರು ಬಾರಿ ದಾಳಿ ನಡೆಸಿದ್ದಾರೆ. ಈ ಹಕ್ಕಾನಿ ಗುಂಪು ಪಾಕಿಸ್ಥಾನದ ಐಎಸ್‌ಐ ಜತೆಗೆ ಸತತವಾಗಿ ನಂಟು ಹೊಂದಿದೆ. ಮುಂದೆ ತಾಲಿಬಾನಿಗಳದ್ದೇ ಸರಕಾರ ಬಂದಾಗ ಆ ಸೌಕರ್ಯಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ.
ರಾಜತಾಂತ್ರಿಕ ಕಿರಿಕಿರಿ: ಅಫ್ಘಾನಿಸ್ಥಾನದಲ್ಲಿ ಈವರೆಗೆ ಭಾರತ ಮಾಡಿರುವ ಎಲ್ಲ ಹೂಡಿಕೆಗಳನ್ನೂ ರಕ್ಷಣೆ ಮಾಡಿ ಕೊಳ್ಳುವ ಅನಿವಾರ್ಯ ಒದಗಿಬರುತ್ತದೆ. ಅದಕ್ಕಾಗಿ, ಹೊಸ ತಾಲಿಬಾನಿ ಸರಕಾರದೊಂದಿಗೆ ಭಾರತ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಪಾಕಿಸ್ಥಾನ, ಚೀನ ತಡೆಯೊಡ್ಡಬಹುದು. ಹಾಗಾಗಿ, ಅವರೆಡನ್ನು ಭಾರತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.ಮತ್ತೂಂದೆಡೆ, ಭಾರತದ ಅಸಮಾಧಾನಕ್ಕೆ ಕಾರಣ ವಾಗಿರುವ ಚೀನಾದ ಎಕನಾಮಿಕ್ ಕಾರಿಡಾರ್ ಯೋಜನೆಯು (ಸಿಲ್ಕ್ ರೂಟ್) ಮೂಲ ಉದ್ದೇಶದಂತೆ ಅಫ್ಘಾನಿ ಸ್ಥಾನದವರೆಗೆ ವಿಸ್ತರಿಸಲು ತಾಲಿಬಾನಿಗಳು ಚೀನಕ್ಕೆ ಸಹಾಯ ಮಾಡಲಿದ್ದಾರೆ. – ಚೇತನ್ ಒ. ಆರ್