Advertisement

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

01:35 PM Apr 30, 2024 | Team Udayavani |

ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಂಸದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರೇ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಬೇಕು ಹೊರತು ಬಿಜೆಪಿ ನಾಯಕರಲ್ಲ. ದೂರು ನೀಡಿರುವ ಸಂತ್ರಸ್ತೆಯ ಬಗ್ಗೆ ಅವರ ಕುಟುಂಬದವರು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರು ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೇ ಅವರ ಪರವಾಗಿ ಪ್ರಚಾರ ಮಾಡಿದ್ದರು. ಯುವಕನಿಗೆ ಮತ ನೀಡಿ ಗೆಲ್ಲಿಸುವಂತೆ ಮತಯಾಚನೆ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಈ ದೇಶದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಒಂದು ವೇಳೆ ನಿಜವಾಗಿದ್ದರೆ ಕಾನೂನಿನ ಪ್ರಕಾರ ಕ್ರಮ ಆಗಲಿ ಎಂದರು.

ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆ. ಎಸ್ಐಟಿ ತನಿಖಾ ತಂಡವು ಮೊದಲು ಪೆನ್ ಡ್ರೈವ್ಗಳನ್ನು ಸೀಸ್ ಮಾಡಬೇಕು. ಇದು ಎಲೆಕ್ಟ್ರಾನಿಕ್ ಆಗಿರುವುದರಿಂದ ಮೊದಲು ಸತ್ಯಾಸತ್ಯತೆ ಕುರಿತು ಪರಿಶೀಲನೆಯಾಗಬೇಕು. ಪ್ರಜ್ವಲ್ ರೇವಣ್ಣ ಅವರ ಕುರಿತು ಅವರ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ತನಿಖೆಯ ನಂತರದಲ್ಲಿ ಈ ಕುರಿತು ಬಿಜೆಪಿ ತನ್ನ ನಿಲುವನ್ನು ಪ್ರಕಟಿಸಲಿದೆ. ದೂರು ನೀಡಿದ ಸಂತ್ರಸ್ತೆಯ ಬಗ್ಗೆ ಹಲವು ಆರೋಪಗಳು ಕೇಳಿ ಬರುತ್ತಿವೆ ಎಂದರು.

ಯುಪಿಎ ಸರ್ಕಾರ 10 ವರ್ಷದಲ್ಲಿ ರಾಜ್ಯಕ್ಕೆ ನೀಡಿದ್ದು ಬರೇ 4571 ಕೋಟಿ:
ಹುಬ್ಬಳ್ಳಿ : ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಯುಪಿಎ ಸರ್ಕಾರ 10 ವರ್ಷದಲ್ಲಿ ರಾಜ್ಯಕ್ಕೆ 4571 ಕೋಟಿ ರೂಪಾಯಿ ನೀಡಿದೆ. ಆದರೆ ನಮ್ಮ ಬಿಜೆಪಿ ಸರಕಾರ ಕಳೆದ ಹತ್ತು ವರ್ಷದಲ್ಲಿ 15,920 ಕೋಟಿ ರೂಪಾಯಿ ನೀಡಿದೆ. ಯುಪಿಎ ಸರಕಾರ ರಾಜ್ಯಕ್ಕೆ ಚಿಪ್ಪು ನೀಡಿದೆ. ಇದು ಕಾಂಗ್ರೆಸ್ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇಲ್ಲಿನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿ ಸರ್ಕಾರದ ಅವಧಿಯಲ್ಲಿ 2005-14 ರವರೆಗೆ ರಾಜ್ಯ ಸರ್ಕಾರ ಕೇಳಿದ್ದು 44,838 ಕೋಟಿ ರೂಪಾಯಿ. ಆದರೆ ಅಂದಿನ ಯುಪಿಎ ಕೇಂದ್ರ ಸರ್ಕಾರ ನೀಡಿದ್ದು ಕೇವಲ 4571 ಕೋಟಿ ರೂಪಾಯಿ ಮಾತ್ರ. ಅಂದರೆ ಶೇ.10.20 ಮಾತ್ರ. ಅದೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ 2014-24 ರವರೆಗೆ ರಾಜ್ಯ ಸರ್ಕಾರ 25,591 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಿತ್ತು. ಇದರಲ್ಲಿ 15,920 ಕೋಟಿ ರೂಪಾಯಿ ಮಂಜೂರು ಮಾಡಿದೆ. ಅಂದರೆ ಶೇ.62.21 ರಷ್ಟು ನೀಡಿದೆ. ಇಷ್ಟೆಲ್ಲ ಅಂಕಿ ಅಂಶ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಅಂದಿನ ಯುಪಿಎ ಸರ್ಕಾರವೇ ಕರ್ನಾಟಕ ರಾಜ್ಯಕ್ಕೆ ಚಿಪ್ಪು ನೀಡಿದೆ ಎಂದು ದೂರಿದರು.

Advertisement

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಹೇಳಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಇದು ವಿಳಂಬವಾಗಿತ್ತು. ಈ ಕುರಿತು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೋರಿದ್ದರು. ಆದರೆ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೋರ್ಟ್ ಮೆಟ್ಟಿಲೇರಿತ್ತು. ಇವರು ಕೋರ್ಟಿಗೆ ಹೋದ ಕಾರಣಕ್ಕೆ ಬರ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರದ ಪ್ರಕ್ರಿಯೆಯಂತೆ ರಾಜ್ಯಕ್ಕೆ ಪರಿಹಾರ ಬಂದಿದೆ. ಕರ್ನಾಟಕ ಒಂದಕ್ಕೆ ಮಾತ್ರ ಪರಿಹಾರ ಬಿಡುಗಡೆ ಮಾಡಿದ್ದರೆ ಇದು ಕೋರ್ಟಿನ ಆದೇಶದಂತೆ ನೀಡಿದ್ದಾರೆ ಎನ್ನಬಹುದಿತ್ತು. ಕರ್ನಾಟಕದ ಜೊತೆಗೆ ಇತರೆ ಎರಡು-ಮೂರು ರಾಜ್ಯಗಳಿಗೂ ಪರಿಹಾರ ವಿತರಿಸಲಾಗಿದೆ ಎಂದರು.

ಇದನ್ನೂ ಓದಿ: 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next