ಕಳೆದ ಐದಾರು ತಿಂಗಳಿನಲ್ಲಿ ಕೋವಿಡ್ ಲಾಕ್‌ಡೌನ್‌ನಿಂದಾಗಿ ಇತರರಂತೆ, ಉಪ್ಪಿ ಅವರ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿದೆಯಂತೆ. ಈ ವೇಳೆ ಉಪ್ಪಿ ಸಿನಿಮಾ ಶೂಟಿಂಗ್, ಪ್ರಜಾಕೀಯದ ಓಡಾಟಗಳನ್ನು ಮತ್ತಿತರ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ಈ ಸಮಯವನ್ನು ಉಪ್ಪಿ ಒಂದಷ್ಟು ರಚನಾತ್ಮಕ ಕೆಲಸಗಳಲ್ಲಿ ವಿನಿಯೋಗಿಸಿದ್ದಾರೆ. ಅವರೇ ಹೇಳುವಂತೆ, “ಕೊರೊನಾ ಲಾಕ್‌ಡೌನ್ ನಮ್ಮ ಆ್ಯಕ್ಟಿವಿಟಿಸ್‌ಗೆ ಒಂದಷ್ಟು ಬ್ರೇಕ್ ಹಾಕಿದ್ದೇನೋ ನಿಜ.
ಆದ್ರೆ ಈ ಸಮಯವನ್ನ ನಾನು ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡೆ. ಅದರ ಭಾಗವಾಗಿ ತಮ್ಮ ತೋಟದಲ್ಲಿ ಒಂದಷ್ಟು ಸಹಜ ಕೃಷಿ ಪ್ರಯೋಗಗಳನ್ನು ಮಾಡಿದೆವು. ಅದು ಒಳ್ಳೆಯ ರಿಸಲ್ಟ್ ಕೊಟ್ಟಿತು. ಕೃಷಿಯಲ್ಲಿ ನಾವು ಏನೇನು ಪ್ರಯೋಗಗಳನ್ನ ಮಾಡಬಹುದು ಅಂಥ ಸ್ವತಃ ನನ್ನ ಅನುಭವಕ್ಕೆ ಬಂದಿತು. ಅಲ್ಲದೆ ಮುಂದೆ ಯಾವಾಗಲಾದ್ರೂ ಉಪಯೋಗಕ್ಕೆ ಬಂದ್ರೂ ಬರಬಹುದು ಅಂಥ ಒಂದಷ್ಟು ಒಳ್ಳೆಯ ಸಬ್ಜೆಕ್ಟ್ ಗಳನ್ನು ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಮಿಕ್ಕಂತೆ ಹೇಳಬೇಕು ಅಂದ್ರೆ ನಮ್ಮನ್ನ ನಾವು ತಿಳಿದುಕೊಳ್ಳೋಕ ಇದು ಒಳ್ಳೆಯ ಟೈಮ್ ಆಗಿತ್ತು ಎನ್ನುತ್ತಾರೆ ಉಪ್ಪಿ.
“ನಾವೆಲ್ಲ ಗ್ರೇಟ್! ಏನೋ ಮಾಡ್ತೀವಿ ಅಂಥ ಇಷ್ಟು ದಿನ ಭ್ರಮೆಯಲ್ಲಿದ್ದೆವು. ಆದ್ರೆ ಒಂದೇ ಒಂದು ಕೋವಿಡ್ ನೀವೆಲ್ಲ ಏನೂ ಅಲ್ಲ. ನಿಮ್ಗಿಂತ ಗ್ರೇಟ್ ಬೇರೆ ಏನೋ ಇದೆ ಅಂಥ ತೋರಿಸಿಕೊಟ್ಟಿದೆ. ಇನ್ನಾದ್ರೂ ನಾವು ಇದನ್ನ ಅರ್ಥ ಮಾಡಿಕೊಳ್ಬೇಕು. ಪ್ರಕೃತಿಗಿಂತ ಯಾರೂ ದೊಡ್ಡವರಲ್ಲ. ಪ್ರಕೃತಿ ಜೊತೆ ಹೋರಾಟ ಮಾಡೋದನ್ನ ಬಿಟ್ಟು, ಹೊಂದಾಣಿಕೆ ಮಾಡಿಕೊಂಡು ಬದುಕೋದನ್ನ ಕಲಿಯಬೇಕು. ಅವಾಗ ಪ್ರಕೃತಿನೇ ನಮ್ಮನ್ನ ಕಾಪಾಡುತ್ತೆ…’ ಹೀಗೆ ಹೇಳುತ್ತ ವಾಸ್ತವತೆ ತೆರೆದಿಡುತ್ತಾರೆ ನಟ ಕಂ ನಿರ್ದೇಶಕ, ರಿಯಲ್ ಸ್ಟಾರ್ ಉಪೇಂದ್ರ. ಸದ್ಯ ಉಪೇಂದ್ರ ಏಕಕಾಲಕ್ಕೆ ಕನ್ನಡ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ಮಾಣ ಸಂಸ್ಥೆಯ “ಬಾಕ್ಸರ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ “ಹೋಮ್ ಮಿನಿಸ್ಟರ್’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆನ್ಸಾರ್‌ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಹೋಮ್ ಮಿನಿಸ್ಟರ್’ ಥಿಯೇಟರ್‌ಗಳು ತೆರೆಯುತ್ತಿದ್ದಂತೆ,
ಬಿಡುಗಡೆಯಾಗಲಿದೆ. ಇನ್ನು ಉಪೇಂದ್ರ ಅಭಿನಯದ “ಕಬ್ಜ’ ಚಿತ್ರ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಆರ್. ಚಂದ್ರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಒಂದಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಕಿಯಿರುವ ಚಿತ್ರೀಕರಣ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಇದರೊಂದಿಗೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸುತ್ತಿರುವ ಇನ್ನೂ ಟೈಟಲ್ ಅಂತಿಮವಾಗದ ಹೊಸಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಆ ಚಿತ್ರ ಕೂಡ ಈ ವರ್ಷದ ಕೊನೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಶಶಾಂಕ್ ಮತ್ತು ಮಂಜು ಮಾಂಡವ್ಯ ನಿರ್ದೇಶನದ ಎರಡು ಚಿತ್ರಗಳಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದು, ಆ ಚಿತ್ರಗಳ ಟೈಟಲ್ ಮತ್ತಿತರ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.