ಬೆಂಗಳೂರು: ರಾಜ್ಯದಲ್ಲಿರುವ ನಾಗರಿಕ ಹಕ್ಕು ನಿರ್ದೇಶನಾಲಯದ 33 ವಿಶೇಷ ಘಟಕ ಗಳನ್ನು ಇನ್ನು ಮುಂದೆ ಪೊಲೀಸ್ ಠಾಣೆಗಳೆಂದು ಪರಿಗಣಿಸಿ ಎಫ್ಐಆರ್ ದಾಖಲಿಸುವ ಮಹತ್ವದ ಅಧಿಕಾರವ ನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಅಲ್ಲದೆ 450 ಸಿಬಂದಿ ನೇಮಕಕ್ಕೂ ಅನುಮೋದನೆ ನೀಡಲಾಗಿದೆ.
ವಿಶೇಷವಾಗಿ ಜಾತಿ ನಿಂದನೆ, ದಲಿತ ದೌರ್ಜನ್ಯ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪೊಲೀಸ್ ಠಾಣೆಯ ಮಾನ್ಯತೆ ಕೊಟ್ಟು, ಅವುಗಳಿಗೆ ಸಿಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ತನಿಖೆಯ ಗುಣಮಟ್ಟವನ್ನು ಹೆಚ್ಚಿಸುವುದು ಸರಕಾರದ ಗುರಿಯಾಗಿದೆ ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಹಾಗೂ ಸಮಾಜ ಕಲ್ಯಾಣ ಸಚಿವ ಡಾ| ಎಚ್. ಸಿ. ಮಹದೇವಪ್ಪ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಈ ಠಾಣೆಗಳನ್ನು ಪ್ರಾರಂಭಿಸಲಾಗುತ್ತದೆ. ಇದಕ್ಕೆ 37.79 ಕೋಟಿ ರೂ.ಹಣಕಾಸು ಅಗತ್ಯವಿದೆ. ಉತ್ತರದ ರಾಜ್ಯಗಳಲ್ಲಿ ಇಂಥ ಪ್ರಕರಣಗಳಲ್ಲಿ ಶೇ. 50ರಷ್ಟು ಶಿಕ್ಷೆ ಪ್ರಮಾಣವಿದ್ದರೆ ರಾಜ್ಯದಲ್ಲಿ ಶೇ. 3ರಷ್ಟಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸಮಗ್ರ ಹಾಗೂ ತ್ವರಿತವಾಗಿ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಈ ಠಾಣೆಗಳಿಗೆ ಅಗತ್ಯ ಸಿಬಂದಿ ಹಾಗೂ ಮೂಲ ಸೌಕರ್ಯದ ಅಗತ್ಯವಿದೆ. ವಿವಿಧ ಹಂತದ 450 ಸಿಬಂದಿ ನೇಮಕಕ್ಕೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
4
50 ಸಿಬಂದಿ ನೇಮಕಕ್ಕೂ ಸಂಪುಟ ಸಭೆಯಲ್ಲಿ ಒಪ್ಪಿಗೆ
ಜಾತಿ ನಿಂದನೆ, ದಲಿತ ದೌರ್ಜನ್ಯಗಳಂತಹ ಪ್ರಕರಣಗಳ ದಾಖಲು
ಇಂಥ ಪ್ರಕರಣಗಳ ತ್ವರಿತ ವಿಚಾರಣೆ, ಶಿಕ್ಷೆ ವಿಧಿಸಲು ಈ ತೀರ್ಮಾನ