Advertisement

Acid victim ಜತೆ ಸೆಲ್ಫಿ:ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ ಸಸ್ಪೆಂಡ್‌

11:12 AM Mar 25, 2017 | udayavani editorial |

ಲಕ್ನೋ : ಸೆಲ್ಫಿ ಹುಚ್ಚಿಗೆ  ಜನಸಾಮಾನ್ಯರು ಮಾತ್ರವಲ್ಲ; ಪೊಲೀಸರು ಕೂಡ ಒಳಗಾಗಿದ್ದಾರೆ;ಅದರಲ್ಲೂ ಮಹಿಳಾ ಪೊಲೀಸರೂ ಸೇರಿದ್ದಾರೆ !

Advertisement

ಗ್ಯಾಂಗ್‌ ರೇಪ್‌ ಹಾಗೂ ಆ್ಯಸಿಡ್‌ ಸಂತ್ರಸ್ತೆಯ ಆಸ್ಪತ್ರೆಯ ಬೆಡ್‌ನ‌ಲ್ಲಿ ನರಳುತ್ತಿರುವಾಗ ಆಕೆಯ ಕಾವಲಿಗಿದ್ದ ಮೂವರು ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಸೆಲ್ಫಿ ತೆಗೆಸಿಕೊಂಡ ಕಾರಣಕ್ಕೆ ಈಗ ಮೂವರಲ್ಲಿ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗ‌ಳು ಅಮಾನತುಗೊಂಡಿದ್ದಾರೆ. ಲಕ್ನೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಈ ಘಟನೆ ನಡೆದಿದೆ. 

ಲಕ್ನೋದ ಕಿಂಗ್‌ ಜಾರ್ಜ್‌ ಮೆಡಿಕಲ್‌ ಆಸ್ಪತ್ರೆಯ ಟ್ರೋಮಾ ಸೆಂಟರ್‌ ಒಳಗಡೆ ಮೂವರು ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಸಂತ್ರಸ್ತೆಯ ಬೆಡ್‌ ಸಮೀಪವೇ ಕುಳಿತುಕೊಂಡು ಸೆಲ್ಫಿ ತೆಗೆಸಿಕೊಂಡಿರುವುದು ಅವರು ತೆಗಿದಿರುವ ಚಿತ್ರದ ಮೂಲಕ ಖಚಿತವಾಗಿದೆ.

ಹೀಗೆ ಸೆಲ್ಫಿ ತೆಗೆಸಿಕೊಂಡ ಮೂವರು ಮಹಿಳಾ ಕಾನ್‌ಸ್ಟೆಬಲ್‌ಗ‌ಳ ಈ ಕೃತ್ಯವನ್ನು ಸಂವೇದನಾರಾಹಿತ್ಯದ ಕೃತ್ಯವೆಂದು ಹೇಳಿದ್ದು ಇವರ ವಿರುದ್ಧ ತತ್‌ಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಮೂವರು ಮಹಿಳಾ ಕಾನ್‌ಸ್ಟೆಬಲ್‌ಗ‌ಳ ಪೈಕಿ ಇಬ್ಬರಾದ ರಜನಿ ಬಾಲಾ ಸಿಂಗ್‌ ಮತ್ತು ಡೇಸಿ ಸಿಂಗ್‌ ಅವರನ್ನು ತನಿಖೆಯ ಬಳಿಕ ಅಮಾನತು ಮಾಡಲಾಗಿದೆಯಾದರೆ ಮೂರನೇ ಮಹಿಳಾ ಕಾನ್‌ಸ್ಟೆಬಲ್‌ ವಿರುದ್ಧ ತನಿಖೆ ನಡೆಯುತ್ತಿದೆ. 

Advertisement

45ರ ಹರೆಯದ ಮಹಿಳೆಗೆ ಇಬ್ಬರು ಪುರುಷರು ರೈಲಿನಲ್ಲಿ ಬಲವಂತದಿಂದ ಆ್ಯಸಿಡ್‌ ಕುಡಿಸಿದ್ದಾರೆ. ಇದೇ ಶಂಕಿತರ ಸಮೂಹದಿಂದ ಈ ಮಹಿಳೆಯು ನಾಲ್ಕನೇ ಬಾರಿಗೆ ದಾಳಿಗೆ ಗುರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಗ್ಯಾಂಗ್‌ ರೇಪ್‌ ಹಾಗೂ ಆ್ಯಸಿಡ್‌ ಸಂತ್ರಸ್ತ ಮಹಿಳೆಯು ಕಳೆದ ಗುರುವಾರ ಬೆಳಗ್ಗೆ ಲಕ್ನೋದ ಚಾರ್‌ಬಾಗ್‌ ಸ್ಟೇಶನ್‌ನಲ್ಲಿ ಅಲಹಾಬಾದ್‌ – ಲಕ್ನೋ ಗಂಗಾ ಗೋಮತಿ ಎಕ್ಸ್‌ಪ್ರೆಸ್‌ ರೈಲಿನಿಂದ ಇಳಿದ ಬಳಿಕವೇ ಆಕೆ ರೈಲಿನಲ್ಲಿ ಅನುಭವಿಸಿದ್ದ ಚಿತ್ರಹಿಂಸೆ ಬೆಳಕಿಗೆ ಬಂದಿದೆ.

ಸಂತ್ರಸ್ತ ಮಹಿಳೆ ಅದ್ಹೇಗೋ ಕಷ್ಟಪಟ್ಟು ಕಾಗದದ ತುಂಡೊಂದರಲ್ಲಿ ಕಾಮಾಂಧರು ತನಗೆ ನೀಡಿದ್ದ ಚಿತ್ರಹಿಂಸೆಯ ವಿವರಗಳನ್ನು ಗೀಚಿ ಅದನ್ನು ಸರಕಾರಿ ರೈಲ್ವೇ ಪೊಲೀಸರಿಗೆ ನೀಡಿದ್ದಳು. 

Advertisement

Udayavani is now on Telegram. Click here to join our channel and stay updated with the latest news.

Next