Advertisement

Rain ಕರಾವಳಿಯ ಹಲವೆಡೆ ಗುಡುಗು ಸಹಿತ ಮಳೆ; ತಂಪಾದ ಇಳೆ

12:56 AM Apr 14, 2024 | Team Udayavani |

ಮಂಗಳೂರು/ಉಡುಪಿ: ಕರಾವಳಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಶನಿವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement

ಮಂಗಳೂರು ನಗರದ ಕೆಲವು ಕಡೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹನಿ ಮಳೆಯಾಗಿತ್ತು. ಉಳಿದಂತೆ ನಗರದಲ್ಲಿ ಮಳೆ ಸುರಿದಿಲ್ಲ. ಬೆಳ್ತಂಗಡಿ, ಕನ್ಯಾಡಿ, ಸವಣಾಲು, ಉಜಿರೆ, ಮುಂಡಾಜೆ, ಗೇರುಕಟ್ಟೆ, ನಿಡ್ಲೆ, ಬಂಗಾಡಿ, ಬಂದಾರು, ಮೈರೋಳ್ತಡ್ಕ, ಕೊಕ್ಕಡ, ಮಡಂತ್ಯಾರು, ಪುತ್ತೂರು, ಉಪ್ಪಿನಂಗಡಿ, ಇಳಂತಿಲ, ಸುಬ್ರಹ್ಮಣ್ಯ ಸಹಿತ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಹೆಬ್ರಿ: ಗುಡುಗು ಸಹಿತ ಮಳೆ
ಉಡುಪಿ ಜಿಲ್ಲೆಯ ಬಜಗೋಳಿ, ಮಾಳ, ಹೊಸ್ಮಾರು ಪರಿಸರದಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗಿದೆ. ಹೆಬ್ರಿ ಸುತ್ತಮುತ್ತ ಶನಿವಾರ ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಸಂಜೆ 6.30ರಿಂದ ಸುಮಾರು 1 ಗಂಟೆ ಕಾಲ ಗುಡುಗು ಸಹಿತ ಮಳೆ ಸುರಿಯಿತು.

ಕುಂದಾಪುರದ ಕೋಟೇಶ್ವರ, ಕಾಳಾವರ, ಬಿದ್ಕಲ್‌ ಕಟ್ಟೆ, ಮೊಳಹಳ್ಳಿ, ಹಾಲಾಡಿ, ಗೋಳಿಯಂಗಡಿ, ಮಡಾಮಕ್ಕಿ ಸುತ್ತಮುತ್ತಲಿನ ಪರಿಸರದಲ್ಲಿ ಗಾಳಿ, ಮಿಂಚು ಸಹಿತ ಉತ್ತಮ ಮಳೆಯಾಗಿದ್ದು, ಉಡುಪಿ, ಮಣಿಪಾಲ ಸುತ್ತಮುತ್ತ ಮೋಡಕವಿದ ವಾತಾವರಣದ ನಡುವೆ ಹನಿಹನಿ ಮಳೆಯಾಗಿದೆ.

ಪಶ್ಚಿಮಘಟ್ಟದ ತಪ್ಪಲು ಸೇರಿದಂತೆ ಕರಾವಳಿ ಭಾಗಗಳಲ್ಲಿಯೂ ಉತ್ತಮ ವರ್ಷ ಧಾರೆಯಾಗಿದೆ. ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿ ಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು ಪರಿಸರದಲ್ಲಿ ಮಳೆಯಾಗಿದೆ.

Advertisement

ಸುಬ್ರಹ್ಮಣ್ಯದಲ್ಲಿ ಮಳೆ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದ ವಿವಿಧೆಡೆ ಶನಿವಾರ ಸಂಜೆ ಅರ್ಧ ಗಂಟೆ ಮಳೆಯಾಗಿದೆ. ಸುಬ್ರಹ್ಮಣ್ಯ, ಬಿಳಿನೆಲೆ, ನೆಟ್ಟಣ, ಕೊಂಬಾರು ಪರಿಸರದ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕಡಬ ಪರಿಸರದ ಕೆಲವೆಡೆ ಗುಡುಗು ಸಹಿತ ಹನಿ ಮಳೆಯಾಗಿದೆ.

ಬೆಳ್ತಂಗಡಿ: ಹೆದ್ದಾರಿ ಕೆಸರುಮಯ
ಬೆಳ್ತಂಗಡಿ: ಶನಿವಾರ ಸಂಜೆ ಮಳೆಯಾದ ಪರಿಣಾಮ ರಾ. ಹೆ. ಕಾಮಗಾರಿ ಬಳಿ ಕೆಲವೆಡೆ ಕೆಸರುಮಯವಾಗಿದೆ. ಅಳದಂಗಡಿ, ನಡ, ಮಲವಂತಿಗೆ ಮೊದಲಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. 4 ಕಿ.ಮೀ. ರಾ.ಹೆ. ಸಂಪೂರ್ಣ ಅಗೆದು ಹಾಕಲಾಗಿದ್ದು ರಸ್ತೆ ಜಾರುತ್ತಿದ್ದು ವಾಹನ ಸವಾರರು ಪರದಾಡಿದರು.

ಇಂದು ಸಾಧಾರಣ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆಯು ಎ. 14ರಂದು ಯಾವುದೇ ಅಲರ್ಟ ಘೋಷಿಸಿಲ್ಲ. ಬದಲಾಗಿ ಸಾಧಾರಣ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಇದರಿಂದಾಗಿ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next