Advertisement

Mangaluru: ಅಖಂಡ ಭಾರತದ ಐಕ್ಯತೆ

12:49 PM Aug 15, 2024 | Team Udayavani |

ಜಾಗೃತಗೊಳ್ಳಬೇಕು ಯುವಶಕ್ತಿ : ಇಂದು ದೇಶದ ಯುವ ಜನತೆ ಎಚ್ಚೆತ್ತು ಕೊಳ್ಳಬೇಕಾದ ಅನಿವಾರ್ಯತೆ ಇದೆ .ಭರತ ಭೂಮಿಯಲ್ಲಿ ಯುವಶಕ್ತಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನೇ ಅರ್ಪಿಸಿಕೊಂಡ ವೀರಕಥೆಗಳು ಸಾಕಷ್ಟಿವೆ .ಈ ಯುವಶಕ್ತಿಯ ವೀರ ಹೋರಾಟದ ನಡೆ ಭಾರತದ ಸ್ವಾತಂತ್ರ್ಯಕ್ಕಾಗಿ, ಜನ್ಮಭೂಮಿಯ ಮುಕ್ತಿಗಾಗಿತ್ತು. ಆದರೆ, ಇಂದು ಇವೆಲ್ಲವೂ ಗಾಳಿಗೆ ತೂರಲ್ಪಟ್ಟಿದೆ . ದೇಶದ ಒಗ್ಗಟ್ಟಿಗೆ ಧಕ್ಕೆ ಬರುವ ತದ್ವಿರುದ್ಧವಾದ ಅಭಿಪ್ರಾಯಗಳು ಮಂಡನೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶವನ್ನೇ ಅತಂತ್ರಗೊಳಿಸುವ ಜಾತಿ, ಕೋಮು ಗಲಭೆಗಳು ರಾಷ್ಟ್ರದ ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿದೆ .ಈ ಬಗ್ಗೆ ಯುವ ಜನತೆ ಎಚ್ಚರಿಕೆಯ ನಡೆಯನ್ನು ಇಡಬೇಕಾದ ಅನಿವಾರ್ಯತೆ ಇದೆ .

Advertisement

ಪ್ರಸ್ತುತ ದೇಶದ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಯುವಜನತೆಯಿಂದ ಮಾತ್ರ ಸಾಧ್ಯ . ನಮ್ಮತನವನ್ನು ಉಳಿಸಿಕೊಳ್ಳುವುದು ಯುವಜನಾಂಗದ ಪರಮ ಕರ್ತವ್ಯ ಕೂಡ. ಕೇವಲ ಮತದಾನ ಮಾಡಿ ಕೈ ತೊಳೆದುಕೊಳ್ಳುವುದಷ್ಟೇ ನಮ್ಮ ಕರ್ತವ್ಯ ಅಲ್ಲ . ದೇಶದ ಸಮಗ್ರತೆಗೆ ಪೂರಕವಲ್ಲದ ವ್ಯವಸ್ಥೆಯನ್ನು ಖಂಡಿಸುವುದು ಕೂಡ ಯುವಜನತೆಯ ಜವಾಬ್ದಾರಿಯಾಗಬೇಕು. ನಿರುದ್ಯೋಗ, ಅಸಮರ್ಪಕ ಶಿಕ್ಷಣ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ಕೊರತೆಯನ್ನು ನೀಗಿಸುವತ್ತ ಹೆಚ್ಚು ಗಮನ ಹರಿಸುವುದು ಇಂದಿನ ಪ್ರಸ್ತುತ ವಿಷಯ. ಪ್ರಜಾಸತ್ತಾತ್ಮಕ , ಜಾತ್ಯಾತೀತ , ಸಮಾಜವಾದಿ ಹಾಗೂ ಸುಖೀ ರಾಜ್ಯ ನಿರ್ಮಾಣ ಮಾಡುವ ಗುರಿಯನ್ನು ಯುವ ಜನತೆ ಇಟ್ಟುಕೊಂಡಾಗ ಮಾತ್ರ ಭಯ ಮುಕ್ತ ಸಮಾಜದೊಂದಿಗೆ ಯುವಜನಾಂಗ ಸ್ವಾತಂತ್ರ್ಯೋತ್ಸವವನ್ನು ಆಚರಿಸಬಹುದು.

ಹಾಗಾಗಿ, ಸ್ವಾತಂತ್ರ್ಯೋತ್ಸವದ ಆಚರಣೆಯ ಈ ಪರ್ವಕಾಲದಲ್ಲಿ ನಾವೆಲ್ಲರೂ ಭಾರತೀಯರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಪಕ್ಷ ,ಜಾತಿ, ಧರ್ಮಭೇದ ಮರೆತು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹನೀಯರ ಸಾಧನೆಗಳನ್ನು ಸ್ಮರಿಸುತ್ತಾ ಅವರ ಧ್ಯೇಯ ವಾಕ್ಯವನ್ನು ಪಾಲಿಸುವುದು ಸದ್ಯದ ಬಹುಮುಖ್ಯ ಕರ್ತವ್ಯ ಕೂಡ ಆಗಿದೆ .ಸಮಾನ ನಾಗರಿಕ ಕಾನೂನು ಜಾರಿ ಮಾಡಿ ಜನರಲ್ಲಿ ‘ ಐಕ್ಯತೆಯ ಭಾವನೆಯನ್ನು ಮೂಡಿಸುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆಗಬೇಕಿದೆ. ಸಾಮಾಜಿಕ ನೆಮ್ಮದಿಯ ಕನಸು ಜಾಗತಿಕ ಸಾತ್ವಿಕ ಶಕ್ತಿ ಸ್ವಾತಂತ್ರ್ಯೋತ್ಸವದ ದಿನದಂದು ಕ್ರಿಯಾಶೀಲವಾಗಬೇಕು . ಹಿಂದಿನ ಕರಾಳ ದಿನಗಳನ್ನು ಮರೆತು, ಹೊಸ ಆಶಯದೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆಯೋಣ ಎಂದು ಸ್ವಾತಂತ್ರ್ಯೋತ್ಸವದ ಆಚರಣೆಯ ಪರ್ವಕಾಲದಲ್ಲಿ ನಾವೆಲ್ಲರೂ ಸಂಕಲ್ಪ ಮಾಡೋಣ.

ಲೇಖನ: ಎಸ್‌. ಜಗದೀಶ್ಚಂದ್ರ ಅಂಚನ್‌ ಸೂಟರ್‌ ಪೇಟೆ

Advertisement

Udayavani is now on Telegram. Click here to join our channel and stay updated with the latest news.

Next