Advertisement
ಕುಂದಾಪುರ: ವೇಗವಾಗಿ ಪ್ರಗತಿ ಹೊಂದುತ್ತಿರುವ ಕುಂದಾಪುರ ನಗರದಲ್ಲಿ ಸಂಚಾರ ದಟ್ಟನೆಯೂ ಹೆಚ್ಚುತ್ತಿದ್ದು, ಸುಸಜ್ಜಿತ ರಸ್ತೆ ಸೌಕರ್ಯ ಶೀಘ್ರವಾಗಿ ಆಗಬೇಕಿದೆ. ಈಗ ಪ್ರಗತಿಯಲ್ಲಿರುವ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡರೆ ಬಹಳಷ್ಟು ಅನುಕೂಲವಾಗಲಿದೆ. ತ್ವರಿತ ಕಾಮಗಾರಿ ಬೇಡಿಕೆ
ಶಾಸ್ತ್ರಿ ಸರ್ಕಲ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ಯೋಜನೆ 2013ರಲ್ಲಿ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಿ 5 ವರ್ಷಗಳಾಗಿವೆ. ಕುಂದಾಪುರ- ಸುರತ್ಕಲ್ ಚತುಷ್ಪಥ ಹೆದ್ದಾರಿಯೂ ಸೇರಿ ಒಟ್ಟು 671 ಕೋ.ರೂ. ಯೋಜನೆ ಇದಾಗಿದೆ. ಈಗ ಒಂದು ಕಡೆಯಿಂದ ಸರ್ವಿಸ್ ರಸ್ತೆ ಕಾಮಗಾರಿಯೂ ನಡೆಯುತ್ತಿದೆ. ಟೆಂಡರ್ ಕರಾರು ಪ್ರಕಾರ ಅದು ಮುಂದಿನ ಮೇ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಮೇಲ್ಸೆತುವೆಗೆ ಇನ್ನೂ 4 ಬೀಮ್ ನಿರ್ಮಾಣವಾಗಬೇಕಿದೆ. ಪ್ರೊಟೆಕ್ಟ್ ವಾಲ್ ನಿರ್ಮಾಣ ಬಾಕಿಯಿದೆ. ಮೇಲ್ನೋಟಕ್ಕೆ ಈ ಕಾಮಗಾರಿ ಮುಕ್ತಾಯಕ್ಕೆ 2 ವರ್ಷ ಬೇಕು. ಆದರೆ ಅಧಿಕಾರಿಗಳು ಈ ವರ್ಷವೇ ಪೂರ್ಣಗೊಳ್ಳಲಿದೆ ಎಂದು ಹೇಳುತ್ತಿದ್ದಾರೆ. ಈ ಮೇಲ್ಸೇತುವೆ ಬಗ್ಗೆ ಸಮಗ್ರ ಚಿತ್ರಣವೂ ಇಲ್ಲದಿರುವುದರಿಂದ ತೀರ ಗೊಂದಲವಿದೆ. ಲಭ್ಯ ಮಾಹಿತಿ ಪ್ರಕಾರ ಬೈಂದೂರು ಕಡೆಯಿಂದ ಕುಂದಾಪುರದ ಸರಕಾರಿ ಬಸ್ ನಿಲ್ದಾಣದಿಂದ ಫ್ಲೈ ಓವರ್ ಆರಂಭವಾಗಿ, ಉಡುಪಿ ಕಡೆಯಿಂದ ಬೊಬ್ಬರ್ಯನ ಕಟ್ಟೆಯ ಬಳಿ ಕೊನೆಗೊಳ್ಳುತ್ತದೆ.
ಕರಾವಳಿಯ ಜೀವನಾಡಿಯಾಗಿರುವ ಹೆದ್ದಾರಿ ಈಗಾಗಲೇ ಚತುಷ್ಪಥವಾಗಿ ಮಾರ್ಪಟ್ಟಿದ್ದು, ಇದನ್ನು ಎಕ್ಸ್‌ಪ್ರೆಸ್ ಹೈವೇಯನ್ನಾಗಿ ಮಾಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಇದರಿಂದ ಕುಂದಾಪುರ-ಮಂಗಳೂರು ಸುಲಭ, ಕಡಿಮೆ ಅವಧಿಯ ಸಂಚಾರ ಸಾಧ್ಯವಾಗಲಿದೆ. ಇದರೊಂದಿಗೆ ಕುಂದಾಪುರ, ಉಡುಪಿ ಭಾಗದಲ್ಲಿ ಬೆಳವಣಿಗೆಗೆ ವ್ಯಾಪಕ ಪ್ರಯೋಜನ ಸಿಗಲಿದೆ. ಈಗಿರುವ ಚತುಷ್ಪಥವನ್ನೇ ಅಭಿವೃದ್ಧಿ ಪಡಿಸುವುದರೊಂದಿಗೆ ಸೂಕ್ತ ಸರ್ವಿಸ್ ರಸ್ತೆಗಳ ನಿರ್ಮಾಣವಾದರೆ, ಈ ಭಾಗಕ್ಕೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಬಸ್ರೂರು-ಮೂರುಕೈ:
ಫ್ಲೈ ಓವರ್ ಪ್ರಸ್ತಾವನೆ
ಕುಂದಾಪುರ – ಶಿವಮೊಗ್ಗ ರಾಜ್ಯ ಹೆದ್ದಾರಿ ಸಂಪರ್ಕಿಸುವ ಬಸ್ರೂರು – ಮೂರುಕೈ ಜಂಕ್ಷನ್ ಸಂಚಾರಕ್ಕೆ ತೀರ ಗೊಂದಲ ಮೂಡಿಸಿದೆ. ಇಲ್ಲಿ ಫ್ಲೈ ಓವರ್ ಅಥವಾ ಅಂಡರ್ ಪಾಸ್ ನಿರ್ಮಾಣವಾಗಬೇಕೆಂಬ ಬೇಡಿಕೆ ಇದೆ. ಈಗ ಹೆದ್ದಾರಿ ಪ್ರಾಧಿಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಸುರತ್ಕಲ್ -ಕುಂದಾಪುರ ಹೆದ್ದಾರಿ ಕಾಮಗಾರಿಗೆ ಹೊಡೆತ ಬಿದ್ದಿದ್ದು, ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾವನೆ ಹೋಗಿರುವುದರಿಂದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ.
Related Articles
ಕುಂದಾಪುರಕ್ಕೆ ಗ್ರಾಮೀಣ ಭಾಗಗಳಿಂದ ದಿನವೊಂದಕ್ಕೆ ಸುಮಾರು 10 ಸಾವಿರ ಮಂದಿ ಆಗಮಿಸುತ್ತಾರೆ. ಸರ್ವೆ ಪ್ರಕಾರ ಶೇ. 70ರಷ್ಟು ಉಡುಪಿ ಹಾಗೂ ಮಂಗಳೂರು ಭಾಗದ ವಾಹನಗಳು, ಕೇವಲ ಶೇ. 30 ರಷ್ಟು ಮಾತ್ರ ಹೊರ ಜಿಲ್ಲೆಗಳ ವಾಹನಗಳು ಸಂಚರಿಸುತ್ತವೆ. ಕುಂಠಿತಗೊಂಡಿರುವ ಮೇಲ್ಸೆತುವೆ ಕಾಮಗಾರಿಯಿಂದಾಗಿ ಸಾಕಷ್ಟು ಮಂದಿ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಫ್ಲೈಓವರ್ ತೆರೆದುಕೊಂಡರೆ ವ್ಯಾಪಾರ, ವಹಿವಾಟು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮಂದಗತಿಯ ಕಾಮಗಾರಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಆರಂಭಗೊಂಡು ವಿನಾಯಕ ಚಿತ್ರಮಂದಿರದ ವರೆಗಿನ ಮಳಿಗೆಗಳು, ಹೊಟೇಲ್‌ಗಳು, ಕಮರ್ಶಿಯಲ್ ಕಟ್ಟಡಗಳು, ಲಾಡ್ಜ್ಗಳ ವಹಿವಾಟಿಗೆ ಹೊಡೆತ ಬಿದ್ದಿದೆ. ಕಾಮಗಾರಿ ಶೀಘ್ರ ಪೂರ್ಣವಾದರೆ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಬಹುದು ಎನ್ನುವ ಅಭಿಪ್ರಾಯವಿದೆ. ಕುಂದಾಪುರ-ಕಾರವಾರ ಹೆದ್ದಾರಿ ಕಾಮಗಾರಿಗೂ ವೇಗ ಸಿಗಬೇಕಿದೆ.
Advertisement
ತುರ್ತಾಗಿ ಆಗಬೇಕಾದದ್ದೇನು?· ಶಾಸ್ತ್ರಿ ಸರ್ಕಲ್ ಬಳಿ ಕುಂದಾಪುರ ಫ್ಲೈಓವರ್ ಕಾಮಗಾರಿಗೆ ವೇಗ ನೀಡಿ, ಶೀಘ್ರ ಬಳಕೆಗೆ ಸಿಗುವಂತೆ ಮಾಡುವುದು
· ಕುಂದಾಪುರ – ಕಾರವಾರ, ಸುರತ್ಕಲ್ – ಕುಂದಾಪುರ ಚತುಷ್ಪಥ ರಾ.ಹೆ.ಅಗಲೀಕರಣದಲ್ಲಿ ಪ್ರಗತಿ
· ಬಸ್ರೂರು-ಮೂರುಕೈ ಜಂಕ್ಷನ್‌ನಲ್ಲಿ ಮೇಲ್ಸೆತುವೆ ನಿರ್ಮಾಣವಾದರೆ ಶಿವಮೊಗ್ಗ, ಸಿದ್ದಾಪುರ ಕಡೆಯಿಂದ ಬರುವ ಹಾಗೂ ತೆರಳುವ ವಾಹನಗಳಿಗೆ ಅನುಕೂಲವಾಗಲಿದೆ. ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಲಿದೆ.
· ತೆಕ್ಕಟ್ಟೆ, ಬೀಜಾಡಿ, ಬಸ್ರೂರು-ಮೂರುಕೈ, ಶಾಸ್ತ್ರಿ ಸರ್ಕಲ್, ತಲ್ಲೂರು, ಹೆಮ್ಮಾಡಿ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಪ್ರಗತಿಗೆ ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ. – ಪ್ರಶಾಂತ್ ಪಾದೆ