ಉಪ್ಪುಂದ: ಮದುಮಗ ಓಡಿ ಹೋದ ಕಾರಣ ಸೋಮವಾರ (ಆ. 19) ನಡೆಯಬೇಕಿದ್ದ ಮದುವೆ ರದ್ದಾದ ಘಟನೆ ಸಂಭವಿಸಿದೆ.
ಅಳಿವೆಕೋಡಿ ಗ್ರಾಮದ ವ್ಯಕ್ತಿಯೊಂದಿಗೆ ಉಪ್ಪುಂದ ಗ್ರಾಮದ ಯುವತಿಯ ಮದುವೆ ಸೋಮವಾರ ನಾಗೂರಿನಲ್ಲಿ ನಡೆಯಲಿತ್ತು. ಹುಡುಗ ಖಾಸಗಿ ಸಂಸ್ಥೆಯಲ್ಲಿ ಕೆಲಸದಲ್ಲಿದ್ದ. ಈ ಹಿಂದೆ ಎರಡು ಕಡೆಯ ಮನೆಯವರು ಸೇರಿ ಮದುವೆ ನಿಶ್ಚಯಿಸಿದ್ದರು.
ಆ.18 ರಂದು ಹುಡುಗನ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದಿತ್ತು. ಮದುಮಗ ಆ.18ರಂದು ಮದುವೆಗೆ ಅಗತ್ಯವಿರುವ ಚಿನ್ನಾಭರಣಗಳನ್ನು ಅಂಗಡಿಯಿಂದ ಪಡೆದು, ಅಂಗಡಿಯವರಿಗೆ 20 ಸಾ. ರೂ. ಕೊಡಲು ಬಾಕಿ ಇತ್ತು.
ಚಿನ್ನಾಭರಣ ಗಳನ್ನು ಮನೆಯಲ್ಲಿಟ್ಟು ಕೆಲವು ವಸ್ತುಗಳನ್ನು ತರಲು ಇದೆ ಎಂದು ಮನೆ ಯವರಲ್ಲಿ ಹೇಳಿ, ಮೊಬೈಲ್, ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೇಟ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ.
ಮೆಹಂದಿಯ ಸಂಭ್ರಮದಲ್ಲಿ ಇದ್ದ ಮನೆಯವರು ಹುಡುಗ ಮನೆಗೆ ಬಾರದೆ ಇರುವುದರಿಂದ ಗಾಬರಿಯಿಂದ ಹುಡುಕಾಟದಲ್ಲಿ ತೊಡಗಿದರು. ಬಳಿಕ ಹುಡುಗ ನಾಪತ್ತೆ ವಿಷಯ ತಿಳಿದು ನೆರೆದವರೆಲ್ಲರೂ ವಾಪಸು ತೆರಳಿದರು. ಹುಡುಗ ಶಾಂತ ಸ್ವಭಾವದವನಾಗಿದ್ದು, ಸ್ವಲ್ಪ ಮಾನಸಿಕ ಸಮಸ್ಯೆ ಇರುವುದಾಗಿ ಹುಡುಗನ ಒಡನಾಟದಲ್ಲಿ ಇರುವ ವರು ತಿಳಿಸಿದ್ದಾರೆ.