Advertisement

ತಾಳೆಯಾಗದ ಕೇಂದ್ರ-ರಾಜ್ಯ ನೆರೆ ಲೆಕ್ಕಾಚಾರ

11:13 PM Oct 04, 2019 | Team Udayavani |

ರಾಜ್ಯದ ನೆರೆ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಧಿಯಿಂದ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು, ಪ್ರವಾಹದಲ್ಲಿ ಉಂಟಾದ ಹಾನಿ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ವರದಿಯಾಗಿತ್ತು. ಇದು ರಾಜ್ಯದಲ್ಲಿ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿತ್ತು.

Advertisement

ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿಲ್ಲ, ಇನ್ನೆರಡು ದಿನದಲ್ಲಿ ಕೇಂದ್ರದಿಂದ ಪರಿಹಾರ ಸಿಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಇದಕ್ಕೆ ಬಿಜೆಪಿ ಸಂಸದರು, ಸಚಿವರು ಧ್ವನಿಗೂಡಿಸಿದ್ದರು. ಆದರೂ, ಪರಿಹಾರ ಬಾರದಿದ್ದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸೇರಿ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹೋರಾಟದ ಎಚ್ಚರಿಕೆ ನೀಡಿದ್ದರು. ಈ ಕುರಿತಾದ ರಾಜಕೀಯ ನಾಯಕರ ವಾಕ್ಸಮರದ ಝಲಕ್‌ ಇಲ್ಲಿದೆ.

ಪರಿಹಾರ ಕೇಳಿದರೆ ದೇಶದ್ರೋಹಿಗಳಾ?
ಬೆಂಗಳೂರು: ನೆರೆಗೆ ಪರಿಹಾರ ಕೇಳಿದರೆ, ಮೋದಿ, ಅಮಿತ್‌ ಶಾ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ. ಕರ್ನಾಟಕದ ಎಲ್ಲ ಜನರೂ ನೆರೆ ಪರಿಹಾರ ನೀಡುವಂತೆ ಕೇಳುತ್ತಿದ್ದಾರೆ. ಬಿಜೆಪಿಯವರ ಪ್ರಕಾರ ಕನ್ನಡಿಗರೆಲ್ಲರೂ ದೇಶ ದ್ರೋಹಿಗಳೆ? ಎಂದು ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತ ನಾಡಿ, ಬಿಜೆಪಿ ಭಂಡತನದ ರಾಜಕೀಯ ಮಾಡುತ್ತಿದೆ. ಪ್ರಕೃತಿ ವಿಕೋಪವಾದಾಗ ಹಣ ನೀಡಲು ಪ್ರತ್ಯೇಕ ವ್ಯವಸ್ಥೆ ಇದೆ. ಅದನ್ನು ಉಪಯೋಗಿಸಿ ಕೊಂಡು ನೆರವು ತರಬೇಕು. ಕೇಂದ್ರದಿಂದ ಮಧ್ಯಂತರ ಪರಿಹಾರ ಪಡೆದು ನೆರವು ನೀಡಲಿ. ಪ್ರತಿಪಕ್ಷ ನಾಯಕರ ವಿರುದ್ಧ ಮಾತನಾಡುವ ಧೈರ್ಯ ತೋರುವ ಸಂಸದರಿಗೆ, ಮೋದಿ ಬಳಿ ಹೋಗಿ ಕೈಚಾಚಿ ಮನವಿ ಮಾಡಲು ಆಗುವುದಿಲ್ಲವೇ?. 25 ಸಂಸದರು ಹೋಗಿ ರಾಜ್ಯಕ್ಕೆ ನೆರವು ತನ್ನಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಖಜಾನೆ ಖಾಲಿಯಾಗಿದೆ ಎನ್ನುತ್ತಾರೆ. ಮಾಜಿ ಉಪ ಮುಖ್ಯಮಂತ್ರಿಗಳು ಹಣದ ಕೊರತೆಯಿಲ್ಲ ಎನ್ನುತ್ತಾರೆ. ಯಾರ ಮಾತನ್ನು ನಂಬುವುದು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಆದರೂ, ರಾಜ್ಯಕ್ಕೆ ಪರಿಹಾರ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಸಂತ್ರಸ್ತರಿಗೆ ಪರಿಹಾರ ಕೊಡಿಸಿ, ಇಲ್ಲವೇ ರಾಜೀನಾಮೆ ಕೊಡಿ
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಕೇಂದ್ರ ದಿಂದ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಆಗದಿದ್ದರೆ, ಯಡಿಯೂರಪ್ಪ ರಾಜಿನಾಮೆ ಕೊಟ್ಟು ಹೋಗಲಿ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದ್ದಾರೆ.  ಬಿಜೆಪಿಯವರು “ಆಪರೇಷನ್‌ ಕಮಲ’ ಮಾಡಲು ಕೋಟ್ಯಂತರ ರೂ. ವೆಚ್ಚ ಮಾಡಿದ್ದಾರೆ. ಮೋದಿ ಯವರು ವಿದೇಶಕ್ಕೆ ಶೋಕಿ ಮಾಡಲು ಹೋಗುತ್ತಾರೆ. ಆದರೆ, ದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮಾತ್ರ ಅವರಿಗೆ ಪುರುಸೊತ್ತಿಲ್ಲ. ಕೇಂದ್ರ ಸಚಿವರು, ಸಂಸದರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.

ಇದೆಲ್ಲವೂ ಬಿಜೆಪಿ ಸರ್ಕಾರಕ್ಕೆ ಬದ್ಧತೆಯಿಲ್ಲ ಎಂಬುದಕ್ಕೆ ಹಿಡಿದ ಕನ್ನಡಿ ಎಂದರು. ಕೇಂದ್ರ ಸರ್ಕಾರ ಈವರೆಗೆ ಎನ್‌ಡಿಆರ್‌ಎಫ್ ನಿಧಿ ಮೂಲಕ 204 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಿ ಅಧಿಕಾರಿಗಳ ತಂಡದ ಶ್ರೀಪ್ರಕಾಶ್‌ ಕೇಂದ್ರ ಸರ್ಕಾರಕ್ಕೆ ವರದಿಯನ್ನೆ ಸಲ್ಲಿಸಿಲ್ಲ ಎಂಬ ಮಾಹಿತಿ ಇದೆ. ಕೇಂದ್ರ ಸಮಿತಿ ಕಾಟಾಚಾರಕ್ಕೆ ಬಂದು ಹೋಗಿದೆ. ಸಮೀಕ್ಷಾ ತಂಡ ಸರಿಯಾಗಿ ವರದಿಯನ್ನೇ ಕೊಡದಿದ್ದರೆ ಹೇಗೆ ವರದಿ ತಾಳೆಯಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂತ್ರಸ್ತರ ಬಗ್ಗೆ ಹಗುರ ಮಾತು ನಿಲ್ಲಿಸಿ
ಸಚಿವರಾದ ಕೆ.ಎಸ್‌. ಈಶ್ವರಪ್ಪ, ಲಕ್ಷಣ ಸವದಿ, ಮಾಧುಸ್ವಾಮಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಸೇರಿ ಕೆಲವು ಬಿಜೆಪಿ ನಾಯಕರು ಸಂತ್ರಸ್ತರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಕಷ್ಟದಲ್ಲಿರುವವರ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವವರನ್ನು ಕರೆದುಕೊಂಡು ಹೋಗಿ ಪ್ರವಾಹದ ನಡುಗಡ್ಡೆಯಲ್ಲಿ ನಿಲ್ಲಿಸಬೇಕು. ಆಗ ಅವರಿಗೆ ಪ್ರವಾಹದ ಪರಿಸ್ಥಿತಿ ಏನು ಎಂಬುದು ಅರಿವಾಗಲಿದೆ. ಆದರೆ, ಬಿಜೆಪಿ ಶಾಸಕ ಬಸವರಾಜ ಪಾಟೀಲ… ಯತ್ನಾಳ್‌ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಈ ಬಗ್ಗೆ ಪಕ್ಷಭೇದ ಮರೆತು ಸರ್ಕಾರವನ್ನು ಪ್ರಶ್ನಿಸಿರುವುದನ್ನು ಅಭಿನಂದಿಸುವೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಬಿಹಾರ ಪ್ರವಾಹದ ಬಗ್ಗೆ ಮೋದಿ ಟ್ವೀಟ್‌ ಮಾಡಿ ಸಾಂತ್ವನ ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಂತ್ರಸ್ತರಿಗೆ ಒಂದೇ ಒಂದು ಸಾಂತ್ವನದ ಮಾತುಗಳನ್ನಾಡದಿರುವುದನ್ನು ನೋಡಿದರೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಜನರ ಸಂಕಷ್ಟಕ್ಕೆ ಆಗದ ಸರ್ಕಾರ ಇದ್ದರೇನು ಪ್ರಯೋಜನ. ಜನರಿಗೆ ನೆರವು ಕೊಡಿಸಲು ಯಡಿಯೂರಪ್ಪ ಅಸಹಾಯಕರಾಗಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಲಿ ಎಂದು ಆಗ್ರಹಿಸಿದರು.

ಯಡಿಯೂರಪ್ಪ ಹಾಗೂ ಅಮಿತ್‌ ಶಾ, ಮೋದಿ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಜನರ ಮೇಲೆ ಹೇರುವುದು ಸರಿಯಲ್ಲ. ಅವರುಗಳ ದ್ವೇಷಕ್ಕೆ ರಾಜ್ಯದ ಜನ ಸಾಯಬೇಕೆ?. ನಗರ ಪ್ರದೇಶಗಳಲ್ಲಿ ಫ್ಲೈಓವರ್‌, ರಿಂಗ್‌ ರಸ್ತೆಗಳ ಅನುದಾನ ಕಡಿತಗೊಳಿಸಿ, ಸಂತ್ರಸ್ತರಿಗೆ ನೀಡಿ, ಬಡವರಿಗೆ ಬದುಕು ಕಟ್ಟಿಕೊಡಲಿ. ನಂತರ, ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ: ಸಿದ್ದು
ಯಡಿಯೂರಪ್ಪ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಒಪ್ಪಿಕೊಳ್ಳುವ ಮೂಲಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೋದಿ ಸರ್ಕಾರಕ್ಕೆ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಯೋಗ್ಯತೆಯಿಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ. ಆರ್ಥಿಕವಾಗಿ ಮಾತ್ರವಲ್ಲ. ಬೌದ್ಧಿಕವಾಗಿಯೂ ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ನಡುವಿನ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿಕೊಡುತ್ತೀರಿ? ನಿಮಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆಯಿಲ್ಲ. ತಕ್ಷಣ ರಾಜೀನಾಮೆ ಕೊಟ್ಟು ಹೋಗಿ. ಜನರಿಗೆ ಶಿಕ್ಷೆ ಕೊಡಬೇಡಿ ಎಂದು ಟ್ವೀಟ್‌ ಮೂಲಕ ವಾಗ್ಧಾಳಿ ನಡೆಸಿದ್ದಾರೆ.

ಗಾಯದ ಮೇಲೆ ಬರೆ
ರಾಜ್ಯ ಸರ್ಕಾರದ ನಷ್ಟದ ವರದಿಯನ್ನು ತಿರಸ್ಕರಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ. ಈಗಲಾದರೂ ಯಡಿಯೂರಪ್ಪನವರು ಸರ್ವಪಕ್ಷ ಮುಖಂಡರ ಸಭೆಯನ್ನು ತಕ್ಷಣ ಕರೆಯಲಿ. ಕೇಂದ್ರದಿಂದ ಆಗುತ್ತಿರುವ ಘೋರ ಅನ್ಯಾಯದ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ಕೃಷ್ಣಾ ನದಿ ಪ್ರವಾಹಕ್ಕಿಂತ ಭೀಮಾ ನದಿಯಿಂದ ವಿಜಯಪುರ ಜಿಲ್ಲೆ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾ ಗಿದೆ. ಮುಖ್ಯಮಂತ್ರಿಗಳು ಸಭೆ, ಪರಿ ಶೀಲನೆ ಅಂತೆಲ್ಲ ಕಾಲಹರಣ ಮಾಡದೇ ತಕ್ಷಣ ಪರಿಹಾರ ವಿತರಿಸಲು ಮುಂದಾಗ ಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.
-ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next