Advertisement

Heavy rain; ಉಡುಪಿ: ಧಾರಾಕಾರ ಮಳೆ, ಹಲವೆಡೆ ಹಾನಿ

01:53 AM Apr 21, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ, ಶನಿವಾರ ಮುಂಜಾನೆ ಭಾರೀ ಮಳೆಯಾಗಿದೆ. ಉಡುಪಿ ನಗರ ಸಹಿತ ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಸಿದ್ದಾಪುರ, ಹೆಬ್ರಿ, ಪಡುಬಿದ್ರಿ, ಬೆಳ್ಮಣ್‌, ಮಲ್ಪೆ ಸುತ್ತಮುತ್ತ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

Advertisement

ಮಧ್ಯಾಹ್ನದ ವರೆಗೂ ಮೋಡ ಕವಿದ ವಾತಾವರಣವಿತ್ತು.ಜಿಲ್ಲೆಯಲ್ಲಿ ಕಾಪು, ಬ್ರಹ್ಮಾವರ ಭಾಗದಲ್ಲಿ ಹೆಚ್ಚು ಮಳೆ ಸುರಿದಿದ್ದು, ಗಾಳಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೇ ಮನೆಗಳಿಗೆ ಹಾನಿ ಸಂಭವಿಸಿದೆ. 190ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಹಲವೆಡೆ ವಿದ್ಯುತ್‌ ಸಂಪರ್ಕ ವ್ಯತ್ಯಯಗೊಂಡು ಜನರು ತೊಂದರೆ ಅನುಭವಿಸಿದರು. ನಗರದ ಕಾಡಬೆಟ್ಟುವಿನಲ್ಲಿ ನಡೆಯುತ್ತಿದ್ದ ಚರಂಡಿ ಕಾಮಗಾರಿಗೆ ಹಾನಿಯಾಗಿದ್ದು, ಮಣಿಪಾಲ, ಉಡುಪಿಯಲ್ಲಿ ಕೆಲವು ಕಡೆಗಳಲ್ಲಿ ಚರಂಡಿಗಳಲ್ಲಿ ಮಳೆ ನೀರು ನಿಂತು ರಸ್ತೆಯ ಮೇಲೆ ಹರಿದಿದೆ. ನಗರದ ದಿನವಹಿ ಮಾರುಕಟ್ಟೆ ಎದುರು ಬೃಹತ್‌ ಮರವೊಂದು ನೆಲಕ್ಕುರುಳಿದಿದ್ದು, ಕಾರು ಮತ್ತೆ ತರಕಾರಿ ಅಂಗಡಿಗೆ ಹಾನಿ ಸಂಭವಿಸಿದೆ.

40. ಮೀ. ಮೀ ಸರಾಸರಿ ಮಳೆ
ಜಿಲ್ಲೆಯಲ್ಲಿ 40 ಮೀ. ಮೀ. ಸರಾಸರಿ ಮಳೆಯಾಗಿದೆ. ಕಾರ್ಕಳ 32.2, ಕುಂದಾಪುರ 51.3, ಉಡುಪಿ 35.3 , ಬೈಂದೂರು 19.9, ಬ್ರಹ್ಮಾವರ 43.8, ಕಾಪು 79.4, ಹೆಬ್ರಿ 38.8 ಮಿ. ಮೀ. ಮಳೆ ಸುರಿದಿದೆ.

ಮೆಸ್ಕಾಂಗೆ 32 ಲಕ್ಷ ರೂ. ಹಾನಿ
ಗಾಳಿ ಮಳೆಯಿಂದ ಜಿಲ್ಲೆಯಲ್ಲಿ ಮೆಸ್ಕಾಂಗೆ 32 ಲಕ್ಷ ರೂ. ಹಾನಿ ಸಂಭವಿಸಿದ್ದು, 192 ವಿದ್ಯುತ್‌ ಕಂಬಗಳು, 4.12 ಕಿ. ಮೀ. ವಿದ್ಯುತ್‌ ತಂತಿ ಲೈನ್‌ ಹಾನಿಗೊಂಡಿದೆ. ಎಲ್ಲ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹಾನಿಗೊಳಗಾದ ಕಡೆಗಳಲ್ಲಿ ಪ್ರತ್ಯೇಕ ಮಾರ್ಗದಿಂದ ವಿದ್ಯುತ್‌ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ದಿನೇಶ್‌ ಉಪಾಧ್ಯ ತಿಳಿಸಿದ್ದಾರೆ.

ಗಾಳಿ ಮಳೆಯಬ್ಬರಕ್ಕೆ ಅಡಿಕೆ ಮರಗಳಿಗೆ ಹಾನಿ
ಕುಂದಾಪುರ: ಶನಿವಾರ ಬೆಳಗ್ಗಿನ ಜಾವದ ಭಾರೀ ಗಾಳಿ ಸಹಿತ ಮಳೆಗೆ ಕುಂದಾಪುರ ಭಾಗದ ವಿವಿಧ ಗ್ರಾಮಗಳ ಸಾವಿರಾರು ಅಡಿಕೆ ಮರಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

Advertisement

ಮೊಳಹಳ್ಳಿ ಗ್ರಾಮದ ವಿವಿಧೆಡೆಗಳ ಅಂದಾಜು 50 ರೈತರ 5 ಸಾವಿರ ಅಡಿಕೆ ಮರಗಳು, ಅಂಪಾರು ಗ್ರಾಮದ 35 ರೈತರ 500-600 ಅಡಿಕೆ ಮರಗಳಿಗೆ ಹಾನಿಯಾಗಿದ್ದು, ಕಾವ್ರಾಡಿ, ವಂಡ್ಸೆ, ನೇರಳಕಟ್ಟೆ ಭಾಗದಲ್ಲೂ ನೂರಾರು ಅಡಿಕೆ ಮರಗಳಿಗೆ ಹಾನಿಯಾಗಿದ್ದು, ಫಸಲು ಬರುವ ಅಡಿಕೆ ಮರಗಳು ಧರೆಗೆ ಉರುಳಿವೆ. ಗಾಳಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕುಂದಾ ಪುರದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.

ಮನೆಗಳಿಗೆ ಹಾನಿ
ತೆಕ್ಕಟ್ಟೆ: ಮೊಳಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಮರತೂರು, ಬಿಟ್ಟೇರಿ ಗುಡ್ಡ, ಕೈಲ್ಕೆರೆ, ಬೆದ್ರಾಡಿ ಸೇರಿದಂತೆ 30 ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದಲ್ಲಿ ಬೆಳೆದು ನಿಂತ ಸಾವಿರಾರು ಅಡಿಕೆ ಮರ, ಬಾಳೆ ತೋಟ, 30ಕ್ಕೂ ಅಧಿಕ ಮನೆ ಹಾಗೂ 70ಕ್ಕೂ ಅಧಿಕ ವಿದ್ಯುತ್‌ ಕಂಬಗಳು ತುಂಡಾಗಿವೆ.

ಉಪನ್ಯಾಸಕ ಮರತೂರು ಶಾಂತಾ ರಾಮ ಶೆಟ್ಟಿ ಅವರ 300ಕ್ಕೂ ಅಧಿಕ ಅಡಿಕೆ ಮರಗಳು, ಹಲಸು ಹಾಗೂ ಬಾಳೆ ಗಿಡಗಳಿಗೆ ಹಾನಿಯಾಗಿದೆ. ಉದಯ ಕುಮಾರ್‌ ಶೆಟ್ಟಿ ಅವರ 200ಕ್ಕೂ ಅಧಿಕ ಅಡಿಕೆ ಮರಗಳು ಧರೆಗುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಇನ್ನಿತರ ಹಲವು ಮನೆಗಳ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಹಾನಿಯಾಗಿದೆ.

ದೇವೇಂದ್ರ ಮಡಿವಾಳ ಅವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶಕ್ಕಾಗಿ ಹಾಕಲಾದ ಪೆಂಡಾ ಲ್‌ಗ‌ಳು ಹಾರಿಹೋಗಿವೆ.

ಮನೆಯ ಮೇಲೆ ಬಿದ್ದ ತೆಂಗಿನಮರ
ಇಲ್ಲಿನ ಮರತೂರು ನಿವಾಸಿ ಶಾಮ ರಾಯ ಆಚಾರ್ಯ ಅವರ ಮನೆಯ ಮೇಲೆ ಎರಡು ತೆಂಗಿನ ಮರಗಳು ತುಂಡಾಗಿ ಬಿದ್ದ ಪರಿ ಣಾಮ ಕಾರಿಗೆ ಹಾನಿಯಾಗಿದ್ದು, ಪ್ರಾಣಹಾನಿ ಸಂಭವಿ ಸಲಿಲ್ಲ. ಚಂದ್ರಯ್ಯ ಆಚಾರ್ಯ ಹಾಗೂ ದಿನೇಶ್‌ ಆಚಾರ್ಯ ಅವರ ಮನೆಯ ಮೇಲೆ ಮರ ಬಿದ್ದು ಹಾನಿ ಯಾಗಿದೆ. ರತ್ನಾಕರ ಶೆಟ್ಟಿ ಅವರ ಮನೆಯ ಮುಂಭಾಗದ ಶೀಟ್‌ಗೆ ಹಾನಿಯಾಗಿದೆ, ದ್ಯಾವಲಬೆಟ್ಟಿನ ಸಾಧಮ್ಮ ಶೆಟ್ಟಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಬಿಟ್ಟೇರಿಗುಡ್ಡೆಯ ಗಿರಿಜಾ ಪೂಜಾರಿ ಅವರ ಮನೆಯ ಮೇಲೆ ಮರ ಬಿದ್ದು ಸಿಮೆಂಟ್‌ ಶೀಟ್‌ಗೆ ಹಾನಿಯಾಗಿದೆ.

ಹಾರಿಹೋದ ಹೆಂಚು
ಇಲ್ಲಿನ ಕೈಲ್ಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿಯ ಹೆಂಚು ಹಾಗೂ ಅಡುಗೆ ಮನೆ, ಶೌಚಾಲಯದ ಶೀಟ್‌ ಹಾರಿಹೋಗಿ ಹಾನಿಯಾಗಿದೆ.

ವಿದ್ಯುತ್‌ ಕಂಬಗಳು ಧರಾಶಾಹಿ
ಭೀಕರ ಸುಂಟರ ಗಾಳಿಯ ಪರಿಣಾಮ ಗ್ರಾಮೀಣ ಭಾಗದ ವಿದ್ಯುತ್‌ ಸಂಪರ್ಕ ತಂತಿಗಳ ಮೇಲೆ ಬೃಹತ್‌ ಗಾತ್ರದ ಮರಗಳು ಬಿದ್ದ ಪರಿಣಾಮ 50ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಧರಾಶಾಹಿಯಾಗಿದ್ದು, ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ಘಟನೆ ನಡೆದ ಸ್ಥಳಕ್ಕೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ತಹಶೀಲ್ದಾರ್‌ ಶೋಭಾ ಲಕ್ಷ್ಮೀ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next