Advertisement

ಅಕ್ಟೋಬರ್ ನಲ್ಲಿ ಉಪ್ಪಾರ ಅಭಿವೃದ್ಧಿ  ನಿಗಮ ಲೋಕಾರ್ಪಣೆ 

12:11 PM Sep 20, 2017 | |

ದಾವಣಗೆರೆ: ಉಪ್ಪಾರ ಸಮಾಜದ ಬಹು ದಿನಗಳ ಬೇಡಿಕೆಯಾದ ಉಪ್ಪಾರ ಅಭಿವೃದ್ಧಿ ನಿಗಮ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.

Advertisement

ಮಂಗಳವಾರ, ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಉಪ್ಪಾರ ನೌಕರರ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ಬಡ್ತಿ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉಪ್ಪಾರ ಸಮಾಜದ ಬೇಡಿಕೆ ಈಡೇರಿಸಲು ಬದ್ಧವಾಗಿದೆ ಎಂದರು.

ಹಲವಾರು ವರ್ಷದಿಂದ ಸಮಾಜದ ಸಮಗ್ರ ಅಭಿವೃದ್ಧಿಗೆ ತೀರಾ ಅತ್ಯಗತ್ಯವಾಗಿರುವ ಅಭಿವೃದ್ಧಿ ನಿಗಮದ ಬೇಡಿಕೆಗೆ ಕಾಂಗ್ರೆಸ್‌ ಸರ್ಕಾರ ಸ್ಪಂದಿಸಿ, ನಿಗಮಕ್ಕಾಗಿಯೇ 10 ಕೋಟಿ ಅನುದಾನ ಮೀಸಲಿಟ್ಟಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್‌ ಸಮಾವೇಶ ನಡೆಸಿ, ಅಭಿವೃದ್ಧಿ ನಿಗಮ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ನಿಗಮದಿಂದ ಉಪ್ಪಾರ ಸಮಾಜದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುಕೂಲ ಆಗಲಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಬೆಳವಣಿಗೆಗೆ ಅಗತ್ಯ ನೆರವು, ಸೌಲಭ್ಯ ದೊರೆಯಲಿವೆ ಎಂದ ಅವರು,
ಸಮಾಜಕ್ಕೆ ಉಪ್ಪು ತಯಾರಿಸಿಕೊಡುವ ಮೂಲಕ ಮಹಾನ್‌ ಉಪಕಾರ ಮಾಡಿದ ಉಪ್ಪಾರ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಸಮಾಜದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ ಎಂದು ತಿಳಿಸಿದರು.

ಸಂದರ್ಶನದ ಮೇಲೆ ಸರ್ಕಾರಿ ಉದ್ಯೋಗ ದೊರೆಯುವ ಕಾಲ ಈಗಿಲ್ಲ. ಉದ್ಯೋಗ ಸಿಗುವುದು ಅಂಕಗಳ ಆಧಾರದಲ್ಲಿ. ಹಾಗಾಗಿ ಎಲ್ಲ ಸಮಾಜದ ಮಕ್ಕಳು ಹೆಚ್ಚು ಅಂಕ ಗಳಿಸುವತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.

Advertisement

ಸಿದ್ದರಾಮಯ್ಯ ಎಂದರೆ ಸಾಮಾಜಿಕ ನ್ಯಾಯ. ಎಲ್ಲ ವರ್ಗ ದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಸಂಕಲ್ಪ ಹೊಂದಿದ್ದಾರೆ. ಇಂಥ ಮುಖ್ಯಮಂತ್ರಿಗಳು ಮತ್ತು ಸರ್ಕಾರ ಮುಂದೆ ಯಾವತ್ತೂ ಕಾಣಲು ಸಾಧ್ಯವಿಲ್ಲ. ಮತ್ತೇ ಕಾಂಗ್ರೆಸ್‌ ಆಡಳಿತಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆ ಗಬೇಕಾದರೆ,ಉಪ್ಪಾರ ಸಮಾಜ ಬಾಂಧವರು ಮುಂದಿನ
ಚುನಾವಣೆಯಲ್ಲಿ ನಮ್ಮ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾ ನಂದಪುರಿ ಸ್ವಾಮೀಜಿ ಮಾತನಾಡಿ, ಉಪ್ಪಾರ ಸಮಾಜವನ್ನ ಎಲ್ಲ ರೀತಿಯಲ್ಲಿ ಅಭಿವೃದ್ಧಿಪಡಿಸುವ ಗುರುತರ, ಮಹತ್ತರ ಜವಾಬ್ದಾರಿ ನೌಕರರ ಮೇಲಿದೆ. ದುಡಿಮೆಯ ಒಂದಿಷ್ಟು ಸಮಾಜದ ಅಭಿವೃದ್ಧಿಗೆ ತೆಗೆದಿರಿಸಬೇಕು. ಪ್ರತಿಭಾವಂತ ಮಕ್ಕಳಿಗೆ ಅತಿ ಹೆಚ್ಚಿನ ನೆರವು ನೀಡುವ ಮೂಲಕ ಸಮಾಜದ ಆಸ್ತಿಗಳನ್ನಾಗಿ ಬೆಳಸಬೇಕು ಎಂದರು.

ಉಚ್ಛ  ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಬಿಲ್ಲಪ್ಪ ಮಾತನಾಡಿ, ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ (ಎಸ್‌ಟಿ)ಗೆ ಸೇರಿಸಲು ಸಮಾಜ ಬಾಂಧವರು ಸಂಘಟಿತರಾಗಿ ಹೋರಾಟದ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಬೇಕುಎಂದು ಹೇಳಿದರು.

ಉಪ ಮೇಯರ್‌ ಮಂಜಮ್ಮ, ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ್‌, ಕಾಂಗ್ರೆಸ್‌ ಮುಖಂಡರಾದ ಡಿ. ಬಸವರಾಜ್‌, ನಲ್ಕುಂದ ಹಾಲೇಶ್‌, ಎಚ್‌. ತಿಪ್ಪಣ್ಣ, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಉಪ ವಿಭಾಗಾಧಿಕಾರಿ ಸಿದ್ದೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next