Advertisement
ಕುದ್ರೋಳಿ ಸಮೀಪದಲ್ಲಿ ಹರಿದು ಹೋಗುವ ಅಳಕೆ ತೋಡಿನಲ್ಲಿ ತ್ಯಾಜ್ಯ ತುಂಬಿ ಕೊಳೆತ ವಾಸನೆ ಪರಿಸರದ ಹರಡಿದೆ. ಸಮೀಪ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಇಲ್ಲಿನ ತೋಡಿನ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಅಳಕೆ ವ್ಯಾಪ್ತಿಯಲ್ಲಿ ಕಸ, ಕಡ್ಡಿ, ತ್ಯಾಜ್ಯಗಳು ತುಂಬಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಮಧ್ಯೆ ಹಾದುಹೋಗುವ ಈ ತೋಡಿಗೆ ನಿತ್ಯ ಪ್ಲಾಸ್ಟಿಕ್ ಎಸೆಯುವವರ ಸಂಖ್ಯೆ ಇಲ್ಲಿ ಕಡಿಮೆಯಾಗಿಲ್ಲ. ಕಸ, ಪ್ಲಾಸ್ಟಿಕ್ ಎಲ್ಲ ಸೇರಿಕೊಂಡು ನೀರೆಲ್ಲ ಇಲ್ಲಿ ಮಲಿನವಾಗಿದೆ. ತೊರೆಯ ಪಕ್ಕದಲ್ಲಿ ನಡೆದುಕೊಂಡು ಹೋಗಲು ಕೂಡ ಕಷ್ಟವಾಗಿದೆ. ಈ ತೋಡಿನ ಸಮೀಪದಲ್ಲಿಯೇ ಹಲವಾರು ಮನೆಗಳಲ್ಲಿ ಜನರು ವಾಸವಾಗಿದ್ದು, ನಿತ್ಯ ಅವರೆಲ್ಲ ವಾಸನೆಯಿಂದ ಸಂಕಷ್ಟ ಎದುರಿಸಬೇಕಾಗಿದೆ. ತೋಡಿನ ನೀರು ಕಪ್ಪಾಗಿದ್ದು, ನೋಡುವಾಗಲೇ ವಿಷಮಯ ಸ್ಥಿತಿ ಸ್ಪಷ್ಟವಾಗುತ್ತದೆ. ಈ ಮಧ್ಯೆ ಅಳಕೆಯ ತೋಡಿನ ನೀರು ಕುದ್ರೋಳಿ ದಾಟಿ, ಫಲ್ಗುಣಿ ನದಿಗೆ ಸೇರುತ್ತದೆ. ಮೊದಲೇ ವಾಸನೆಯಿಂದ ಕೂಡಿದ ತೋಡಿನ ನೀರಿನಿಂದಾಗಿ ಫಲ್ಗುಣಿಯ ಕಥೆ ಏನಾಗಬಹುದು ಎಂಬ ಆತಂಕ ಪರಿಸರವಾಸಿಗಳದ್ದು.
Related Articles
ಕುದ್ರೋಳಿ ವ್ಯಾಪ್ತಿಯ ಈ ತೋಡು ಹಲವು ವರ್ಷದ ಹಿಂದೆ ಮಕ್ಕಳಿಗೆ ಈಜು ಕಲಿಕಾ ಕೇಂದ್ರವೂ ಆಗಿತ್ತಂತೆ! ಅಂದರೆ ಅಷ್ಟು ಪರಿಶುದ್ಧವಾಗಿ ಇಲ್ಲಿ ನೀರಿನ ಹರಿವಿತ್ತು. ಹಲವು ವಿದ್ಯಾರ್ಥಿಗಳು, ಮಕ್ಕಳು ಇದೇ ನೀರಿನಲ್ಲಿ ಈಜಾಟವಾಡುತ್ತಿದ್ದರು ಎಂದು ಸ್ಥಳೀಯ ಹಿರಿಯರೊಬ್ಬರು ನೆನಪು ಮಾಡುತ್ತಾರೆ. ಆದರೆ, ಈಗ ಪರಿಸ್ಥಿತಿ ಇಲ್ಲಿ ಬದಲಾವಣೆಗೊಂಡಿದೆ. ಮನೆ, ಅಂಗಡಿಯ ಕಸ, ತ್ಯಾಜ್ಯ, ಪ್ಲಾಸ್ಟಿಕ್ ಸಾಮಗ್ರಿಗಳೆಲ್ಲ ಈ ನೀರಿನಲ್ಲಿ ವಿಲೀನಗೊಂಡಿದೆ.
Advertisement
ಸ್ಮಾರ್ಟ್ ಸಿಟಿಯಾಗಲು ಹೊರಟಿರುವ ಮಂಗಳೂರಿಗೆ ಇದು ಭೂಷಣ ಅಲ್ಲ. ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಆಲಯವಾಗುತ್ತಿರುವ ನಗರದಲ್ಲಿ ತೋಡುಗಳ ಸ್ವತ್ಛತೆಗೆ ವಿಶೇಷ ಒತ್ತು ನೀಡದಿದ್ದರೆ, ಸರ್ವರಿಗೂ ಆರೋಗ್ಯ ಎಂಬ ಪರಿಕಲ್ಪನೆ ಪರಿಪೂರ್ಣಗೊಳ್ಳುವುದು ಹೇಗೆ ಎಂಬುದಕ್ಕೆ ಪಾಲಿಕೆ ಉತ್ತರ ನೀಡಬೇಕಾಗಿದೆ.
11 ಕೋ.ರೂ.ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಡೊಂಗರಕೇರಿ ವಾರ್ಡ್‌ಗೆ ಸಂಬಂಧಪಟ್ಟ ಮಣ್ಣಗುಡ್ಡ ದುರ್ಗಾಮಹಲ್‌ನಿಂದ ಕಾರ್‌ಸ್ಟ್ರೀಟ್‌ವರೆಗೆ 11 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬಹುತೇಕ ಭಾಗದ ರಸ್ತೆ ಕಾಂಕ್ರೀಟ್ ಕೆಲಸ ಪೂರ್ಣಗೊಂಡಿದೆ. ಇದೇ ಅನುದಾನದಲ್ಲಿ ಅಳಕೆ ಸೇತುವೆಯೂ ನಿರ್ಮಾಣವಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಯೋಜನೆ ಮಾಡಿದಾಗ ಅಳಕೆ ಸೇತುವೆ ಪಿಲ್ಲರ್ ಹಾಕಿ ನಿರ್ಮಿಸಲು ನಕ್ಷೆ ರಚಿಸಲಾಗಿತ್ತು. 10.5 ಮೀ.ಗಿಂತ ಹೆಚ್ಚು ಉದ್ದ ಇದ್ದರೆ ಪಿಲ್ಲರ್ ಹಾಕಿಯೇ ನಿರ್ಮಿಸಬೇಕಿದೆ. ಪ್ರಸ್ತುತ ಸೇತುವೆ 13 ಮೀ. ಉದ್ದ ಇದೆ. ಆದ್ದರಿಂದ ಎನ್‌ಐಟಿಕೆ ತಜ್ಞರಿಂದ ಹೊಸ ನಕ್ಷೆ ತಯಾರಿಸಿ ಸರಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗ ಸೇತುವೆ ಕಾಮಗಾರಿ ನಡೆಯುತ್ತಿದೆ. ದಿನೇಶ್ ಇರಾ