Advertisement

ಸಮಸ್ಯೆಗೆ ಸ್ಪಂದಿಸದ ನಗರ ಸಭೆ: ಮಳೆ ಬಂದಾಗ ಜೀವಭಯದಲ್ಲೆ ಕಾಲ ಕಳೆಯಬೇಕಾದ ದುಸ್ಥಿತಿ

09:55 AM Nov 18, 2021 | Team Udayavani |

ದಾಂಡೇಲಿ: ಗಟಾರಕ್ಕೆ ಅಡ್ಡಲಾಗಿ ಗೋಡೆ ಕಟ್ಟಿರುವ ಪರಿಣಾಮವಾಗಿ ಮಳೆಗಾಲದಲ್ಲಿ ಗಟಾರದ ನೀರು ಸರಾಗವಾಗಿ ಹರಿಯಲಾಗದೇ ಮನೆಯೊಳಗಡೆ ನೀರು ಬರುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಕಳೆದ ನಾಲ್ಕು ವರ್ಷಗಳಿಂದ ದಾಂಡೇಲಿ ನಗರ ಸಭೆಗೆ ಅಂಗಲಾಚಿ ಬೇಡಿಕೊಂಡರೂ ಸಿದ್ದಿ ಸಮುದಾಯದ ಮಹಿಳೆಯ ಮನವಿಗೆ ಮಾತ್ರ ನಗರ ಸಭೆ ಸ್ಪಂದಿಸದೇ ನಿರ್ಲಕ್ಷ್ಯ ತೋರಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ನಗರದ ಬಸವೇಶ್ವರ ನಗರದ ನಿವಾಸಿ ಹಾಗೂ ಸಿದ್ದಿ ಸಮುದಾಯದ ಮಹಿಳೆಯಾಗಿರುವ ರೋಜಿ ಅಂತೋನಿ ಡಯಾಸ್ ಅವರೇ ನಗರ ಸಭೆಯ  ನಿರ್ಲಕ್ಷ್ಯಕ್ಕೊಳಗಾದ ಮಹಿಳೆಯಾಗಿದ್ದಾರೆ.

ಬಸವೇಶ್ವರ ನಗರದಲ್ಲಿ ಇವರ ಮನೆಯ ಹತ್ತಿರದ ಗಟಾರಕ್ಕೆ ಗೋಡೆ ಕಟ್ಟಿರುವುದರಿಂದ ಗಟಾರದ ನೀರು ಮಳೆಗಾಲದ ಸಮಯದಲ್ಲಿ ಸರಾಗವಾಗಿ ಹರಿಯದೇ ನೇರವಾಗಿ ರೋಜಿ ಅಂತೋನಿ ಡಯಾಸ್ ಅವರ ಮನೆಯೊಳಗಡೆ ನುಗ್ಗುತ್ತಿದೆ. ಪರಿಣಾಮವಾಗಿ ಎಳೆಯ ಮೊಮ್ಮಗಳೊಂದಿಗೆ ವಾಸ ಮಾಡುವ ರೋಜಿ ಅಂಥೋನಿಯವರು ಮಳೆಗಾಲದಲ್ಲಿ ಜೀವಭಯದಲ್ಲೆ ದಿನದೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸಂಜೆ ಏಕಾಏಕಿ ಸುರಿದ ಮಳೆಯಿಂದಾಗಿ ಗಟಾರ ತುಂಬಿ ಮನೆಯೊಳಗಡೆ ನೀರು ನುಗ್ಗಿದ್ದು, ಎಳೆಯ ಮೊಮ್ಮಗಳೊಂದಿಗೆ ರಾತ್ರಿಯೆಲ್ಲಾ ಜಾಗರಣೆ ಮಾಡಿದ ಅತ್ಯಂತ ದಯಾನೀಯ ಸ್ಥಿತಿ ರೋಜಿಯವರದ್ದಾಗಿತ್ತು.

ಇದನ್ನೂ ಓ‍ದಿ:ಗುಸ್ಸಾದಿ ನೃತ್ಯ ಮಾಡಿ ಸಂಭ್ರಮಿಸಿದ ಮಂಜಮ್ಮ ಜೋಗತಿ / ಕನಕರಾಜು ಪದ್ಮಶ್ರೀ ಪುರಸ್ಕೃತರು

ಗಟಾರದ ಸಮಸ್ಯೆಯನ್ನು ಪರಿಹರಿಸಿ ಎಂದು ನಗರ ಸಭೆಗೆ ಮನವಿ ಕೊಟ್ಟಿದ್ದೇ ಕೊಟ್ಟಿದ್ದು, ಇದರ ಹೊರತಾಗಿಯೂ ಜಿಲ್ಲಾಧಿಕಾರಿಯವರ ಬಳಿಯೂ ಮನವಿ ಮಾಡಿದ್ದರು. ಆದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ನ್ಯಾಯಯುತವಾದ ಬದುಕಿನ ಹಕ್ಕಿಗಾಗಿ ನಡೆಸುವ ಹೋರಾಟಕ್ಕಾಗಿ ಸಿದ್ದಿ ಸಮುದಾಯದ ಬೆಂಬಲವನ್ನು ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬುಡಕಟ್ಟು ಸಮುದಾಯದ ಬಗ್ಗೆ ಕಾಳಜಿಯಿರಬೇಕಾದ ನಗರ ಸಭೆಗೆ ಈ ಸಿದ್ದಿ ಸಮುದಾಯದ ಮಹಿಳೆಯ ಬಗ್ಗೆ ನಿಷ್ಕಾಳಜಿ ಯಾಕೆ ಎಂಬ ಪ್ರಶ್ನೆ ನಗರದಲ್ಲಿ ಚರ್ಚೆಯಲ್ಲಿದೆ.

Advertisement

ರೋಜಿಯವರ ಮನೆಯ ಪಕ್ಕದಲ್ಲೆ ಇರುವ ಜಾಗ ಅತಿಕ್ರಮಣಕ್ಕೆ ಒಳಗಾಗಿರುವುದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಐದು ವರ್ಷದಿಂದ ಈ ಸಮಸ್ಯೆ ಎದುರಾಗಿದ್ದು ಇನ್ನಾದರೂ ಈ ಸಮಸ್ಯೆಗೆ ಪರಿಹಾರವನ್ನು ಒದಗಿಸಿಕೊಡುವಂತೆ ರೋಜಿ ಅಂತೋನಿ ಡಯಾಸ್ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next