ಹೊಸದಿಲ್ಲಿ : “ಮತಗಟ್ಟೆ ಸಮೀಕ್ಷೆಗಳನ್ನೆಲ್ಲ ಬದಿಗಿಡಿ; ಬಿಹಾರವನ್ನು ಮರೆಯಬೇಡಿ; ನಾಳೆ ನಾವೇ ಜಯಶಾಲಿಗಳಾಗುವುದನ್ನು ನೀವು ನೋಡುವಿರಿ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮತದಾನೋತ್ತರ ಸಮೀಕ್ಷೆಗಳನ್ನು ಖಂಡತುಂಡವಾಗಿ ತಿರಸ್ಕರಿಸಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ ಜತೆಗಿನ ಕಾಂಗ್ರೆಸ್ ಮೈತ್ರಿಕೂಟವೇ ಗೆದ್ದು ಬರುವುದೆಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ನಂಬರ್ ಒಂದು ಪಕ್ಷವಾಗಿ ಮೂಡಿಬರಲಿದ್ದು ಎಸ್‌ಪಿ – ಕಾಂಗ್ರೆಸ್ ಮೈತ್ರಿ ಕೂಟ ಎರಡನೇ ಸ್ಥಾನಕ್ಕೆ ಇಳಿಯುವುದಾಗಿ ನಿನ್ನೆ ಗುರುವಾರ ಪ್ರಕಟಗೊಂಡಿರುವ ಮತಗಟ್ಟೆ ಸಮೀಕ್ಷೆಯ ಫಲಿತಾಂಶವನ್ನು ರಾಹುಲ್ ಗಾಂಧಿ ಸಾರಾಸಗಟು ತಿರಸ್ಕರಿಸಿದ್ದಾರೆ. ಪಂಚರಾಜ್ಯ ಚುನಾವಣೆಗಳ ಮತ ಎಣಿಕೆ ಕಾರ್ಯ ನಾಳೆ ಶನಿವಾರ ಮಾರ್ಚ್ 11ರಂದು ನಡೆಯಲಿದ್ದು ನೈಜ ಫಲಿತಾಂಶಗಳು ಹೊರಬೀಳಲಿವೆ.
“ಈ ರೀತಿಯ ಮತಗಟ್ಟೆ ಸಮೀಕ್ಷೆಗಳನ್ನು ನಾವು ಹಿಂದೆಯೂ ನೋಡಿದ್ದೇವೆ; ಬಿಹಾರದಲ್ಲಿ ಏನಾಯಿತೆಂಬುದನ್ನು ಮರೆಯಬೇಡಿ. ನಾಳೆ ಮತ ಎಣಿಕೆ ನಡೆದಾಗ ನಾವೇ ಜಯಶಾಲಿಯಾಗಿ ಹೊರಹೊಮ್ಮುವುದನ್ನು ನೀವು ಕಾಣುವಿರಿ’ ಎಂದು ರಾಹುಲ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವೈದ್ಯಕೀಯ ಚಿಕಿತ್ಸೆಗಾಗಿ ನಿನ್ನೆ ಗುರುವಾರ ವಿದೇಶಕ್ಕೆ ಹೋಗಿದ್ದು ಈಗ ಪಕ್ಷದ ಚುನಾವಣೋತ್ತರ ನೀತಿ ನಿರ್ಧಾರಗಳನ್ನು ರಾಹುಲ್ ಗಾಂಧಿ ಅವರೇ ತೆಗೆದುಕೊಳ್ಳಬೇಕಾಗಿದೆ.
ಎರಡು ವರ್ಷಗಳ ಹಿಂದೆ ಬಿಹಾರ ವಿಧಾನ ಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯೇ ಗೆದ್ದು ಬರುವುದೆಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಅಂತಿಮವಾಗಿ ನಿತೀಶ್ ಕುಮಾರ್ ನೇತೃತ್ವದ ಆರ್‌ಜೆಡಿ-ಕಾಂಗ್ರೆಸ್ ಜತೆಗಿನ ಮಹಾ ಘಟಬಂಧನ ಕೂಟವೇ ಪ್ರಚಂಡ ಬಹುಮತದಿಂದ ಗೆದ್ದು ಬಂದು ಅಧಿಕಾರದ ಗದ್ದುಗೆಯನ್ನು ಏರಿತ್ತು.