Advertisement

ತ್ಯಾಜ್ಯ ವಿಲೇವಾರಿ ಘಟಕಗಳ ಉನ್ನತೀಕರಣ

01:18 AM Jun 01, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಹತ್ತು ಒಣ ತ್ಯಾಜ್ಯ ವಿಲೇವಾರಿ ಘಟಕಗಳ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ಮಾರಪ್ಪನಪಾಳ್ಯದ ಒಣತ್ಯಾಜ್ಯ ಸಂಗ್ರಹ ಘಟಕದಲ್ಲಿ ಶುಕ್ರವಾರ ನೆದರ್‌ಲ್ಯಾಂಡ್‌ನ‌ ಸ್ವೀಪ್‌ಸ್ಮಾರ್ಟ್‌ ಸಂಸ್ಥೆಯೊಂದಿಗೆ ಘಟಕಗಳ ಉನ್ನತೀಕರಣ ಕುರಿತ ಒಡಂಬಡಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿಂಗಡಣೆಯಲ್ಲಿ ಆಧುನಿಕತೆ ತರುವ ಉದ್ದೇಶದಿಂದ ನೆದರ್‌ಲ್ಯಾಂಡ್‌ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಶೇ.35 ರಷ್ಟು ಹಣಕಾಸಿನ ನೆರವು ನೀಡುವ ಜೊತೆಗೆ ಅವರಲ್ಲಿನ ಅತ್ಯಾಧುನಿಕ ತಂತ್ರಜ್ಞಾನವನ್ನೂ ನಗರದ ಘಟಕಗಳಲ್ಲಿ ಅಳವಡಿಸಲಿದ್ದಾರೆ. ಜತೆಗೆ ಬೀದಿಯಲ್ಲಿ ಚಿಂದಿ ಆಯುವವರನ್ನೇ ಕೆಲಸಕ್ಕೆ ತೆಗೆದುಕೊಂಡು ಉದ್ಯೋಗ ನೀಡಲಿದ್ದಾರೆ ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ, ನಗರದ ಟ್ರಾಫಿಕ್‌ ಸಮಸ್ಯೆ, ನೀರು, ವಿದ್ಯುತ್‌ ಸೇರಿದಂತೆ ನಗರದ ಹಸಿರೀಕರಣಕ್ಕೆ ಮೈತ್ರಿ ಸರ್ಕಾರ ಆದ್ಯತೆ ನೀಡಿದ್ದು, ದೇಶದ ಉಳಿದ ನಗರಗಳಿಗಿಂತಲೂ ಬೆಂಗಳೂರು ಸ್ವತ್ಛವಾಗಿದೆ. ಜತೆಗೆ ಬೆಂಗಳೂರಿನಲ್ಲಿ ತ್ಯಾಜ್ಯ ವಿಂಗಡಣೆ ಪ್ರಮಾವೂ ಹೆಚ್ಚಾಗಿದ್ದು, ಕಸದಿಂದ ಇಂಧನ, ಗೊಬ್ಬರ ಸೇರಿ ಇನ್ನಿತರ ಚಟುವಟಿಕೆಗಳ ಮೂಲಕ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಒತ್ತು ನೀಡಲಾಗಿದೆ ಎಂದರು.

ಸಮಾರಂಭದಲ್ಲಿ ನೆದರ್‌ಲ್ಯಾಂಡ್‌ನ‌ ಜನರಲ್‌ ಕೌನ್ಸಿಲ್‌ ಗೆರ್ಟ್‌ ಹೈಕೂಪ್‌, ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಶಾಸಕ ಕೆ. ಗೋಪಾಲಯ್ಯ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರಜೈನ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಹಾಜರಿದ್ದರು.

Advertisement

ನಗರ ಅಭಿವೃದ್ಧಿಗೆ 50 ಸಾವಿರ ಕೋಟಿ ರೂ.: ನಗರದಲ್ಲಿನ ಕಸ, ಸಂಚಾರ ದಟ್ಟಣೆ, ಕುಡಿಯುವ ನೀರು, ವಿದ್ಯುತ್‌ ಹಾಗೂ ಪರಿಸರ ಸಂರಕ್ಷಣೆ ಆದ್ಯತೆ ನೀಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ.ಗಳನ್ನು ಪಾಲಿಕೆಯಿಂದ ವೆಚ್ಚ ಮಾಡಲಾಗುವುದು ಎಂದು ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ವಿವಿಧ ಯೋಜನೆಗಳಿಗೆ ವೆಚ್ಚ ಮಾಡುತ್ತಿರುವ ಪ್ರಮಾಣದ ಶೇ.50 ರಷ್ಟು ಮಾತ್ರ ತೆರಿಗೆ ರೂಪದಲ್ಲಿ ಸಂಗ್ರಹಿಸುತ್ತಿದ್ದು, ಉಳಿದ ಅನುದಾನವನ್ನು ಸರ್ಕಾರ ಒದಗಿಸುತ್ತಿದೆ. ಅದರಂತೆ ಕಳೆದ ವರ್ಷ 8,500 ಕೋಟಿ ರೂ. ಹಾಗೂ ಪ್ರಸಕ್ತ ಸಾಲಿನಲ್ಲಿ 11,500 ಕೋಟಿ ರೂ. ವೆಚ್ಚದ ವಿವಿಧ ಯೋಜನೆಯ ಬಜೆಟ್‌ಗೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಹರ್ಷವ್ಯಕ್ತಪಡಿಸಿದರು.

ಸರ್ಕಾರದಿಂದ 3.35 ಕೋಟಿ ರೂ. ನೆರವು: ನೆದರ್‌ಲ್ಯಾಂಡ್‌ ಸಂಸ್ಥೆಯೊಂದಿಗೆ ಒಟ್ಟು 4.75 ಕೋಟಿ ರೂ. ಮೊತ್ತದ ಯೋಜನೆಗಳ ಒಡಂಬಡಿಕೆ ಮಾಡಿಕೊಂಡಿದ್ದು, ಡಚ್‌ ಸರ್ಕಾರ 70 ಲಕ್ಷ ರೂ., ಸ್ವೀಪ್‌ ಸ್ಮಾರ್ಟ್‌ಸಂಸ್ಥೆ 70 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ 3.35 ಕೋಟಿ ರೂ. ಹೂಡಿಕೆ ಮಾಡಲಿವೆ. ಆ ಮೂಲಕ ನಗರದಲ್ಲಿನ 10 ಒಣ ತ್ಯಾಜ್ಯ ವಿಲೇವಾರಿ ಘಟಕಗಳು ಉನ್ನತೀಕರಣ ಹಾಗೂ ಅತ್ಯಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next