Advertisement

51.68 ಕೋ.ರೂ. ವೆಚ್ಚದ ಕಿಂಡಿ ಅಣೆಕಟ್ಟು ಭಾಗಶಃ ಪೂರ್ಣ

02:56 PM Oct 21, 2022 | Team Udayavani |

ಉಪ್ಪಿನಂಗಡಿ: ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಳಿಯೂರು ಗ್ರಾಮದ ಕಡಪ್ಪುವಿನಲ್ಲಿ 2020ರಲ್ಲಿ ಆರಂಭಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಈ ಭಾಗದ ಜನರ ಕನಸು ನನಸಾಗಲಿದೆ.

Advertisement

ಶಾಸಕ ಸಂಜೀವ ಮಠಂದೂರು ಅವರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಪಶ್ಚಿಮವಾಹಿನಿ ಯೋಜನೆಯಡಿ 51.68 ಕೋ. ರೂ. ಅನುದಾನದಲ್ಲಿ ನೇತ್ರಾವತಿಗೆ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ.

2020ರ ನವೆಂಬರ್‌ನಲ್ಲಿ ಅಂತರ್ಜಲ ಅಭಿವೃದ್ಧಿ ಖಾತೆಯ ಸಚಿವರಾದ ಜೆ.ಸಿ. ಮಾಧುಸ್ವಾಮಿ ಶಿಲಾನ್ಯಾಸ ನೆರವೇರಿಸಿದ್ದರು. ಸುತ್ತಲಿನ ಕೃಷಿ ಜಮೀನಿಗೆ ನೀರುಣಿಸುವುದರ ಜತೆಗೆ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವುದು ಹಾಗೂ ಸೇತುವೆಯ ಮೂಲಕ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಒಂದುಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕಿಂಡಿ ಅಣೆಕಟ್ಟಿಗೆ ಗೇಟ್‌ ಅಳವಡಿಕೆ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಬಿಳಿಯೂರು ಭಾಗದಲ್ಲಿ ನದಿ ಬದಿಗೆ ತಡೆಗೋಡೆ ಕೆಲಸಗಳು ಪೂರ್ಣಗೊಂಡರೆ, ತೆಕ್ಕಾರು ಭಾಗದಲ್ಲಿ ತಡೆಗೋಡೆ ಕೆಲಸ ಪ್ರಗತಿಯಲ್ಲಿದೆ. ಆದರೆ ಪ್ರಮುಖವಾಗಿ ತೆಕ್ಕಾರಿನಿಂದ ಬಿಳಿಯೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯ ಬದಿಯಿಂದ ಮುಖ್ಯ ರಸ್ತೆಯವರೆಗಿನ ರಸ್ತೆ ಇನ್ನಷ್ಟೇ ಆಗಬೇಕಿದೆ.

ರಾ.ಹೆ.ಗೆ ಹತ್ತಿರದ ದಾರಿ

Advertisement

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಮತ್ತು ಸುತ್ತಲಿನ ಗ್ರಾಮದವರುಈ ಮೊದಲು ಮಂಗಳೂರಿಗೆ ತೆರಳಲು ಬೇಕಾದರೆ ಉಪ್ಪಿನಂಗಡಿಗೆ ಬರಬೇಕಿತ್ತು. ಈ ಸೇತುವೆ ಉದ್ಘಾಟನೆಗೊಂಡ ಬಳಿಕ ಸ್ವಂತ ವಾಹನವುಳ್ಳವರು ತೆಕ್ಕಾರಿನಿಂದ ಈ ಸೇತುವೆಯ ಮೂಲಕ ನೇರವಾಗಿ ಪೆರ್ನೆಗೆ ತಲುಪಿ ಬಳಿಕ ಅಲ್ಲಿಂದ ಮಂಗಳೂರು ಕಡೆ ಪ್ರಯಾಣಿಸಬಹುದು. ಆದ್ದರಿಂದ ಈ ಕಿಂಡಿ ಅಣೆಕಟ್ಟು ನೀರಾವರಿಗಿಂತಲೂ ಹೆಚ್ಚಾಗಿ ಸಂಪರ್ಕ ಸೇತುವಾಗಿ ಸಹಕಾರಿಯಾಗಲಿದೆ.

120 ಹೆಕ್ಟೇರ್‌ಗೆ ನೀರಾವರಿ

ಇಲ್ಲಿ ನದಿಯು 305.30 ಮೀ. ಅಗಲವಾಗಿದ್ದು, ಅಣೆಕಟ್ಟಿನ ಎತ್ತರ 11.36 ಮೀ. ಆಗಿದೆ. ಆದರೆ ಇಲ್ಲಿ ನೀರು ಶೇಖರಣ ಗುರಿ ಇರುವುದು 4 ಮೀ. ಮಾತ್ರ. ಇದಕ್ಕೆ 42 ಕಿಂಡಿಗಳಿದ್ದು, 42 ವರ್ಟಿಕಲ್‌ ಲಿಫ್ಟ್ ಗೇಟ್‌ಗಳ ಅಳವಡಿಕೆಯಾಗಲಿವೆ. 120 ಹೆಕ್ಟೇರ್‌ ಭೂ ಪ್ರದೇಶವು ಈ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶವಾಗಿದ್ದು, 53.79 ಎಂ.ಸಿ.ಎಫ್.ಟಿ. ನೀರು ಶೇಖರಣ ಸಾಮರ್ಥ್ಯವನ್ನು ಹೊಂದಿದೆ. ಅಣೆಕಟ್ಟಿನ ಮೇಲ್ಮೆ„ಯನ್ನು ಸೇತುವೆಯನ್ನಾಗಿ ಮಾಡಲಾಗಿದ್ದು, 5.50 ಮೀ. ಅಗಲ ಇದೆ.

ಸಣಪುಟ್ಣ ಕೆಲಸಗಳಷ್ಟೇ ಬಾಕಿ: ಕಿಂಡಿ ಅಣೆಕಟ್ಟಿನ ಕಾಮಗಾರಿ ಭಾಗಶಃ ಮುಗಿದಿದೆ. ರಸ್ತೆ ಸಂಪರ್ಕ, ಗೇಟ್‌ ಅಳವಡಿಕೆ ಹೀಗೆ ಸಣ್ಣ ಸಣ್ಣ ಕೆಲಸಗಳಷ್ಟೇ ಬಾಕಿ ಉಳಿದಿವೆ. ಗರಿಷ್ಠ ಒಂದೂವರೆ ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಸಚಿವರ ಮೂಲಕ ಉದ್ಘಾಟಿಸಲಾಗುವುದು. ಜನರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ನೀರಾವರಿ ಸೌಲಭ್ಯ, ಅಂತರ್ಜಲ ವೃದ್ಧಿಯ ಜತೆಗೆ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಗ್ರಾಮಗಳನ್ನು ಬೆಸೆಯಲು ಸಾಧ್ಯವಾಗುತ್ತದೆ. – ಸಂಜೀವ ಮಠಂದೂರು ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ

 

Advertisement

Udayavani is now on Telegram. Click here to join our channel and stay updated with the latest news.

Next