ಮುಂಬೈ: ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಅದ್ದೂರಿಯಾಗಿ ಆರಂಭವಾಗಿದೆ. ಮೊದಲೆರಡು ಪಂದ್ಯಗಳು ನಡೆದಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಾಗಿದೆ. ಯುಪಿ ವಾರಿಯರ್ಸ್ ತಂಡವು ತಾನಾಡಿದ ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಮೂರನೇ ಕ್ರಮಾಂಕದಲ್ಲಿ ಆಡಿದ ಕಿರಣ್ ನವಗಿರೆ ಅವರು ಅರ್ಧಶತಕ ಸಿಡಿಸಿ ಮಿಂಚಿದರು.
ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರಿಗೆ ಕಿರಣ್ ನವಗಿರೆ ಹೇಗೆ ಗೌರವ ಸಲ್ಲಿಸಿದರು ಎಂಬುದನ್ನು ಸಾಮಾಜಿಕ ಮಾಧ್ಯಮದ ಜನರು ಗಮನಿಸಿದರು. ನವಗಿರೆ ತನ್ನ ಬ್ಯಾಟ್ ನ ಹಿಂಭಾಗದಲ್ಲಿ ಮಾರ್ಕರ್‌ನೊಂದಿಗೆ ‘MSD 07’ ಎಂದು ಬರೆದಿದ್ದು, ಧೋನಿಗೆ ಗೌರವ ಸೂಚಿಸಿದರು.
ಇದನ್ನೂ ಓದಿ:ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ನಿಂದ ಬಂದ್ ಕರೆ: ಸಿಎಂ ಬೊಮ್ಮಾಯಿ
170 ರನ್ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಆರಂಭದಲ್ಲಿ 20 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ತಂಡವನ್ನು ಆಧರಿಸಿದ ಕಿರಣ್ ಆಕರ್ಷಕ ಅರ್ಧಶತಕ ಬಾರಿಸಿದರು. 43 ಎಸೆತ ಎದುರಿಸಿದ ಕಿರಣ್ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಸಹಿತ 53 ರನ್ ಗಳಿಸಿದರು. ಅಲ್ಲದೆ ದೀಪ್ತಿ ಶರ್ಮಾ ಜೊತೆ ಸೇರಿ ಅತ್ಯಮೂಲ್ಯ ಜೊತೆಯಾಟವಾಡಿದರು.
ಕೊನೆಯಲ್ಲಿ ಗ್ರೇಸ್ ಹ್ಯಾರಿಸ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ತಂಡವು ಒಂದು ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.