ಮೈಸೂರು: ಭವಿಷ್ಯದಲ್ಲಿ ಎಂತಹ ಭೀಕರ ಪರಿಸ್ಥಿತಿ ದೇಶಕ್ಕೆ ಬಂದರೂ ಅದನ್ನು ಎದುರಿಸುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ ಎಂದು ಹಿರಿಯ ಸಾಹಿತಿ ಡಾ.ಎಲ್.ಎಲ್.ಭೈರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾಗಿರುವ ಕಾರಣ ದೇಶ ಒಳ್ಳೆಯ ಮಟ್ಟದಲ್ಲಿ ಸುಧಾರಣೆ ಕಾಣುತ್ತಿದೆ. ಮುಂದಿನ ಚುನಾವಣೆ ಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗದಿದ್ದರೆ ಈ ದೇಶದ ಪರಿಸ್ಥಿತಿಯನ್ನು ಕಲ್ಪಿಸಲೂ ಆಗುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಮೈತ್ರಿ ? ಕುತೂಹಲ ಹೆಚ್ಚಿಸಿದ ಚಿದಂಬರಂ ನೇತೃತ್ವದ ಸಭೆ
ಕೆಲವರು ಆರ್‌ಎಸ್‌ಎಸ್ ಅನ್ನು ತಾಲಿಬಾನಿಗೆ ಹೋಲಿಸುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಬೇರೆ ಯಾವ ದೇಶದಲ್ಲೂ ಈ ರೀತಿಯ ಪ್ರಜೆಗಳು ಇರಲು ಸಾಧ್ಯವಿಲ್ಲ. ಇವರಿಂದ ಇಂತಹ ಹೇಳಿಕೆಯನ್ನಷ್ಟೇ ನಿರೀಕ್ಷೆ ಮಾಡಬಹುದು. ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಖಂಡಿತವಾಗಿ ಇಂತವರು ಇರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಏನು ಬೇಕಾದರೂ ಮಾತನಾಡಬಹುದು. ಇದು ನಮ್ಮ ಪ್ರಜಾಪ್ರಭುತ್ವ ಎಂದು ಬೇಸರ ವ್ಯಕ್ತಪಡಿಸಿದರು.
ಭೈರಪ್ಪ ಹುಟ್ಟೂರಿನ ಅಭಿವೃದ್ಧಿಗೆ ಬದ್ಧ: ಸಚಿವ ವಿ.ಸುನೀಲ್
ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹುಟ್ಟೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು. ಸಚಿವರು ಬುಧವಾರ ನಗರದಲ್ಲಿನ ಡಾ.ಎಲ್.ಎಲ್.ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಮಾತುಕತೆ ವೇಳೆ ಈ ಬಗ್ಗೆ ಹೇಳಿದರು.
ಭೈರಪ್ಪ ಹುಟ್ಟೂರಾದ ಸಂತೆ ಶಿವರ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಕೂಡಲೇ ಸಂಬಂಧಪಟ್ಟವರ ಜೊತೆ ಮಾತನಾಡಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಸೂಚಿಸುವುದಾಗಿ ತಿಳಿಸಿದರು.
ಭೈರಪ್ಪ ಅವರ ಜೊತೆ ಸೌಹಾರ್ದಯುತ ಮಾತುಕತೆ ನಡೆಸಿದ ಸಚಿವರು ನಾಡಿನ ಕಲೆ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡರು. ಈ ವೇಳೆ ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಎನ್.ವಿ ಫಣೀಶ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಇತರರಿದ್ದರು.