Advertisement

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

02:53 PM Jun 29, 2024 | Team Udayavani |

ಅಸಂಖ್ಯ ಜೀವ ವೈವಿಧ್ಯತೆಯ ಆಶ್ರಯ ತಾಣ ನಮ್ಮ ಪಶ್ಚಿಮ ಘಟ್ಟಗಳ ಮಳೆ ಕಾಡುಗಳು. ಇಲ್ಲಿಯ ಜೀವ ವೈವಿಧ್ಯತೆಯು ಅಸಂಖ್ಯಾತ. ಈ ಅಸಂಖ್ಯ ಜೀವಿಗಳ ನಡುವಲ್ಲಿ ಹಲವರಿಂದ ನಿರ್ಲಕ್ಷಿಸಲ್ಪಟ್ಟರೂ ತನ್ನ ವಿಭಿನ್ನ ಜೀವ ಲಕ್ಷಣಗಳಿಂದಾಗಿ ಹಾಗೂ ನಿಸರ್ಗಕ್ಕಾಗಿ ತಾನು ನೀಡುತ್ತಿರುವ ಕೊಡುಗೆಯಿಂದಾಗಿ ಗಮನ ಸೆಳೆಯುವ ಸಸ್ಯವೇ ವೈಜ್ಞಾನಿಕವಾಗಿ ಮಕರಂಗಾ ಪೆಲ್ಟಾಟ’ ಎಂದು ಕರೆಸಿಕೊಳ್ಳುವ ಉಪ್ಪಳಿಗೆ ಮರ!

Advertisement

ಉಪ್ಪಳಿಗೆ, ಚಂದ್ರಿಕೆ, ಚಂದಕಲ, ಉಪ್ಪರಾಂತಿ, ಕಂಚುಪ್ರಾಂತಿ ಬಟ್ಟಲುಚಂದ್ರಿಕೆ ಎಂದೆಲ್ಲಾ ಕರೆಸಿಕೊಳ್ಳುವ ಈ ಮರವು ವೇಗವಾಗಿ ಬೆಳೆಯುವ ಗುಣವನ್ನು ಹೊಂದಿವೆ. ಭಾರತದಲ್ಲಷ್ಟೇ ಅಲ್ಲದೇ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಮಳೆ ಕಾಡುಗಳಲ್ಲಿ ಕೂಡ ಈ ವೃಕ್ಷಗಳು ಕಂಡು ಬರುತ್ತವೆ.

ಕಾಡು ಕಡಿದು ನಿವೇಶನ ಮಾಡಿದಲ್ಲಿ, ಕಾಡು ಸೀಳಿ ಸಾಗುವ ಹೆದ್ದಾರಿಗಳ ಬದಿಯಲ್ಲಿ, ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಹೀಗೇ ಎಲ್ಲೆಲ್ಲಿ ಮಾನವ ಹಾಗೂ ನಿಸರ್ಗ ಪ್ರೇರಿತ ಕಾರ್ಯಗಳಿಂದಾಗಿ ಎಲ್ಲೆಲ್ಲಿ ಕಾಡಿನ ಮೂಲ ಸ್ವರೂಪಕ್ಕೆ ಧಕ್ಕೆಯುಂಟಾಗಿದಿಯೋ ಅಲ್ಲಿ ಅರಣ್ಯದ ನೈಸರ್ಗಿಕ ಪುನರುತ್ಥಾನದ ಸಂದರ್ಭದಲ್ಲಿ ಬೆಳೆಯುವ ಸಸ್ಯಗಳ ಪೈಕಿ ಈ ಸಸ್ಯವು ಒಂದಾಗಿದೆ. ಈ ಮೂಲಕ ಅರಣ್ಯ ಹಾಗೂ ಜೀವ ವೈವಿಧ್ಯದ  ನೈಸರ್ಗಿಕ ಪುನರುತ್ಥಾನದಲ್ಲಿ ಈ ಮರವು ಪ್ರಮುಖ ಪಾತ್ರ ವಹಿಸುತ್ತದೆ.  ಹೀಗಾಗಿಯೇ ಈ ಸಸ್ಯವನ್ನು ಪ್ರವರ್ತಕ ಜಾತಿಗಳು ಅಂದರೆ ಕಜಿಟnಛಿಛಿr ಖಟಛಿcಜಿಛಿs ಗಳೆಂದು ವೈಜ್ಞಾನಿಕವಾಗಿ ಗುರುತಿಸಲಾಗುತ್ತದೆ.

ಅಷ್ಟೇ ಅಲ್ಲದೇ ಇದರ ವೇಗವಾದ ಬೆಳವಣಿಗೆ ಹಾಗೂ ಇದರ ದೊಡ್ಡ ದೊಡ್ಡ ರೆಂಬೆ ಕೊಂಬೆಗಳು ಹೊತ್ತ ಎಲೆಗಳ ನೆರಳುಗಳ ಸಹಾಯದಿಂದ ಇತರೆ ಸಸ್ಯಗಳು ಬೆಳೆಯಲು ಅನುವಾಗುವಂತೆ ನೆರಳನ್ನು ನೀಡುವುದಲ್ಲದೇ ಮಣ್ಣಿನ ಸವಕಳಿ ತಡೆಯಲೂ ಅನುವು ಮಾಡಿಕೊಡುತ್ತದೆ.

ಈ ಮರಕ್ಕೆ ಉಪ್ಪಳಿಗೆ ಎಂಬ ಹೆಸರು ಬರಲೂ ಒಂದು ಹಿನ್ನೆಲೆಯಿದೆ. ಹಿಂದಿನ ದಿನಗಳಲ್ಲಿ ಉಪ್ಪನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಟ ಮಾಡಬೇಕಾದಂತಹ ಸಂದರ್ಭಗಳಲ್ಲಿ, ಬೇರೆ ಯಾವುದೇ ಮರದ ಪೆಟ್ಟಿಗೆಗಳಲ್ಲಿ ಉಪ್ಪನ್ನು ತುಂಬಿದರೆ ಅದು ವಾತಾವರಣದೊಂದಿಗೆ ವರ್ತಿಸಿ ನೀರಾಗುತ್ತಿತ್ತು. ಆದರೆ ಉಪ್ಪಳಿಗೆ ಮರದ ಹಲಗೆಗಳಿಂದ ತಯಾರಾದ ಪೆಟ್ಟಿಗೆಗಳಲ್ಲಿ ಉಪ್ಪನ್ನು ಶೇಖರಿಸಿದರೆ ಭೌತಿಕವಾಗಿ ರೂಪಾಂತರಗೊಳ್ಳುತ್ತಿರಲಿಲ್ಲ. ಹಾಗಾಗಿ ಉಪ್ಪನ್ನು ಶೇಖರಿಸಲು ಈ ಮರದ ಹಲಗೆಯ ಬಳಕೆಯು ಹೆಚ್ಚಾಗಿ ಚಾಲ್ತಿಗೊಳಪಟ್ಟಿತು.

Advertisement

ಈ ಮೂಲಕ ಉಪ್ಪು ಮತ್ತು ಹಲಗೆ ಎಂಬ ಎರಡೂ ಪದಗಳು ಸೇರಿ ಈ ಮರಕ್ಕೆ ಉಪ್ಪಳಿಗೆ ಎಂಬ ಹೆಸರು ಬಂದಿದೆ. ಉಪ್ಪಳಿಗೆ ಹಾಗೂ ಇರುವೆಗಳಿಗೂ ಕೂಡ ಒಂದು ಅವಿನಾಭಾವ ಸಂಬಂಧವಿದೆ. ಕೇವಲ ಹೂವಿನಲ್ಲಷ್ಟೇ ಅಲ್ಲದೇ ಈ ಮರದಲ್ಲಿರುವ ವಿಶೇಷ ರಚನೆಗಳಾದ extrafloral Nectaries ತನ್ನೊಳಗೆ ಮಕರಂದವನ್ನು ಶೇಖರಿಸುವ ಕಾರಣ ಇರುವೆಗಳನ್ನು ಆಕರ್ಷಿಸುತ್ತವೆ.

ಇರುವೆಗಳು ಈ ಮಕರಂದವನ್ನು ಆಹಾರವಾಗಿ ಬಳಸಿಕೊಳ್ಳುವುದರ ಜೊತೆಗೆ ತನಗೆ ಆಶ್ರಯ ನೀಡಿದ ಮರವನ್ನು ಇತರೆ ಕೀಟಗಳು ಹಾಗೂ ಗಿಡ ತಿನ್ನಲು ಬರುವ ಪ್ರಾಣಿ ಪಕ್ಷಿಗಳಿಂದ ರಕ್ಷಣೆ ನೀಡುವ ಕಾರ್ಯ ಮಾಡುತ್ತವೆ. ಈ ಮೂಲಕ ಒಬ್ಬರಿಗೊಬ್ಬರು ನೆರವಾಗುವ ಜೀವಲೋಕದ ಸಹಜೀವನಕ್ಕೆ ಉತ್ತಮ ಉದಾಹರಣೆಯಾಗಿವೆ.

ನಶಿಸಿ ಹೋಗುತ್ತಿರುವ ಕಾಡುಗಳಲ್ಲಿ ಮತ್ತೂಮ್ಮೆ ಬೆಳೆದು ಅರಣ್ಯದ  ನೈಸರ್ಗಿಕ ಪುನುರುತ್ಥಾನಕ್ಕೆ ಕೂಡ ಕೊಡುಗೆ ನೀಡುತ್ತಿರುವ ಈ ವೃಕ್ಷವು, ಇಂಗಾಲದ ಡೈ ಆಕ್ಸೆçಡ್‌ ಅನ್ನು ಹೀರಿಕೊಳ್ಳುವುದರ ಜತೆಗೆ ಆಮ್ಲಜನಕ ಉತ್ಪತ್ತಿ ಮಾಡುವ ಮೂಲಕ, ಹಾಗೂ ವಿವಿಧ ಕೀಟ, ಖಗ, ಮೃಗಗಳಿಗೆ ಆಹಾರ ಹಾಗೂ ಆಶ್ರಯ ನೀಡುತ್ತಾ ಪರಿಸರ ಸಮತೋಲನಕ್ಕೆ ಕಾರಣೀಕರ್ತವಾಗಿದೆ.  ಕೇವಲ ಇದೊಂದೇ ಮರವಲ್ಲ  ಈ ಜೀವ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ಅಭಿವೃದ್ಧಿಯ ಧಾವಂತದಲ್ಲಿ ಇಂತಹ ಅನೇಕ ಜೀವ ಜಗತ್ತಿನ ಭಾಗಗಳನ್ನು ಸದ್ದಿಲ್ಲದೇ ನಾವು ಕಳೆದುಕೊಳ್ಳುತ್ತಿದ್ದೇವೆ. ಆದರೆ ನಮ್ಮ ಅಸಡ್ಡೆಯಿಂದಾಗಿ ಮುಂದಿನ ಪೀಳಿಗೆ ವಂಚಿತರಾಗುವಂತೆ ಮಾಡದೇ ನಮ್ಮ ಮುಂದಿನ ಜನಾಂಗಕ್ಕೂ ಕೂಡ ಇಂತಹ ಅಮೂಲ್ಯ ಜೀವ ವ್ಯವಸ್ಥೆಯೊಳಗೆ ಬದುಕುವ ಅವಕಾಶವನ್ನು ನಾವು ಒದಗಿಸಬೇಕಾಗಿದೆ.

-ಅನುರಾಗ್‌ ಗೌಡ

ಎಸ್‌.ಡಿ.ಎಮ್‌. ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next