Advertisement

ವೇಗ ಪಡೆಯದ ಗುಂಡಿ ದುರಸ್ತಿ

01:15 PM Sep 22, 2018 | Team Udayavani |

ಬೆಂಗಳೂರು: ರಸ್ತೆಗುಂಡಿ ವಿಚಾರದಲ್ಲಿ ಪಾಲಿಕೆಯನ್ನು ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ ಪಾಲಿಕೆಯ ಅಧಿಕಾರಿಗಳು ಹಗಲು ರಾತ್ರಿ ರಸ್ತೆಗುಂಡಿ ಕಾರ್ಯದಲ್ಲಿ ತೊಡಗಿದ್ದರೂ, ಹೆಚ್ಚಿನ ಗುಂಡಿಗಳು ದುರಸ್ತಿಯಾಗಿಲ್ಲ. 

Advertisement

ನಗರದಲ್ಲಿರುವ ಎಲ್ಲ ರಸ್ತೆಗುಂಡಿಗಳನ್ನು ಸೋಮವಾರದೊಳಗೆ (ಸೆ.24) ಮುಚ್ಚುವಂತೆ ಹೈಕೋರ್ಟ್‌ ಪಾಲಿಕೆ ಸೂಚನೆ ನೀಡಿದೆ. ಅದರಂತೆ ಬುಧವಾರದಿಂದಲೇ ಕಾರ್ಯಾಚರಣೆ ನಡೆಸುತ್ತಿರುವ ಪಾಲಿಕೆಯ ಅಧಿಕಾರಿಗಳು ಈವರೆಗೆ ದುರಸ್ತಿಪಡಿಸಿರುವ ಗುಂಡಿಗಳ ಸಂಖ್ಯೆ 1,416 ಮಾತ್ರ. ಹೀಗಾಗಿ ಉಳಿದ ಎರಡು ದಿನಗಳಲ್ಲಿ ನಗರದಲ್ಲಿರುವ ಎಲ್ಲ ಗುಂಡಿಗಳನ್ನು ಪಾಲಿಕೆ ಮುಚ್ಚುವುದೇ ಎಂಬ ಅನುಮಾನ ಮೂಡಿದೆ. 

ಹೈಕೋರ್ಟ್‌ ಸೂಚನೆ ಮೇರೆಗೆ ಬಿಬಿಎಂಪಿಯ ಎಲ್ಲ ವಲಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುಂಡಿ ಮುಚ್ಚಿವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಶುಕ್ರವಾರ ಸರ್ಕಾರಿ ರಜೆ ದಿನವಾದರೂ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅದರಂತೆ ಶುಕ್ರವಾರ 265 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತುಳಸಿನಾಥ್‌ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಒಟ್ಟು 3,071 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಆ ಪೈಕಿ ಶುಕ್ರವಾರದವರೆಗೆ 899 ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇನ್ನು ಶುಕ್ರವಾರ ಸಂಜೆವರೆಗೆ 265 ಗುಂಡಿಗಳು ಸೇರಿ ಒಟ್ಟು 1,416 ರಸ್ತೆ ಗುಂಡಿಗಳ ದುರಸ್ತಿ ಕಾರ್ಯ ನಡೆಸಿದ್ದು, ಉಳಿದ 1,655 ಗುಂಡಿಗಳನ್ನು ಸೋಮವಾರದೊಳಗೆ ಮುಚ್ಚಲಾಗುವುದು. ಆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ವಿವರಿಸಿದರು. 

ಪಾಲಿಕೆಯ ಎಂಟು ವಲಯಗಳಲೂ ರಸ್ತೆಗುಂಡಿ ಮುಚ್ಚು ಕೆಲಸ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಹೈಕೋರ್ಟ್‌ ಆದೇಶದಂತೆ ಸೋಮವಾರದೊಳಗೆ ಎಲ್ಲ ಮುಚ್ಚಲಾಗುವುದು. ಮಳೆ ಬಂದರೆ ಕೋಲ್ಡ್‌ ಮಿಕ್ಸ್‌ ಬಳಸುತ್ತೇವೆ. ಕೆಲವು ರಸ್ತೆಗಳಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಬೇಕಿರುವ ಹಿನ್ನೆಲೆಯಲ್ಲಿ ಮಣ್ಣು ಹಾಗೂ ಕಲ್ಲು ಹಾಕಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
-ಎಂ.ಆರ್‌.ವೆಂಕಟೇಶ್‌, ಪ್ರಧಾನ ಇಂಜಿನಿಯರ್‌

Advertisement

ಗುಂಡಿ ವಿವರ (ಸೆ.21 ಸಂಜೆ.7.45ಕ್ಕೆ)
ವಲಯ    ಗುರುತಿಸಿದ ಗುಂಡಿ    ಮುಚ್ಚಿದ ಗುಂಡಿ    ಬಾಕಿ

-ಪೂರ್ವ    68    44    24
-ಪಶ್ಚಿಮ    27    27    0
-ದಕ್ಷಿಣ    71    13    58
-ಬೊಮ್ಮನಹಳ್ಳಿ    321    125    196
-ದಾಸರಹಳ್ಳಿ    125    50    75
-ಮಹದೇವಪುರ    709    131    578
-ಆರ್‌.ಆರ್‌.ನಗರ    55    0    55
-ಯಲಹಂಕ    379    66    313
-ರಸ್ತೆ ಮೂಲ ಸೌಕರ್ಯ    417    61    356
-ಒಟ್ಟು    2172    517    1655

Advertisement

Udayavani is now on Telegram. Click here to join our channel and stay updated with the latest news.

Next