ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಉಪೇಂದ್ರ ಇಷ್ಟರಲ್ಲಿ ಪ್ರಜಾಕೀಯ ಮತ್ತು ಚುನಾವಣೆಗಳಲ್ಲಿ ಬಿಝಿಯಾಗಿರಬೇಕಿತ್ತು. ಆದರೆ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಬಂದ ಕಾರಣ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಸದ್ಯಕ್ಕೆ ತಮ್ಮ ಹೊಸ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ದಾಖಲಿಸುವ ಪ್ರಯತ್ನದಲ್ಲಿರುವ ಉಪೇಂದ್ರ, ಮುಂದಿನ ತಿಂಗಳು ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ಇದೆ.
ಹೌದು, ರಾಜಕೀಯಕ್ಕೆ ಧುಮುಕುವುದಕ್ಕೆ ಮುನ್ನ ಉಪೇಂದ್ರ, “ಹೋಮ್ ಮಿನಿಸ್ಟರ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಸಾಧ್ಯವಾದರೆ, ಅದೊಂದು ಚಿತ್ರ ಮುಗಿಸಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಯೋಚನೆಯಲ್ಲಿದ್ದ ಅವರು, ಈಗ ಚುನಾವಣೆಗಳು ಮುಗಿದ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಂತೆ ಅವರು ಮುಂದಿನ ತಿಂಗಳು, ಚುನಾವಣೆಗಳು ಮುಗಿದ ನಂತರ, “ಹೋಮ್ ಮಿನಿಸ್ಟರ್’ನ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಾದ ನಂತರ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ, ಒಂದಿಷ್ಟು ಹೊಸ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿಯೂ ಇದೆ.
ಇದಕ್ಕೆ ಪೂರಕವಾಗಿ ಉಪೇಂದ್ರ, ಈ ಹಿಂದೆಯೇ, “ರಾಜಕೀಯದಲ್ಲಿ ಗೆಲ್ಲುತ್ತೀನಿ ಎಂಬ ನಂಬಿಕೆ ಇದೆ. ಗೆದ್ದರೆ ಸಂತೋಷ. ಇಲ್ಲ ಸಾಯೋವರೆಗೂ ಪ್ರಯತ್ನ ಮಾಡುತ್ತಲೇ ಇರುತ್ತೀನಿ. ಪ್ರತಿ ಚುನಾವಣೆಯ ಆರು ತಿಂಗಳ ಮುಂಚೆ ಬಂದು ಪ್ರಯತ್ನ ಮಾಡುತ್ತಲೇ ಇರುತ್ತೀನಿ’ ಎಂದು ಹೇಳಿಕೊಂಡಿದ್ದರು. “ಹೋಮ್ ಮಿನಿಸ್ಟರ್’ ಜೊತೆಗೆ ಉಪೇಂದ್ರ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ.
ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನ ಅವರು ಗುರುದತ್ ನಿರ್ದೇಶನದ “ನಾಗಾರ್ಜುನ’ ಚಿತ್ರವನ್ನು ಒಪ್ಪಿಕೊಂಡಿದ್ದರು. ಮೈಸೂರಿನಲ್ಲಿ ಈ ಚಿತ್ರದ ಮುಹೂರ್ತವೂ ಆಗಿತ್ತು. ಇದಲ್ಲದೆ ಉಪೇಂದ್ರ ಅವರು ಮತ್ತೆ ಚಿತ್ರ ನಿರ್ದೇಶನ ಮಾಡುವ ಸಾಧ್ಯತೆ ಇದೆ ಮತ್ತು ಅವರ ನಿರ್ದೇಶನದ ಹೊಸ ಚಿತ್ರ ಅವರ ಹುಟ್ಟುಹಬ್ಬದಂದು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.