ಬಂಟ್ವಾಳ: ಬಿಜೆಪಿಯ ಪ್ರಚಾರಕ್ಕೆ ಮತ್ತಷ್ಟು ಬಿರುಸು ನೀಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಸಂಜೆ 4ಕ್ಕೆ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಪರ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು.
ಅವರು ಗುರುವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಗಿ ಕಾರ್ಯಕ್ರಮದ ದೃಷ್ಟಿಯಿಂದ ಈಗಾಗಲೇ ಪಕ್ಷದ ವತಿಯಿಂದ 59 ಗ್ರಾಮಗಳ ಎಲ್ಲಾ ಬೂತ್‌ಗಳಲ್ಲೂ ಸಭೆಗಳನ್ನು ನಡೆಸಲಾಗಿದ್ದು, ಪ್ರತಿ ಬೂತ್‌ನಿಂದ ಕನಿಷ್ಠ 100 ಮಂದಿ ಭಾಗವಹಿಸಲಿದ್ದಾರೆ.
ಸಂಜೆ 4ರ ಸುಮಾರಿಗೆ ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್ ಕಾಲೇಜಿನ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಬಿ.ಸಿ.ರೋಡಿನ ಕೈಕಂಬದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ರೋಡ್ ಶೋ ನಡೆಸಲಿರುವ ಯೋಗಿ ಅವರು ಬಳಿಕ ರೋಡ್ ಶೋ ವಾಹನದಲ್ಲೇ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು, ಅಭ್ಯರ್ಥಿ ರಾಜೇಶ್ ನಾೖಕ್ ಸೇರಿದಂತೆ ಮೊದಲಾದ ಪ್ರಮುಖರು ಪಾಲ್ಗೊಳ್ಳುತ್ತಾರೆ.
ಭದ್ರತೆಯ ದೃಷ್ಟಿಯಿಂದ ರೋಡ್ ಶೋ ವೇಳೆ ವಾಹನ ಸಂಚಾರ ನಿಷೇಧದ ಜತೆಗೆ ಸಂಪೂರ್ಣವಾಗಿ ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರನ್ನೂ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿಯೇ ಒಳಗೆ ಬಿಡಲಿದ್ದು, ಸುಮಾರು 500 ಮಂದಿ ಸ್ವಯಂಸೇವಕರು ರೋಡ್ ಶೋ ವಾಹನದ ಹಿಂದೆ-ಮುಂದೆ ಇರುತ್ತಾರೆ. ಭದ್ರತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಪಕ್ಷ ಸಹಕಾರ ನೀಡಲಿದೆ ಎಂದರು.
ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಈಗಾಗಲೇ ಪ್ರಚಾರ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆದಿದ್ದು, ಅಭ್ಯರ್ಥಿ ರಾಜೇಶ್ ನಾೖಕ್ ಜತೆಗೆ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ಹಲವು ನಾಯಕರು ಗ್ರಾಮಗಳಿಗೆ ಕಾರ್ಯಕರ್ತರ ಸಭೆ, ಮನೆ ಮನೆ ಪ್ರಚಾರ ನಡೆಸಿದ್ದಾರೆ ಎಂದರು.
ರವೀಶ್ ಶೆಟ್ಟಿ ಕರ್ಕಳ, ಎ.ಗೋವಿಂದ ಪ್ರಭು, ಹರಿದಾಸ್, ಚಿದಾನಂದ ರೈ ಕಕ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು, ಕಿಶೋರ್ ಪಲ್ಲಿಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಗೆಲುವಿನ ಅಂತರ ದ್ವಿಗುಣ
ಬಂಟ್ವಾಳದಲ್ಲಿ ಕಳೆದ ಬಾರಿ 16 ಸಾವಿರ ಮತಗಳಿಂದ ಬಿಜೆಪಿ ಗೆದ್ದಿದ್ದು, ಅದನ್ನು ದ್ವಿಗುಣಗೊಳಿಸುವ ದೃಷ್ಟಿಯಿಂದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದು, ಸಮುದಾಯಗಳನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದು ದೇವಪ್ಪ ಪೂಜಾರಿ ತಿಳಿಸಿದರು.
ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ಖಂಡನೆ
ಬಂಟ್ವಾಳದಲ್ಲಿ ರಾಜೇಶ್ ನಾೖಕ್ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕ್ಷೇತ್ರದ ಮತದಾರರಿಗೆ ತಿಳಿದಿದ್ದು, ಹೀಗಾಗಿ ಮತ್ತೆ ಅವರನ್ನು ಗೆಲ್ಲಿಸುವ ಕಾರ್ಯ ಮಾಡಲಿದ್ದಾರೆ. ಒಂದು ವರ್ಗದ ಓಲೈಕೆಯ ದೃಷ್ಟಿಯಿಂದ ಕಾಂಗ್ರೆಸ್ ಬಜರಂಗ ದಳ ನಿಷೇಧದ ಕುರಿತು ಪ್ರಸ್ತಾಪಿಸಿದ್ದು, ಬಂಟ್ವಾಳ ಬಿಜೆಪಿ ಅದನ್ನು ಖಂಡಿಸುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.