ನವದೆಹಲಿ: ನ್ಯಾಯಮೂರ್ತಿಗಳ ನೇಮಕ ಸಂಬಂಧ 2018 ಡಿ.12ರಂದು ಕೊಲೀಜಿಯಂ ನಡೆಸಿದ್ದ ಸಭೆಯ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ನೀಡಲು ಸಾಧ್ಯವಿಲ್ಲ. ಇಂಥ ವಿಚಾರಗಳನ್ನು ಬಹಿರಂಗಪಡಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಜತೆಗೆ ಮಾಹಿತಿ ಕೋರಿದ್ದ ಅರ್ಜಿಯನ್ನೂ ತಿರಸ್ಕರಿಸಿದೆ.ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಎಂ.ಆರ್.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠ, ಸಭೆಯಲ್ಲಿ ಅನುಮೋದನೆಗೊಂಡು ಸಹಿ ಹಾಕಲ್ಪಟ್ಟ ಅಂತಿಮ ನಿರ್ಧಾರಗಳು ಮಾತ್ರ ಅಧಿಕೃತ. ತಾತ್ಕಾಲಿಕವಾಗಿ ಚರ್ಚೆಗೆ ಕೈಗೆತ್ತಿಕೊಂಡ ಮತ್ತು ಸಮಾಲೋಚನೆ ನಡೆಸಿದ ಅಂಶಗಳನ್ನು ಅಂತಿಮ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೊಲೀಜಿಯಂ ಎನ್ನುವುದು ಬಹು ಸದಸ್ಯರ ತಂಡ. ಅದರಲ್ಲಿ ಕೈಗೊಂಡ ತಾತ್ಕಾಲಿಕ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ. ಸಮಿತಿಯ ನಿವೃತ್ತ ಸದಸ್ಯರನ್ನು ಸಂದರ್ಶನ ಮಾಡಿ, ಅವರಿಂದ ಪಡೆದುಕೊಂಡ ಮಾಹಿತಿಯ ಆಧಾರವಾಗಿ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ನ್ಯಾಯಪೀಠ ಪರಿಗಣಿಸುವುದಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.