ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ “ಐ ಲವ್ ಯೂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ “ಐ ಲವ್ ಯೂ’ ಸಿನಿಮಾದ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಲಾಂಚ್ ಮಾಡಿದ್ದಾರೆ.
ಟ್ರೈಲರ್ ನಲ್ಲಿ ಉಪ್ಪಿ ಹಾಗೂ ರಚಿತಾ ರಾಮ್ ಸಂಭಾಷಣೆ ಬೊಂಬಾಟ್ ಆಗಿ ಮೂಡಿ ಬಂದಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಲ್ಲದೇ ಚಿತ್ರದ ಹಾಡುಗಳನ್ನು ಜನವರಿ 12ರಂದು ದಾವಣಗೆರೆಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದ್ದು, ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸೌತ್ ಇಂಡಿಯನ್ ಸಿನಿಮಾದ ಸೂಪರ್ ಸ್ಟಾರ್ಗಳು ಭಾಗಿಯಾಗುವ ನಿರೀಕ್ಷೆ ಇದೆ.
ಉಪ್ಪಿ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್‍ನ ಎರಡನೇ ಚಿತ್ರ ಇದ್ದಾಗಿದ್ದು, ಫೆಬ್ರವರಿ 14ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಕಥೆ ಪ್ರೇಮಿಗಳ ದಿನಕ್ಕೆ ಹೆಚ್ಚು ಹೊಂದಿಕೆಯಾಗುವುದರಿಂದ ಆ ದಿನವೇ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ.
ಇನ್ನು ಚಿತ್ರದ ನಾಯಕ ಉಪೇಂದ್ರ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ನಾಯಕಿ ರಚಿತಾ ರಾಮ್ ಅವರ ಪಾತ್ರ ಕೂಡಾ ಭಿನ್ನವಾಗಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸೋನು ಗೌಡ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಆರ್.ಚಂದ್ರು ಅವರೇ ನಿರ್ಮಿಸಿದ್ದಾರೆ.