Advertisement

ಮಳೆ ತಡೆಯಲು ಊರಿಗೇ ಚಪ್ಪರ!

06:30 AM Feb 22, 2018 | Team Udayavani |

ಒಂದೂರಲ್ಲಿ ರಾಜನಿದ್ದ. ಆವನ ಆಳ್ವಿಕೆಯಲ್ಲಿ ಜನರು ಬಹಳ ಸಂತೋಷವಾಗಿದ್ದರು, ರಾಜ್ಯ ಸುಭಿಕ್ಷವಾಗಿತ್ತು. ಒಂದು ಸಲ ರಾಜನಿಗೆ ದೂರದ ತೀರ್ಥಕ್ಷೇತ್ರ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ ಮನಸ್ಸಾಯಿತು. ಪಾದಯಾತ್ರೆಯ ಮೂಲಕವಾಗಿ ಪ್ರಯಾಣಿಸಲು ತೀರ್ಮಾನಿಸಿದ. ದಾರಿ ಮಧ್ಯ ರಾಜನು ಪ್ರಜೆಗಳ ಕಷ್ಟ ಸುಖವನ್ನು ವಿಚಾರಿಸಿ ಅವರ ಸ್ಥಿತಿಗತಿಯನ್ನು ತಿಳಿಯಲು ಉತ್ಸುಕನಾಗಿದ್ದ.

Advertisement

ರಾಜನ ಲೋಕಸಂಚಾರದ ವಿಚಾರ ತಿಳಿದ ಪ್ರಜೆಗಳು ತುಂಬಾ ಸಂತಸಗೊಂಡರು. ರಾಜನನ್ನು ಎದುರುಗೊಳ್ಳಲು ಪ್ರಜೆಗಳು ಉತ್ಸಾಹಿತರಾದರು. ಅಂದುಕೊಂಡಂತೆಯೇ ರಾಜನನ್ನು ಅವನ ಪ್ರಜೆಗಳು ಬಾರಿ ಸಂಭ್ರಮ ಸಡಗರದಿಂದ ಸ್ವಾಗತಿಸಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿದ ರಾಜ ತನ್ನ ಜನರು ಸುಖ ಸಂತೋಷವಾಗಿರುವುದನ್ನು ಕಂಡು ಸಂತುಷ್ಟನಾದ. ರಾಜ್ಯ ಸಂಪದ್ಭರಿತವಾಗಿರುವುದನ್ನು ಕಂಡು ರಾಜನ ಮನಸ್ಸು ನಲಿಯಿತು.

ದೀರ್ಘ‌ಪ್ರಯಾಣದಿಂದಾಗಿ ಅವನ ದೇಹ ದಣಿದಿತ್ತು. ವಿಶ್ರಾಂತಿ ತೆಗೆದುಕೊಂಡರೆ ಎಲ್ಲವೂ ಸರಿಹೋಗುತ್ತೆ ಎಂದು ರಾಜ ಅಂದುಕೊಂಡಿದ್ದು ಸುಳ್ಳಾಯಿತು. ಆವಾಗ ಅವನಿಗೆ ತನ್ನ ಕಾಲುಗಳು ನೋಯುತ್ತಿರುವುದು ಗಮನಕ್ಕೆ ಬಂದಿತು. ಪಾದವನ್ನು ನೋಡಿದರೆ ಕೆಂಪಾಗಿ ಬೊಬ್ಬೆಗಳು ಎದ್ದಿದ್ದವು.  ತಾನಾದರೂ ಮರದ ಪಾದರಕ್ಷೆಗಳನ್ನು ಧರಿಸುತ್ತೇನೆ, ಆದರೆ ಪ್ರಜೆಗಳು ಬರಿಗಾಲಲ್ಲಿ ನಡೆಯುತ್ತಾರೆ,

ಅವರ ಪಾಡೇನಾಗಿರಬೇಡ ಎಂದು ಊಹಿಸಿ ರಾಜ ದುಃಖೀತನಾದ. ಆವಾಗ ತನ್ನ ರಾಜ್ಯದಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿಲ್ಲ ಅನ್ನೋದು ಅರಿವಿಗೆ ಬಂತು. ಅದೇ ಒಂದು ಕೊರಗಾಯಿತು. ಹೇಗಾದರೂ ಮಾಡಿ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ತಜ್ಞರ ತಂಡವನ್ನು ಕಟ್ಟಿದ. ರಸ್ತೆಗಳನ್ನು ಮೃದುವಾಗಿ ತಯಾರಿಸಬೇಕೆಂದು ಆಜ್ಞಾಪಿಸಿದ. ಅದಕ್ಕಾಗಿ ಪ್ರಾಣಿಗಳ ಚರ್ಮವನ್ನು ಬಳಸಿ ರಸ್ತೆ ತಯಾರಿಸಬೇಕೆಂದು ಸಲಹೆಯನ್ನೂ ನೀಡಿದ.

ತಜ್ಞರು ಅದು ಕಷ್ಟದ ಕೆಲಸವೆಂದು ಹೇಳಿದಾಗ ರಾಜ ಕೋಪಗೊಂಡು ಎಷ್ಟು ಖರ್ಚಾದರೂ ಪರವಾಗಿಲ್ಲ, ತಿಂಗಳುಗಳಲ್ಲಿ ಚರ್ಮದ ರಸ್ತೆಗಳು ರಾಜ್ಯದಲ್ಲಿ ತಯಾರಾಗಬೇಕೆಂದು ಕರಾರು ವಿಧಿಸಿದ. ಇದನ್ನು ಮೀರಿದರೆ ಶಿಕ್ಷೆ ನೀಡುವುದಾಗಿ ಎಚ್ಚರಿಕೆಯನ್ನೂ ನೀಡಿದ. ಮಂತ್ರಿಗೆ ಚಿಂತೆಯಾಯಿತು. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಲಕ್ಷಾಂತರ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು.

Advertisement

ಮತ್ತು ರಾಜ್ಯದ ಬೊಕ್ಕಸವೆಲ್ಲ ರಸ್ತೆ ತಯಾರಿಗೆ ಸುರಿದುಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಸುಭಿಕ್ಷವಾಗಿರುವ ರಾಜ್ಯ ದರಿದ್ರವಾಗುವುದು ಖಂಡಿತ ಎನ್ನುವುದು ಮಂತ್ರಿಯ ಚಿಂತೆಗೆ ಕಾರಣವಾಗಿತ್ತು. ಅದಕ್ಕೇ ಹೇಗಾದರೂ ಮಾಡಿ ರಾಜನ ಮನವೊಲಿಸಬೇಕೆಂದು ನಿರ್ಧರಿಸಿದ. ಆದರೆ ರಾಜ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಮಂತ್ರಿ ಒಂದು ಉಪಾಯವನ್ನು ಹೂಡಿದ. 

ಒಂದು ದಿನ ರಾಜ ಮತ್ತು ಮಂತ್ರಿ ವಾಯುವಿಹಾರಕ್ಕೆ ಹೊರಟಿದ್ದರು. ಅದೇ ಸಮಯಕ್ಕೆ ಜೋರಾಗಿ ಮಳೆ ಬಂದಿತು. ಮಂತ್ರಿ ಸೇವಕರಲ್ಲಿ ರಾಜ ಹೋಗುವ ದಾರಿಯಿಡೀ ಚಪ್ಪರವನ್ನು ತಯಾರಿಸುವಂತೆ ಆಜ್ಞಾಪಿಸಿದ. ರಾಜ ನಗುತ್ತಾ “ಅಲ್ಲಾ ಮಂತ್ರಿವರ್ಯರೇ ನಿಮ್ಮನ್ನು ಬುದ್ಧಿವಂತನೆಂದು ಅಂದುಕೊಂಡಿದ್ದೆ. ನಾವು ಹೋಗುವ ದಾರಿಯಲ್ಲಿ ಚಪ್ಪರ ಕಟ್ಟುವುದು ವೃಥಾ ಖರ್ಚಲ್ಲವೆ? ಊರಿಗೇ ಚಪ್ಪರ ಕಟ್ಟುವುದಕ್ಕೆ ಬದಲಾಗಿ ನಾವು ಚತ್ರಿಯನ್ನು ಹಿಡಿದುಕೊಂಡು ಹೋಗಬಹುದಲ್ಲವೆ?’ ಎಂದು ಹೇಳಿದ.

ಮಂತ್ರಿಗೂ ಇದೇ ಬೇಕಿತ್ತು. “ರಾಜ ಸರಿಯಾಗಿ ಹೇಳಿದಿರಿ ನೀವು. ಆದೇ ರೀತಿ ರಾಜ್ಯವಿಡೀ ಚರ್ಮದ ರಸ್ತೆಯನ್ನು ಮಾಡಿಸುವುದಕ್ಕಿಂತ ಚರ್ಮದ ಪಾದರಕ್ಷೆಯನ್ನು ಧರಿಸಿ ಓಡಾಡುವುದು ಒಳ್ಳೆಯದಲ್ಲವೆ?’ ಎಂದು ಪ್ರಶ್ನಿಸಿದ. ರಾಜನಿಗೆ ಮಂತ್ರಿಯ ಉಪಾಯ ಗೊತ್ತಾಯಿತು. ಮಂತ್ರಿಯ ಜಾಣತನಕ್ಕೆ ತಲೆದೂಗಿದ. ಕೂಡಲೆ ತಜ್ಞರ ತಂಡಕ್ಕೆ ಚರ್ಮದ ರಸ್ತೆಗೆ ಬದಲಾಗಿ ಪಾದರಕ್ಷೆಗಳನ್ನು ತಯಾರಿಸಿ ಪ್ರಜೆಗಳಿಗೆ ಹಂಚುವಂತೆ ಆಜ್ಞಾಪಿಸಿದ.

* ಸುಮನ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next