ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಗುರುವಾರ ಸಂಜೆ, ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಸಿಲುಕಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಮಂಡಿಕಲ್ ಹೋಬಳಿ ಕಮ್ಮಗುಟ್ಟಹಳ್ಳಿ ಪಂಚಾಯ್ತಿ ವ್ಯಾಪ್ತಿಯ ರೇಣುಮಾಕಲಹಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ನಡೆದಿದೆ.
ರೇಣುಮಾಕಲಹಳ್ಳಿ ಗ್ರಾಮದ ರಾಮ ಮೂರ್ತಿ ಹಾಗೂ ನಾರಾಯಣಮೂರ್ತಿ ಅವರು ಬೆಳೆದಿದ್ದ ದ್ರಾಕ್ಷಿ ಫಸಲು ಆಲಿಕಲ್ಲು ಮಳೆಗೆ ನಾಶವಾಗಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ, ಸಮೀಪದ ಬೊಮ್ಮನಹಳ್ಳಿ ಗ್ರಾಮದ ಬೆರಾರೆಡ್ಡಿ ಎಂಬುವವರಿಗೆ ಸೇರಿದ ಜೋಳದ ಬೆಳೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲಕ್ಕುರುಳಿದೆ. ಇನ್ನೂ ಬೊಮ್ಮಗಾನಹಳ್ಳಿಯ ಮುನಿಕೃಷ್ಣಪ್ಪ ಅವರ ಚಪ್ಪರದ ಬೀನ್ಸ್ ನೆಲಕಚ್ಚಿದೆ.
ಇಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಗಳ ಬಳಿ ರೈತರ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕೂಡಲೆ ರೈತರ ನೆರವಿಗೆ ಸರ್ಕಾರ ದಾವಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಲಿಕಲ್ಲು ಮಳೆಗೆ ಟೊಮೆಟೋ ಬೆಳೆ ನಷ್ಟ: ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರ್ರಲಕ್ಕೇನಹಳ್ಳಿ ಗ್ರಾಮದ ಸುತ್ತಮುತ್ತ ಗುರುವಾರ ಸಂಜೆ ಹಾಗೂ ರಾತ್ರಿ ವೇಳೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಟೊಮೆಟೋ ಬೆಳೆ ನಷ್ಟವಾಗಿದೆ. ಯರಲಕ್ಕೇನಹಳ್ಳಿ ಗ್ರಾಮದ ದೊಡ್ಡ ಕುರಿಯಪ್ಪ, ಆದಿಲಕ್ಷ್ಮಮ್ಮ ಸೇರಿ ಹಲವು ರೈತರು ಬೆಳೆದಿದ್ದ ಟೊಮೊಟೋ ಬೆಳೆ ಆಲಿಕಲ್ಲು ಬಿದ್ದು ನಷ್ಟ ಉಂಟಾಗಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಿದ್ದ ಬೆಳೆ ಹವಮಾನ ವೈಪರೀತ್ಯಕ್ಕೆ ಸಿಲುಕಿ ನಾಶವಾಗಿದೆ. ಇದರಿಂದ ಸಾಲ ಸೋಲ ಮಾಡಿದ್ದ ರೈತನಿಗೆ ದಿಕ್ಕು ತೋಚದಂತೆ ಆಗಿದೆ. ತಲೆ ಮೇಲೆ ಕೈ ಇಟ್ಟುಕೊಂಡು ರೋದಿಸುವಂತಾಗಿದೆ.
ಹೂವಿನ ಬೆಳೆ ನಾಶ: ಗುರುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಸಿಲುಕಿ ಲಕ್ಷಾಂತರ ರೂ. ಮೌಲ್ಯದ ಹೂವಿನ ಬೆಳೆ ನಾಶವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಆರ್.ಕಂಬಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ರೈತ ರಾಮಕೃಷ್ಣಾರೆಡ್ಡಿ ಲಕ್ಷಾಂತರ ರೂ. ಬಂಡವಾಳ ಹಾಕಿ ಸೇವಂತಿಗೆ ಹೂ. ಬೆಳೆ ಬೆಳೆದು ಯುಗಾದಿ ಹಬ್ಬಕ್ಕೆ ಉತ್ತಮ ಹೂವಿನ ಫಸಲು ಬಂದಿತ್ತು. ಹೂ ಮಾರಿ ಉತ್ತಮ ಲಾಭಗಳಿಸಬಹುದು ಎಂದು ನಿರೀಕ್ಷೆಯಲ್ಲಿ ಇದ್ದರು.
ಆದರೆ, ಆಲಿಕಲ್ಲು ಮಳೆಗೆ ಹೂವಿನ ಬೆಳೆ ನಾಶವಾಗಿದೆ. ಅಷ್ಟೆ ಅಲ್ಲದೆ, ಸಮೀಪದ ಮತ್ತೋರ್ವ ರೈತ ಕೆ.ಸಿ.ರಾಮಕೃಷ್ಣಾರೆಡ್ಡಿ ಬೆಳೆದಿದ್ದ ಗುಲಾಬಿ ಬೆಳೆ, ಮಂಜುಳಮ್ಮ ಎನ್ನುವವರು ಬೆಳೆದಿದ್ದ ಬೀನ್ಸ್ ಬೆಳೆ ಸಹ ನಾಶವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟ ಪರಿಹಾರ ಕೊಡಿಸುವಂತೆ ರೈತರು ಮನವಿ ಮಾಡಿದ್ದಾರೆ.