Advertisement

Muddebihal: ಮಹಿಳೆಯಿಂದ ಮೊಬೈಲ್‌ ಕಸಿಯಲು ಯತ್ನಿಸಿದ ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು

08:19 PM Mar 26, 2024 | Kavyashree |

ಮುದ್ದೇಬಿಹಾಳ: ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬಳ ಕೈಯಲ್ಲಿದ್ದ ಮೊಬೈಲ್‌ ಕಸಿಯಲು ಯತ್ನಸಿ ವಿಫಲನಾಗಿ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಯುವಕ ಧರ್ಮದೇಟು ತಿಂದು ಪೊಲೀಸರ ಅತಿಥಿಯಾದ ಘಟನೆ ಪಟ್ಟಣದಲ್ಲಿ ಮಾ. 26ರ ಮಂಗಳವಾರ ಸಂಜೆ ನಡೆದಿದೆ.

Advertisement

ತಾಲೂಕಿನ ದೇವರ ಹುಲಗಬಾಳದ ಈ ಮಹಿಳೆ ನಿತ್ಯ ತನ್ನೂರಿನಿಂದ ಪಟ್ಟಣಕ್ಕೆ ಕೆಲಸಕ್ಕೆ ಬರುತ್ತಾರೆ. ಮಂಗಳವಾರ ಕೆಲಸ ಬೇಗ ಮುಗಿದ ಕಾರಣ ಸಂಜೆ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ ಏಕಾಏಕಿ ಯುವಕನೊಬ್ಬ ಆಕೆಯತ್ತ ಧಾವಿಸಿ ಕೈಯಲ್ಲಿದ್ದ ಅಂದಾಜು 10 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್ ಕಸಿಯಲು ಯತ್ನಿಸಿದ್ದಾನೆ. ಆದರೆ ಮಹಿಳೆ‌ ಮೊಬೈಲ್‌ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಮೊಬೈಲ್‌ ಕಸಿಯುವ ಯತ್ನದಲ್ಲಿ ವಿಫಲನಾಗಿ ಸ್ಥಳದಿಂದ ಓಡಿ ಹೋಗಿದ್ದಾನೆ.

ಕ್ಷಣಮಾತ್ರದಲ್ಲಿ ನಡೆದ ಈ ಘಟನೆ ಬಸ್ ನಿಲ್ದಾಣದಲ್ಲಿದ್ದ ಬೆರಳೆಣಿಕೆಯಷ್ಟು ಜನರ ಗಮನಕ್ಕೆ ಬಂದಿರಲಿಲ್ಲ. ಮೊಬೈಲ್‌ ಕಸಿಯುವ ಯತ್ನದಲ್ಲಿ ಯುವಕ ಓಡುವ ರಭಸಕ್ಕೆ ಆ ಮಹಿಳೆ ಬಳಿ ಚಪ್ಪಲಿ ಬಿಟ್ಟು ಹೋಗಿದ್ದರಿಂದ ಯುವಕ ಚಪ್ಪಲಿ ಹಾಕಿಕೊಳ್ಳಲು ಮರಳಿ ಆ ಮಹಿಳೆ ಬಳಿ ಬಂದಿದ್ದಾನೆ. ಆಗ ಮಹಿಳೆ ಆತನನ್ನು ಗುರುತು ಹಿಡಿದು ಗದ್ದಲ ಎಬ್ಬಿಸಿದ್ದಾರೆ.

ಇದರಿಂದ ಗಲಿಬಿಲಿಗೊಂಡ ಯುವಕ ಓಡಿ ಹೋಗತೊಡಗಿದ್ದಾನೆ. ತಕ್ಷಣ ಏನೋ ನಡಿತಿದೆ ಎಂದು ಅರಿತ ಸಾರ್ವಜನಿಕರು ಅವನ ಬೆನ್ನು ಹತ್ತಿದ್ದಾರೆ. ಅರ್ಧ ಕಿ.ಮೀ. ವರೆಗೆ ಓಡಿದ ನಂತರ ಯುವಕ ಸಿಕ್ಕಿಹಾಕಿಕೊಂಡಿದ್ದಾನೆ. ಅಷ್ಟೊತ್ತಿಗೆ ಪೊಲೀಸರೂ ಆ ಸ್ಥಳಕ್ಕೆ ಆಗಮಿಸಿದ್ದು, ಸಾರ್ವಜನಿಕರು ಪೊಲೀಸರೆದುರೇ ಧರ್ಮದೇಟು ನೀಡಿದ್ದಾರೆ. ಈ ತಳ್ಳಾಟದಲ್ಲಿ ಯುವಕನ ಕೈಯಲ್ಲಿದ್ದ ಕ್ಯಾರಿಬ್ಯಾಗ್‍ನಲ್ಲಿದ್ದ ಮಾಂಸದ ತುಂಡುಗಳು ರಸ್ತೆಯಲ್ಲೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದವು.

Advertisement

ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಯುವಕನನ್ನು ಠಾಣೆಗೆ ಕರೆದೊಯ್ದರು. ಯುವಕ ಜಮ್ಮಲದಿನ್ನಿ ಗ್ರಾಮದವನೆನ್ನಲಾಗಿದ್ದು, ಆತ ಮಂದಬುದ್ದಿಯವನು. ವೃತ್ತಿಪರ ಕಳ್ಳನಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಕುರಿತು ಸಂಜೆಯವರೆಗೂ ಪ್ರಕರಣ ದಾಖಲಾಗಿಲ್ಲ. ಬಸ್ ನಿಲ್ದಾಣದಲ್ಲಿ ಪಿಕ್‍ ಪಾಕೆಟ್, ಮೊಬೈಲ್‌ ಕಳ್ಳತನ ಪ್ರಕರಣಗಳು ಹೆಚ್ಚಾಗತೊಡಗಿವೆ. ಬಸ್ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು  ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಹಾಕಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next