Advertisement

ವಿಶೇಷ ಶಾಲಾ ಶಿಕ್ಷಕರ ಮನವಿಗೆ ಸಿಗದ ಸ್ಪಂದನೆ; ಉದ್ಯೋಗ ಭದ್ರತೆ, ಗೌರವ ಧನ ಏರಿಕೆಯಿಲ್ಲ

01:55 AM Apr 21, 2022 | Team Udayavani |

ಕುಂದಾಪುರ: ವಿಶೇಷ ಮಕ್ಕಳಿಗೆ ತರಬೇತಿ ಸಹಿತ ಶಿಕ್ಷಣ ನೀಡುತ್ತಿರುವ ವಿಶೇಷ ಶಾಲಾ ಶಿಕ್ಷಕರ ಬದುಕು ಡೋಲಾಯಮಾನವಾಗಿದೆ. ಕಳೆದ 20 – 30 ವರ್ಷಗಳಿಂದ ಭರವಸೆಯ ಎಳೆ ಹಿಡಿದು ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರ ಬೇಡಿಕೆಗಳು ಇನ್ನೂ ಈಡೇರಿಲ್ಲ.

Advertisement

ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವೇ ನಮಗಿರುವ ದಾರಿ ಎಂದು ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ ಮತ್ತು ಶಿಕ್ಷಕೇತರರ ಸಂಘ ತಿಳಿಸಿದೆ. ಹಲವು ವರ್ಷಗಳಿಂದ ಸರಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಂದಿಲ್ಲ.

2007ರಿಂದ ಇಲ್ಲಿಯವರೆಗೆ ವಿಶೇಷ ಶಿಕ್ಷಕ -ಶಿಕ್ಷಕೇತರರ ಸಂಘ ರಚಿಸಿ ಹಲವಾರು ಬಾರಿ ಹೋರಾಟ ಮಾಡಿದ್ದು, ಸಂಬಂಧಪಟ್ಟ ಎಲ್ಲರಿಗೂ ಮನವಿ ನೀಡಿದರೂ ಈವರೆಗೆ ಸಿಕ್ಕಿರುವುದು ಭರವಸೆ ಮಾತ್ರ.

530 ವಿಶೇಷ ಶಾಲೆಗಳು
ರಾಜ್ಯದಲ್ಲಿ ಅಂದಾಜು 530 ವಿಶೇಷ ಶಾಲೆಗಳಿವೆ. ಅದರಲ್ಲಿ 141 ಶಾಲೆಯವರು ಶಿಶುಕೇಂದ್ರಿತ ಅನುದಾನ ಪಡೆಯುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಅನುದಾನ ನೀಡುತ್ತಿರುವುದರಿಂದ ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಶಿಕ್ಷಕರಿಗೆ ಉದ್ಯೋಗದ ಭರವಸೆ ಇಲ್ಲ. ಶ್ರವಣದೋಷವುಳ್ಳ ಮಕ್ಕಳ ಶಾಲೆಯಲ್ಲಿ 10:1, ಅಂಧ ಮಕ್ಕಳ ಶಾಲೆಯಲ್ಲಿ 12:1, ದೈಹಿಕ ನ್ಯೂನತೆ ಇರುವ ವಿಶೇಷ ಶಾಲೆಗಳಲ್ಲಿ 7:1 ಅನುಪಾತದಲ್ಲಿ ಶಿಕ್ಷಕರ ನೇಮಕಾತಿ ನಡೆಯುತ್ತಿದೆ.

ಬೇಕು ನಿರಂತರ ಆರೈಕೆ
ವಿಶೇಷ ಮಕ್ಕಳ ಶಿಕ್ಷಣದಲ್ಲಿ ಅವರ ಯೋಗಕ್ಷೇಮ, ಲಾಲನೆ-ಪಾಲನೆ, ಆರೋಗ್ಯ ಸಂರಕ್ಷಣೆ, ವೃತ್ತಿ ತರಬೇತಿ ಥೆರಪಿ ಮುಂತಾದ ಚಟುವಟಿಕೆಗಳ ಜತೆಗೆ ಮಕ್ಕಳ ಆರೈಕೆ ಮಾಡಬೇಕಾಗುತ್ತದೆ. ಇಷ್ಟೆಲ್ಲ ಮಾಡಿದರೂ ಕನಿಷ್ಠ ವೇತನವೂ ದೊರೆಯದಿರುವುದು ಶೋಚನೀಯ. ಈಗ ಪಡೆಯುತ್ತಿರುವ ಗೌರವಧನದಿಂದ ಜೀವನ ನಿರ್ವಹಣೆ ಕಷ್ಟ. ಸರಕಾರ ಇನ್ನೂ ಮನವಿಗೆ ಸ್ಪಂದಿಸದಿದ್ದಲ್ಲಿ, ಗೌರವಧನ ಏರಿಸದಿದ್ದರೆ, ಉಪವಾಸ ಸತ್ಯಾಗ್ರಹ ಒಂದೇ ದಾರಿ
ಎಂದು ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಎಚ್‌. ತಿಳಿಸಿದ್ದಾರೆ.

Advertisement

ಪ್ರಮುಖ ಬೇಡಿಕೆಗಳೇನು?
ದಿನದ 24 ತಾಸು ಕೆಲಸ ನಿರ್ವಹಿಸುವ ವಿಶೇಷ ಶಾಲಾ ಸಿಬಂದಿಗೆ ಉದ್ಯೋಗದ ಭದ್ರತೆ ಇಲ್ಲ. ಗೌರವಧನ ಏರಿಕೆಯಾಗಿಲ್ಲ. ಶ್ರವಣದೋಷ ಮತ್ತು ಅಂಧ ಮಕ್ಕಳಿಗೆ ಕಲಿಸುತ್ತಿರುವ ಶಿಕ್ಷಕರಿಗೆ ಕೇವಲ 13,500 ರೂ., ಮುಖ್ಯ ಶಿಕ್ಷಕರಿಗೆ 16 ಸಾವಿರ ರೂ. ಮತ್ತು ಆಯಾಗಳಿಗೆ 6 ಸಾವಿರ ರೂ. ವೇತನ ನೀಡಲಾಗುತ್ತಿದೆ. ದೈಹಿಕ ನ್ಯೂನತೆ ಹೊಂದಿರುವ ಮಕ್ಕಳ ಶಾಲೆ ಶಿಕ್ಷಕರಿಗೆ 13,500 ರೂ., ಮುಖ್ಯ ಶಿಕ್ಷಕರಿಗೆ 18 ಸಾವಿರ ರೂ., ಆಯಾಗಳಿಗೆ 9 ಸಾವಿರ ರೂ. ಲಭಿಸುತ್ತದೆ. ಇಲ್ಲಿಯೂ ಅನುದಾನದಲ್ಲಿ ಇಬ್ಬಗೆಯ ನೀತಿ ಇದೆ. ಎಲ್ಲ ವಿಶೇಷ ಶಿಕ್ಷಕರಿಗೆ ಮತ್ತು ಸಿಬಂದಿಗೆ ಒಂದೇ ವೇತನ ನಿಯಮ ಅನುಷ್ಠಾನವಾಗಲಿ ಎನ್ನುವುದು ಅವರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next