ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಸಂಕೊಳಿಗೆ ಬಳಿ ಟ್ಯಾಂಕರ್ನಿಂದ ಸೋರಿಕೆಯಾಗಿದ್ದ ಹೈಡ್ರೋಕ್ಲೋಡಿಕ್ ಆ್ಯಸಿಡ್ ಸೋರಿಕೆಯಾಗಿದ್ದು, ಸಂಭಾವ್ಯ ಅನಾಹುತ ತಪ್ಪಿದೆ. ಆ್ಯಸಿಡ್ನ ವರ್ಗಾವಣೆ ಕಾರ್ಯ ಮಂಗಳವಾರ ನಸುಕಿನ ಜಾವ ಮೂರು ಗಂಟೆಗೆ ನಡೆದಿದೆ.
ಟ್ಯಾಂಕರ್ನಲ್ಲಿದ್ದ ಆ್ಯಸಿಡ್ ಅನ್ನು ಬದಲಿ ವಾಹನಕ್ಕೆ ವರ್ಗಾವಣೆ ಮಾಡುವ ಕಾರ್ಯ ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಗಿದಿದ್ದು, ಕಾರವಾರದಿಂದ ತಂತ್ರಜ್ಞರ ವಿಳಂಬ ಆಗಮನದಿಂದ ಹೆದ್ದಾರಿಯಲ್ಲಿ ಉಳ್ಳಾಲ ಕಂದಾಯ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಮತ್ತು ಸೋಮೇಶ್ವರ ಪುರಸಭಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆ್ಯಸಿಡ್ ವಾಸನೆಯೊಂದಿಗೆ ಬೆಳಗ್ಗಿನವರೆಗೆ ಕಾಯಬೇಕಾಯಿತು.
ಕಾರವಾರದ ಸಂಸ್ಥೆಯಿಂದ ಕೇರಳದ ಕೊಚ್ಚಿನ್ಗೆ ಟ್ಯಾಂಕರ್ನಲ್ಲಿ ಸಾಗಾಟವಾಗುತ್ತಿದ್ದ ಹೈಡ್ರೋಕ್ಲೋರಿಕ್ ಆ್ಯಸಿಡ್ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಸಂಕೊಳಿಗೆ ಬಳಿ ಸೋರಿಕೆಯಾಗಿದ್ದು, ಟ್ಯಾಂಕರ್ನ ಹಿಂದೆ ಇದ್ದ ವಾಹನ ಚಾಲಕರು ಮಾಹಿತಿ ನೀಡಿ ಟ್ಯಾಂಕರನ್ನು ಉಚ್ಚಿಲ – ಕೆ.ಸಿ. ರೋಡ್ ನಡುವಿನ ಎಂಆರ್ಪಿಎಲ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಟ್ಯಾಂಕರ್ನಿಂದ ಆ್ಯಸಿಡ್ ವರ್ಗಾವಣೆ ಮಾಡುವ ಕಾರ್ಯ ಆರಂಭಗೊಂಡಿತ್ತು. ಟ್ಯಾಂಕರ್ನಲ್ಲಿದ್ದ 15 ಸಾವಿರ ಲೀಟರ್ ಆ್ಯಸಿಡ್ ಅನ್ನು ಎಸ್ಡಿಆರ್ಎಫ್, ಎಂಆರ್ಪಿಎಲ್, ಎಂಸಿಎಫ್ ಮತ್ತು ಬಿಎಎಸ್ಎಫ್ನ ತಂತ್ರಜ್ಞರು ಎಂಸಿಎಫ್ನಿಂದ ತಂದಿದ್ದ ಕಂಟೈನರ್ಗೆ ವರ್ಗಾವಣೆ ಮಾಡಿದ್ದು, ಉಳಿದ ಆ್ಯಸಿಡ್ ವರ್ಗಾವಣೆಗೆ ಕಾರವಾರದಿಂದ ಬದಲಿ ವಾಹನ ಮತ್ತು ತಂತ್ರಜ್ಞರ ಬರುವಿಕೆಯನ್ನು ಕಾಯಲಾಗಿತ್ತು.
ಸೋಮವಾರ ರಾತ್ರಿ 10 ಗಂಟೆಗ ಬದಲಿ ಟ್ಯಾಂಕರ್ ಆಗಮಿಸಿದ್ದರೂ, ಟೆಕ್ನೀಷಿಯನ್ಗಳು ಆಗಮಿಸುವಾಗ ನಡುರಾತ್ರಿ ಒಂದು ಗಂಟೆಯಾಗಿದ್ದು, ಎರಡು ಗಂಟೆಗಳ ಕಾಲ ಬದಲಿ ಟ್ಯಾಂಕರ್ಗೆ ವರ್ಗಾವಣೆ ಮಾಡಿದ ಬಳಿಕ ಬೆಳಗ್ಗೆ ಕಂಟೈನರ್ನಲ್ಲಿ ತುಂಬಿಸಿದ್ದ ಆ್ಯಸಿಡ್ ಅನ್ನು ಟ್ಯಾಂಕರ್ಗೆ ವರ್ಗಾವಣೆ ಮಾಡಲಾಯಿತು. ಕಾರವಾರದ ಕಂಪೆನಿಗೆ 12.30ಕ್ಕೆ ಘಟನೆಯ ವಿವರ ನೀಡಿದ್ದರೂ, ಟೆಕ್ನೀಷಿಯನ್ಗಳು ಆಗಮಿಸುವಾಗ ತಡವಾದ ಕಾರಣ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬಂದಿ ತಡರಾತ್ರಿವರೆಗೆ ಕಾಯುವಂತಾಯಿತು.