Advertisement

ಇರ್ವತ್ತೂರು: ನಿರುಪಯುಕ್ತವಾದ ಕುಡಿಯುವ ನೀರಿನ ಘಟಕ

12:08 PM May 27, 2018 | Team Udayavani |

ಪುಂಜಾಲುಕಟ್ಟೆ : ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಸ್ಥಾಪಿಸ ಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಸಾರ್ವಜನಿಕ ಬಳಕೆಗೆ ನಿರುಪಯುಕ್ತವಾಗಿದ್ದು, ಸರಕಾರದ ಹಣ ಪೋಲಾಗಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಾಷ್ಟ್ರೀಯ ಕುಡಿಯುವ ನೀರು ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಕಲಾಬಾಗಿಲು ಮತ್ತು ಬಂಗೇರಕೆರೆಯಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, ಕಾರ್ಯಾರಂಭ ಮಾಡದ ಕಾರಣ ಇದಕ್ಕಾಗಿ ವ್ಯಯಿಸಿದ ಲಕ್ಷಾಂತರ ರೂ. ವ್ಯರ್ಥವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾ. ಪ್ರದೇಶಗಳಲ್ಲೂ ಬೇಸಗೆ ಕೊನೆಗೆ ಅಂತರ್ಜಲ ಕೊರತೆಯಿಂದ ಕುಡಿಯುವ ನೀರಿಗೆ ತತ್ವಾರ ಬರುತ್ತದೆ. ಇಂತಹ ಘಟಕಗಳ ಸ್ಥಾಪನೆಯಿಂದ ಶುದ್ಧ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿದ್ದರೂ ಇಲಾಖೆಯ ನಿರ್ಲಕ್ಷ್ಯದಿಂದ ಜನತೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 2 ವರ್ಷಗಳ ಹಿಂದೆ ಮಂಜೂರುಗೊಂಡು ಮೂರ್ಜೆ – ವಾಮದಪದವು ರಸ್ತೆಯ ಕಲಾಬಾಗಿಲುವಿನಲ್ಲಿ ಮತ್ತು ಕಾವಳಕಟ್ಟೆ ಸಮೀಪದ ಬಂಗೇರಕೆರೆಯಲ್ಲಿ ಐದಾರು ಲಕ್ಷ ರೂ. ವೆಚ್ಚದಲ್ಲಿ ಈ ಘಟಕಗಳನ್ನು ನಿರ್ಮಿಸಲಾಗಿದ್ದು, ಬಳಿಕ ಇರ್ವತ್ತೂರು ಗ್ರಾ.ಪಂ. ಗೆ ಹಸ್ತಾಂತರಿಸಬೇಕಿತ್ತು. ಇದರ ನಿರ್ವಹಣೆಯೂ ಟೆಂಡರ್‌ ಪಡಕೊಂಡವರ ಜವಾಬ್ದಾರಿ. ಆದರೆ ಸರಕಾರ ಟೆಂಡರುದಾರರಿಗೆ ಹಣ ಪಾವತಿಸದ ಹಿನ್ನೆಲೆ ಯಲ್ಲಿ ಟೆಂಡರುದಾರರು ನಿರ್ವಹಣೆಯಿಂದ ದೂರ ಸರಿದ ಕಾರಣ ಪಂ.ಗೆ ಹಸ್ತಾಂತರವಾಗಿಲ್ಲ.

ಏನಿದು ಯೋಜನೆ?
2015-16ನೇ ಸಾಲಿನಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ದಿನದ 24 ಗಂಟೆಗಳೂ ನಾಣ್ಯ ಉಪಯೋಗಿಸಿ ನೀರೊದಗಿಸಲು ಜನಸಂದಣಿ ಸ್ಥಳಗಳಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಿತ್ತು. ಕೊಳವೆ ಬಾವಿಗಳಿಂದ ಸರಬರಾಜಾಗುತ್ತಿರುವ ನೀರು ಸೇವನೆ ಅನಾರೋಗ್ಯಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಸರಕಾರ ಅಲ್ಲಲ್ಲಿ ಇಂತಹ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿತ್ತು. 

Advertisement

ಸ್ಥಳೀಯ ಗ್ರಾ.ಪಂ. ಸಹಭಾಗಿತ್ವದಲ್ಲಿ ಸ್ಥಳ ನಿಗದಿಪಡಿಸಿ ಪಂ.ನಿಂದ ಸರಬರಾಜುಗೊಳ್ಳುವ ನೀರಿಗೆ ಸಂಪರ್ಕ ಕಲ್ಪಿಸಿ ಘಟಕ ಸ್ಥಾಪಿಸಲಾಗಿತ್ತು. ಒಂದು ಘಟಕ ನಿರ್ಮಾಣಕ್ಕೆ ಸಮಾರು 8.5 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿತ್ತು. ಈ ಯಂತ್ರಕ್ಕೆ 1, 2 ರೂ. ನಾಣ್ಯ ಹಾಕಿದರೆ, ಆರರಿಂದ ಎಂಟು ಲೀಟರ್‌ ತನಕ ಶುದ್ಧ ನೀರು ದೊರೆಯಲಿದೆ ಎಂದು ತಿಳಿಸಲಾಗಿತ್ತು. ಆದರೆ ಘಟಕ ಸ್ಥಾಪನೆಯಾದರೂ ಇನ್ನೂ ಕಾರ್ಯಾರಂಭಗೊಂಡಿಲ್ಲ.

ಗ್ರಾಮ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ
ಗ್ರಾಮೀಣಾಭಿವೃದ್ಧಿ ಇಲಾಖೆ ಸ್ಥಳ ಗುರುತಿಸಿ ಘಟಕ ಸ್ಥಾಪಿಸಿದ್ದಾರೆ. ಗ್ರಾಮ ಪಂಚಾಯತ್‌ಗೆ ಹಸ್ತಾಂತರವಾಗದ ಕಾರಣ ಘಟಕ ಕಾರ್ಯಾರಂಭಗೊಂಡಿಲ್ಲ. 
– ಗಣೇಶ್‌ ಶೆಟ್ಟಿಗಾರ್‌ ಪಂ.ಅ. ಅಧಿಕಾರಿ, ಇರ್ವತ್ತೂರು ಗ್ರಾ.ಪಂ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದಿರುವುದರಿಂದ ಬಹುತೇಕ ನಗರದ ಮತ್ತು ಗ್ರಾಮೀಣ ಜನತೆ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ.
ರಮೇಶ್‌ ಶೆಟ್ಟಿ ಮಜಲೋಡಿ ಅಧ್ಯಕ್ಷರು, ತುಳುನಾಡ ರಕ್ಷಣಾ ವೇದಿಕೆ, ಬಂಟ್ವಾಳ ತಾ| ಘಟಕ

ರತ್ನದೇವ್‌ ಪುಂಜಾಲಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next