ಉಪೇಂದ್ರ ಅವರು ಕೆಪಿಜೆಪಿ ಪಕ್ಷ ಸೇರಿದ್ದು, ಈ ಬಾರಿಯ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದ್ದು, ಕೊನೆಗೆ ಆ ಪಕ್ಷದ ಸಂಸ್ಥಾಪಕರೊಂದಿಗೆ ಮುನಿಸಿಕೊಂಡು ಹೊರಬಂದಿದ್ದು ಎಲ್ಲವೂ ನಿಮಗೆ ಗೊತ್ತೇ ಇದೆ. ಈ ನಡುವೆಯೇ ಅವರು “ಪ್ರಜಾಕೀಯ’ ಪಕ್ಷ ಸ್ಥಾಪಿಸಿ, ಚುನಾವಣೆಗೆ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತಾದರೂ, ಅದು ಈ ಬಾರಿ ಸಾಧ್ಯವಾಗಿಲ್ಲ. ಸಹಜವಾಗಿಯೇ ಉಪೇಂದ್ರ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಅನೇಕರಲ್ಲಿತ್ತು.
ಅನೇಕರು ಉಪೇಂದ್ರ ಮತ್ತೆ ಸಿನಿಮಾದಲ್ಲೇ ಮುಂದುವರೆಯುತ್ತಾರೆಂದು ಲೆಕ್ಕಾಚಾರ ಹಾಕಿದ್ದರು. ಅದರಂತೆ ಈಗ ಉಪೇಂದ್ರ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ಆರ್.ಚಂದ್ರು ನಿರ್ದೇಶನದ ಸಿನಿಮಾ. ನಿರ್ದೇಶಕ ಆರ್.ಚಂದ್ರು ಈ ಹಿಂದೆ “ಐ ಲವ್ ಯೂ’ ಎಂಬ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಆಗ ಸಿನಿಮಾಕ್ಕೆ ನಾಯಕನ ಆಯ್ಕೆಯಾಗಿರಲಿಲ್ಲ. ಈಗ ಆ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿರುವ ಸುದ್ದಿ ಬಂದಿದೆ.
ಅಲ್ಲಿಗೆ ಉಪೇಂದ್ರ ಮತ್ತೆ ಬಣ್ಣ ಹಚ್ಚುವುದು ಪಕ್ಕಾ ಆಗಿದೆ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ಔಟ್ ಅಂಡ್ ಔಟ್ ಲವ್‌ಸ್ಟೋರಿ. ಹಾಗಾದರೆ ಉಪೇಂದ್ರ ಈ ಚಿತ್ರದಲ್ಲಿ, ಈ ವಯಸ್ಸಲ್ಲಿ ಲವರ್ ಬಾಯ್ ಆಗುತ್ತಿದ್ದಾರಾ ಎಂದು ನೀವು ಕೇಳಬಹುದು. ಮೂಲಗಳ ಪ್ರಕಾರ, ಇದು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆ ಎನ್ನಲಾಗಿದೆ.
ಈ ಮೂರು ಶೈಲಿಯ ಜೊತೆಗೆ ಚಂದ್ರು ಅವರ ಶೈಲಿ ಇರಲಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಈ ಚಿತ್ರದಲ್ಲಿ ಉಪೇಂದ್ರ ಅವರ ಗೆಟಪ್ ಕೂಡಾ ವಿಭಿನ್ನವಾಗಿರಲಿದೆಯಂತೆ. ಅದಕ್ಕಾಗಿ ಮುಂಬೈ ತಂಡ ಕೂಡಾ ಬರಲಿದೆಯಂತೆ. ಚಿತ್ರದ ಮುಹೂರ್ತ ಮೇ 18 ರಂದು ನಡೆಯಲಿದೆ. ಅಂದಹಾಗೆ, ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ತಯರಾಗುತ್ತಿದೆ.
ಈಗಾಗಲೇ ಉಪೇಂದ್ರ ತೆಲುಗಿನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಇನ್ನು, ಆರ್.ಚಂದ್ರು ಕೂಡಾ “ಚಾರ್‌ಮಿನಾರ್’ ರೀಮೇಕ್ ಅನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದಾರೆ. ಹಾಗಾಗಿ, ಇಬ್ಬರಿಗೂ ತೆಲುಗು ಚಿತ್ರರಂಗ ಹೊಸದಲ್ಲ. ಇನ್ನು, ಆರ್.ಚಂದ್ರು ಹಾಗೂ ಉಪೇಂದ್ರ ಈ ಚಿತ್ರದ ಮೂಲಕ ಎರಡನೇ ಬಾರಿಗೆ ಜೊತೆಯಾಗುತ್ತಿದ್ದಾರೆ.
ಈಗಾಗಲೇ ಇವರಿಬ್ಬರ ಕಾಂಬಿನೇಶನ್‌ನಲ್ಲಿ “ಬ್ರಹ್ಮ’ ಎಂಬ ಚಿತ್ರ ಬಂದಿತ್ತು. ಈಗ “ಐ ಲವ್ ಯೂ’ ಮೂಲಕ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕೆ ನಾಯಕಿ ಸೇರಿದಂತೆ ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ತೆಲುಗು ಚಿತ್ರರಂಗದ ರಾಜ್‌ಪ್ರಭಾಕರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ, ಉಪೇಂದ್ರ ಅವರು ಮತ್ತೆ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಅವರ ಹಳೆಯ ಸಿನಿಮಾಗಳಿಗೂ ಜೀವ ಬರುವ ಸಾಧ್ಯತೆ ಇದೆ.
ಈಗಾಗಲೇ ಉಪೇಂದ್ರ ಜೊತೆ ಸಿನಿಮಾ ಮಾಡುವುದಾಗಿ ಶಶಾಂಕ್, ಮಂಜು ಮಾಂಡವ್ಯ, ಗುರುದತ್ ಹಾಗೂ ಉದಯ್ ಪ್ರಕಾಶ್ ಘೋಷಿಸಿಕೊಂಡಿದ್ದರು. ಉಪೇಂದ್ರ ರಾಜಕೀಯ ಪ್ರವೇಶದ ಘೋಷಣೆಯಾಗುತ್ತಿದ್ದಂತೆ ಆ ಸಿನಿಮಾ ಕೆಲಸಗಳು ಕೂಡಾ ಸ್ಥಗಿತಗೊಂಡಿದ್ದವು. ಈಗ ಉಪೇಂದ್ರ ಮತ್ತೆ ನಟಿಸುವುದಕ್ಕೆ ಶುರು ಮಾಡಿರುವುದರಿಂದ, ಆ ಚಿತ್ರಗಳು ಸೆಟ್ಟೇರಿದರೂ ಆಶ್ಚರ್ಯವಿಲ್ಲ.