ಅರಂತೋಡು ಸೆ. 14: ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಅನೇಕರು ಭಾಗವಹಿಸಿ ಕೆಲವರು ಮಾತ್ರ ವಿಜೇತರಾಗಿದ್ದಾರೆ. ಎಲ್ಲರಿಗೆ ಗೆಲುವು ಅಸಾಧ್ಯ. ಸೋತವರು ಕುಗ್ಗದೆ ಮತ್ತೆ ಪ್ರಯತ್ನಿಸಿ ಗೆದ್ದವರು ಮುಂದಿನ ಹಂತದಲ್ಲಿ ಗೆದ್ದು ನಮ್ಮ ನಾಡಿಗೆ ಹೆಸರು ತನ್ನಿ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಅವರು ದ.ಕ.ಜಿ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಇಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಪ್ರತಿಭೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳಿಗೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಹೆತ್ತವರು ಪ್ರೋತ್ಸಾಹ ಕೊಡಬೇಕು. ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆತರೆ ಮಾತ್ರ ಅವರು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ನೀಲಾವತಿ ಕೊಡಂಕೇರಿ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ವೀಣಾ ಎಂ.ಟಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಮಲ್ಲಾರ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಮೋಹನ ಗೌಡ ಬಿ.ಕೆ., ಶಿಕ್ಷಣ ಇಲಾಖೆಯ ಸುಂದರ ಕೇನಾಜೆ, ಪ್ರಾಂಶುಪಾಲ ರಮೇಶ್ ಎಸ್., ಶಿಕ್ಷಕ ಆನಂದ ವೈ.ಎ. ಮತ್ತಿತರರು ಉಪಸ್ಥಿತರಿದ್ದರು.