ಸಿದ್ಧಾರ್ಥನಗರ : ವೈದ್ಯನೊಬ್ಬ ತನ್ನ ಸಹೋದ್ಯೋಗಿಯನ್ನು ಇಸ್ಲಾಂಗೆ ಮತಾಂತರ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಇಟ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ರಾಮರಾಜ್ ಯಾದವ್ ಎಂಬ ಯುವಕ ತಾನು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದೆ ಅಲ್ಲಿನ ವೈದ್ಯ ಡಾ ಫಾರೂಕಿ ಕಮಲ್ 2019 ರಲ್ಲಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದರು ಮತ್ತು ಅವರು ಕುರಾನ್‌ನನ್ನು ಪಠಿಸುವಂತೆ ಮಾಡಿದ್ದರು. ಬಳಿಕ ನನ್ನ ಆಧಾರ್ ಕಾರ್ಡನ್ನು ಕರಮ್ ಹುಸೇನ್ ಹೆಸರಿನಲ್ಲಿ ಬದಲು ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.
ನಾನು ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರನ್ನು ಭೇಟಿ ಮಾಡಲು ಪ್ರಯತ್ನಿಸಿದೆ, ಆದರೆ ನ್ಯಾಯವನ್ನು ಪಡೆಯಲು ವಿಫಲವಾಗಿದ್ದೇನೆ ಎಂದು ಆರೋಪಿಸಿದ್ದಾನೆ.
ಯಾದವ್ ಅವರ ದೂರಿನ ಮೇರೆಗೆ, ವೈದ್ಯ ಮತ್ತು ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಾನೂನು ಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆಯಡಿ ಹಾಗೂ ವಂಚನೆಗಾಗಿ ಪ್ರಕರಣ ದಾಖಲಿಸಿದ್ದಾರೆ.
ದುಮರಿಯಾಗಂಜ್ ನಿವಾಸಿಯೊಬ್ಬರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಯುವಕ ಆರೋಪಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶ್ವೀರ್ ಸಿಂಗ್ ತಿಳಿಸಿದ್ದಾರೆ. ಈವರೆಗಿನ ತನಿಖೆಯಲ್ಲಿ ಯುವಕ ಡಾ.ಕಮಲ್ ಜತೆ ಎರಡು-ಮೂರು ವರ್ಷಗಳ ಕಾಲ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಆರೋಪ ಮಾಡಿರುವ ಯುವಕ ಮೊಬೈಲ್ ಕಳ್ಳತನದ ಆರೋಪದ ಮೇಲೆ ಜೈಲಿನಲ್ಲಿದ್ದ, ಆತ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದು, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.