Advertisement

ಬುಂದೇಲ್‌ಖಂಡಕ್ಕೆ ಅಭಿವೃದ್ಧಿ ಕೊಡುವವರು ಯಾರು?

11:51 PM Feb 15, 2022 | Team Udayavani |

ದೇಶದಲ್ಲಿ ಆಳುವವರನ್ನು ನಿರ್ಧರಿಸುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳ ಮತದಾನಗಳ ಪೈಕಿ ಎರಡು ಈಗಾಗಲೇ ಮುಕ್ತಾಯಗೊಂಡಿದೆ. ಇತರ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದವರೇ ಹೆಚ್ಚಾಗಿ ಇರುವ ಬುಂದೇಲ್‌ಖಂಡ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಫೆ.20ರಂದು ನಡೆಯಲಿದೆ. ಝಾನ್ಸಿ, ಮಹೋಬಾ, ಹಮೀರ್‌ಪುರ್‌, ಲಲಿತ್‌ಪುರ್‌, ಜಲೌನ್‌ ಮತ್ತು ಚಿತ್ರಕೂಟ ಜಿಲ್ಲೆಗಳ 19 ವಿಧಾನಸಭಾ ಕ್ಷೇತ್ರಗಳಿಗೆ ಮತ ಕದನ ಫೆ.20ರಂದು ನಡೆಯಲಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆ, 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆದ್ದಿದ್ದಾರೆ.

Advertisement

ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿರುವ ಬುಂದೇಲ್‌ಖಂಡ್‌ನ‌ಲ್ಲಿ ಹಾಲಿ ದಿನಮಾನ ಗಳಲ್ಲಿಯೂ ಕೂಡ ಯೋಗ್ಯ ರೀತಿಯಲ್ಲಿ ಕುಡಿಯುವ ನೀರಿಗೆ ತತ್ವಾರವೇ. ಜತೆಗೆ ಉದ್ಯೋಗ, ಶಿಕ್ಷಣ, ಬೆಳೆಹಾನಿ, ಸೂಕ್ತ ನೀರಾವರಿಯ ಕೊರತೆ, ಹೆಚ್ಚುತ್ತಿರುವ ಕೃಷಿ ಸಾಲ ಮತ್ತು ಸ್ಥಳೀಯ ಶ್ರೀಮಂತರಿಂದ ಬಡವರು ಪಡೆದುಕೊಂಡ ಖಾಸಗಿ ಸಾಲದ ಹೆಚ್ಚಳ. ಹೀಗೆ ಪರಸ್ಪರ ಒಂದಕ್ಕೊಂದು ಪ್ರತ್ಯಕ್ಷ-ಪರೋಕ್ಷ ಕೊಂಡಿ ಇರುವ ಸಮಸ್ಯೆಗಳೇ ಇವೆ. ಇಂಥ ಪ್ರದೇಶದಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಕೂಡ ಅದುವೇ ಪುನರಾವರ್ತನೆ ಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮನೆ ಮನೆಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲ ಜೀವನ ಮಿಷನ್‌ ಅನುಷ್ಠಾನ ನಿಧಾನಗತಿ ಯಲ್ಲಿಯೇ ಇದೆ.

2021ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ 3,240 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆಗೆ ಆಂಶಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ. ಕೈಗಾರಿಕೆ ಮತ್ತು ಉದ್ದಿಮೆಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಝಾನ್ಸಿಯಲ್ಲಿ ರಕ್ಷಣ ಕಾರಿಡಾರ್‌ ಸ್ಥಾಪನೆ ಮಾಡಲಾಗಿದೆ. ಉತ್ತರ ಪ್ರದೇಶ ಸರಕಾರ ಮತ್ತು ಕೇಂದ್ರ ರಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ 400 ಕೋಟಿ ರೂ. ಮೌಲ್ಯದ ಉದ್ದಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಆದರೆ ಇದು ಬಿಜೆಪಿಗೆ ಯಾವ ರೀತಿಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿದೆ ಎಂದು ಪ್ರಧಾನ ಪ್ರಶ್ನೆಯಾಗಿದೆ.

ಅದಕ್ಕೆ ಪೂರಕವಾಗಿಯೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ ಬುಂದೇಲ್‌ಖಂಡ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಕ್ಷಣ ಕಾರಿಡಾರ್‌ ಸ್ಥಿತಿ ಏನಾಗಿದೆ ಎಂಬ ಅಂಶವನ್ನು ಪ್ರಶ್ನೆ ಮಾಡಿದ್ದಾರೆ. ಬಹುಕೋಟಿ ರೂ.ಗಳ ಯೋಜನೆಗಳ ಹೆಸರಿನಲ್ಲಿ ಬಿಜೆಪಿ ಮುಖಂಡರು ಜನರನ್ನು ಮರುಳುಗೊಳಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಅದನ್ನು ಸಾಕಾರಗೊಳಿಸುವತ್ತ ಯಾವುದೇ ಪ್ರಯತ್ನ ಮಾಡಲಿಲ್ಲ ಎನ್ನುವುದು ಅವರ ಆರೋಪ. ಬಂದಾ, ಹಮೀರ್‌ಪುರ್‌, ಜಲೌನ್‌ನಲ್ಲಿ ಬಿಎಸ್‌ಪಿ ಬಿಜೆಪಿಗೆ ಕೊಂಚ ಸ್ಪರ್ಧೆ ತೋರಿಸಬಹುದು.

ಈ ಪ್ರದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯವೇ ಆಗಿದೆ. 1984ರ ಬಳಿಕ ಕಾಂಗ್ರೆಸ್‌ನ ಅಭ್ಯರ್ಥಿಗಳು ಚುನಾವಣೆ ಯಲ್ಲಿ ಗೆದ್ದದ್ದು ಕಡಿಮೆಯೇ. ಹೀಗಾಗಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೂಡ ಈ ಬಾರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದಾರೆ.

Advertisement

ಇತ್ತೀಚೆಗೆ ಖಾಸಗಿ ಟಿ.ವಿ. ಚಾನೆಲ್‌ ನಡೆಸಿದ್ದ ಮತದಾನ ಪೂರ್ವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಹಾಲಿ ಚುನಾವಣೆ ಯಲ್ಲಿ 17-19, ಎಸ್‌ಪಿಗೆ 1 ಸ್ಥಾನ ಸಿಗುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next