Advertisement
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕವಾಗಿರುವ ದಲಿತ ಮತ್ತು ಲಿಂಗಾಯತ ಮತಗಳು ವಿಭಜನೆಯಾಗಿದೆಯೇ ಎಂಬ ಅಂಶದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Related Articles
Advertisement
ಕಾಂಗ್ರೆಸ್ ಹೇಳುವುದೇನು?: ದಲಿತರು ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದಾರೆ. ನಂಜನಗೂಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವುದರಿಂದ ದಲಿತ ಸಮುದಾಯದ ಮತಗಳು ಹಂಚಿಕೆಯಾಗುತ್ತದೆ. ಮೇಲಾಗಿ ಗುಂಡ್ಲುಪೇಟೆ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್.ಮಹದೇವಪ್ರಸಾದ್ ಅವರ ಪ್ರಭಾವ ಈ ಕ್ಷೇತ್ರದಲ್ಲೂ ಇತ್ತು. ಹೀಗಾಗಿ ಲಿಂಗಾಯತ ಮತಗಳೂ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್‌ಗೆ ಬೀಳಲಿದೆ. ಜತೆಗೆ ಹಿಂದಿಳಿದ ಸಮುದಾಯದ ಮತಗಳಲ್ಲಿ ಹೆಚ್ಚಿನ ಪಾಲು ಸೇರಿದಂತೆ ಇತರೆ ಸಮುದಾಯಗಳ ಮತಗಳೂ ಬರಲಿದ್ದು, ಕಾಂಗ್ರೆಸ್ ಗೆಲುವು ಖಚಿತ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಗುಂಡ್ಲುಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹದೇವಪ್ರಸಾದ್ ಅವರ ಪತ್ನಿಯೇ ಕಣಕ್ಕಿಳಿದಿರುವುದರಿಂದ ಅನುಕಂಪದ ಆಧಾರದ ಮೇಲೆ ಮತಗಳು ಅವರಿಗೆ ಬೀಳುತ್ತದೆ. ಅಲ್ಲದೆ, ಇಲ್ಲಿ ದಲಿತರ ಮತಗಳು ಪಕ್ಷಕ್ಕೆ ಬರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಳಿದಂತೆ ಹಿಂದುಳಿದವರು ಸೇರಿದಂತೆ ಇತರೆ ಸಮುದಾಯದ ಮತಗಳು ಹಂಚಿಕೆಯಾದರೆ ಕಾಂಗ್ರೆಸ್ ಗೆಲುವಿಗೆ ಸಮಸ್ಯೆಯಾಗದು ಎಂಬ ಲೆಕ್ಕಾಚಾರ ಹಾಕಲಾಗಿದೆ.
ಬಿಜೆಪಿ ಲೆಕ್ಕಾಚಾರವೇನು?: ನಂಜನಗೂಡು ಕ್ಷೇತ್ರದ ಶಾಸಕರಾಗಿದ್ದ ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಕಾಂಗ್ರೆಸ್ ಒಬ್ಬ ದಲಿತ ಸಮುದಾಯದ ನಾಯಕನಿಗೆ ಅನ್ಯಾಯ ಮಾಡಿದ್ದರಿಂದ ಅವರು ಬಿಜೆಪಿ ಸೇರಿ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ದಲಿತರ ಮತಗಳು ಬಿಜೆಪಿಯತ್ತ ಕ್ರೋಢೀಕೃತವಾಗುತ್ತದೆ. ಜತೆಗೆ ಪ್ರಸ್ತುತ ಲಿಂಗಾಯತ ಸಮುದಾಯದ ರಾಜಕೀಯ ನಾಯಕ ಎನಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರೊಚ್ಚಿಗೆದ್ದು ಪ್ರಚಾರ ನಡೆಸಿದ್ದರಿಂದ ಆ ಸಮುದಾಯದ ಮತಗಳು ಬೀಳುತ್ತವೆ. ಉಳಿದಂತೆ ಮೇಲ್ವರ್ಗದವರ ಮತಗಳು ಹೆಚ್ಚಾಗಿ ಬಿಜೆಪಿ ಪಾಲಾಗಲಿದ್ದು, ಗೆಲುವಿಗೆ ಸಮಸ್ಯೆಯಾಗದು ಎನ್ನುವುದು ಬಿಜೆಪಿ ಹೊಂದಿರುವ ಭರವಸೆ.
ಅದೇ ರೀತಿ ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಿರಂಜನಕುಮಾರ್ ಅವರ ಕುಟುಂಬ ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಸೋತಿದ್ದರಿಂದ (ಎರಡು ಬಾರಿ ನಿರಂಜನಕುಮಾರ್, ಎರಡು ಬಾರಿ ಅವರ ತಂದೆ) ಅನುಕಂಪ ತಮ್ಮ ಅಭ್ಯರ್ಥಿ ಮೇಲೂ ಇದೆ. ನಂಜನಗೂಡು ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್ ವಿರುದ್ಧ ಇರುವುದರಿಂದ ಅದರ ಪ್ರಭಾವ ಈ ಕ್ಷೇತ್ರದ ಮೇಲೂ ಬೀರುತ್ತದೆ. ಜತೆಗೆ ಯಡಿಯೂರಪ್ಪ ಅವರ ಸತತ ಪ್ರಚಾರ ಲಿಂಗಾಯತ ಸಮುದಾಯದವನ್ನು ಬಿಜೆಪಿಯತ್ತ ಸೆಳೆದಿದೆ. ಜತೆಗೆ ಮೇಲ್ವರ್ಗದ ಮತಗಳು ಸೇರಿ ಬಿಜೆಪಿ ಗೆಲುವು ನಿಶ್ಚಿತ ಎನ್ನುವುದು ಪಕ್ಷದ ಲೆಕ್ಕಾಚಾರ.
ಏನೇ ಆದರೂ ಈಗ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭದ್ರವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಿರುವ ಸೋಲು-ಗೆಲುವಿನ ಲೆಕ್ಕಾಚಾರಗಳಿಗೆ ಏ. 13ರಂದು ಉತ್ತರ ಸಿಗಲಿದೆ.