Advertisement

ವಾರಣಾಸಿ;ಮೆಗಾ ರೋಡ್ ಶೋ, ಬಲಪ್ರದರ್ಶನ, ವಿಪಕ್ಷಗಳಿಗೆ ಮೋದಿ ಮಂಗಳಾರತಿ!

05:22 PM Mar 04, 2017 | Team Udayavani |

ಉತ್ತರಪ್ರದೇಶ/ವಾರಣಾಸಿ:ಉತ್ತರಪ್ರದೇಶ ಚುನಾವಣೆಯ ಮಿನಿ ಸಮರ ಅಂತಿಮ ಘಟ್ಟ ತಲುಪಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ಹಾಗೂ ದೇವಾಲಯಗಳ ನಗರಿಯಾದ ವಾರಣಾಸಿಯಲ್ಲಿ  ಭರ್ಜರಿ ಮೆಗಾ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯ, ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.

Advertisement

ಪ್ರಧಾನಿ ಮೋದಿ ರೋಡ್ ಶೋ ಬಳಿಕ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಂಟಿಯಾಗಿ ರೋಡ್ ಶೋ ನಡೆಸಿ ಮತಯಾಚಿಸಿದರು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡಾ ವಾರಣಾಸಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಇಂದು ರಾಜಕೀಯದ ಕುರುಕ್ಷೇತ್ರವಾಗಿತ್ತು.

ಅಪಾರ ಜನಸಾಗರ:
ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಗೆ ಆಗಮಿಸಿದಾಗ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡಿದ್ದರು. ನಂತರ ನಡೆದ ರೋಡ್ ಶೋನಲ್ಲಿ ರಸ್ತೆಯುದ್ದಕ್ಕೂ ಜನಸಾಗರವೇ ನೆರೆದಿತ್ತು. ಹರ, ಹರ ಮೋದಿ, ಮನೆ, ಮನೆಯಲ್ಲೂ ಮೋದಿ ಎಂದು ಜನಸ್ತೋಮ ಘೋಷಣೆ ಕೂಗಿದೆ. ಕಟ್ಟಡದ ಮೇಲೆ ನಿಂತು ವೀಕ್ಷಿಸುತ್ತಿದ್ದವರಿಗೂ ಪ್ರಧಾನಿ ಕೈಬೀಸಿದರು.

ಸೇನೆಯ ಯೋಧರ ಬಗ್ಗೆ ಸಂಶಯ, ಪ್ರತಿಪಕ್ಷಗಳಿಗೆ ನಾಚಿಕೆಯಾಗಬೇಕು: ಮೋದಿ
ರೋಡ್ ಶೋ ಬಳಿಕ ವಾರಣಾಸಿಯ ಜಾನ್ ಪುರಿಯಲ್ಲಿ ಉತ್ತರ ಪ್ರದೇಶ ಚುನಾವಣೆಯ 6ನೇ ಹಾಗೂ ಅಂತಿಮ(7ನೇ) ಹಂತದ ಪ್ರಚಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್, ಕಾಂಗ್ರೆಸ್ ಹಾಗೂ ಬಿಎಸ್ಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನೆರೆಯ ದೇಶದ ಮೇಲೆ ನಡೆಸಿದ ಸರ್ಜಿಕಲ್ ದಾಳಿ ಬಗ್ಗೆ ಇಡೀ ವಿಶ್ವವೇ ಮಾತನಾಡಿತ್ತು. ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯ ಸಾಬೀತಾಗಿದೆ. ಆದರೆ ವಿಪಕ್ಷಗಳು ನಮ್ಮ ಸೇನೆಯ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದು ನಾಚಿಗೇಡಿನ ಕೆಲಸ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

Advertisement

ಅಧಿಕಾರಕ್ಕಾಗಿ ಉತ್ತರಪ್ರದೇಶದಲ್ಲಿ ವಿಪಕ್ಷಗಳು ಒಂದಾಗಿವೆ. ಉತ್ತರಪ್ರದೇಶದಲ್ಲಿ ಕೆಲವರು ಕೆಲವರ ಅಭಿವೃದ್ಧಿಯಲ್ಲಷ್ಟೇ ನಂಬಿಕೆ ಇಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಎಷ್ಟೋ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಅಧಿಕಾರ ಕೊಡಿ, ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ ಪ್ರಧಾನಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಗಾಯತ್ರಿ ಪ್ರಜಾಪತಿ ಮಂತ್ರವನ್ನು ಜಪಿಸುತ್ತಿವೆ ಎಂದು ಟಾಂಗ್ ನೀಡಿದರು.
 
ಕಾಂಗ್ರೆಸ್, ಎಸ್ಪಿ ಬಲಪ್ರದರ್ಶನ:
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಳಿಕ ಯುಪಿ ಮುಖ್ಯಮಂತ್ರಿ ಅಖಿಲೇಶ್, ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಂಟಿಯಾಗಿ ವಾರಣಾಸಿಯಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದರು. ಸುಮಾರು 10 ಕಿಲೋ ಮೀಟರ್ ವರೆಗೆ ರೋಡ್ ಶೋ ನಡೆಸಿದರು.

ಮೋದಿ ವಿರುದ್ಧ ಮಾಯಾವತಿ ವಾಗ್ದಾಳಿ;
ಉತ್ತರಪ್ರದೇಶ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಮುಂಚೂಣಿಯಲ್ಲಿದೆ. ದ್ವಿತೀಯ ಮತ್ತು ತೃತೀಯ ಸ್ಥಾನಕ್ಕಾಗಿ ಎಸ್ಪಿ, ಕಾಂಗ್ರೆಸ್ ಪೈಪೋಟಿ ನೀಡುತ್ತಿವೆ ಎಂದು ಮಾಯಾವತಿ ಚುನಾವಣಾ ರೋಡ್ ಶೋನಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಉತ್ತರಪ್ರದೇಶದ ದತ್ತು ಪುತ್ರನನ್ನು ಗುಜರಾತಿಗೆ ಕಳುಹಿಸಲು ಜನ ಸಿದ್ಧತೆ ನಡೆಸಿದ್ದಾರೆ. ಅವರ ಸಾಧನೆ ಏನು ಎಂಬುದು ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next