Advertisement

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

12:37 AM Oct 24, 2024 | Team Udayavani |

ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಮಾರಾಟದಲ್ಲಿ ಹಿಡಿತ ಸಾಧಿಸಲು ಹೊರಟಿರುವ ಭಾರತಕ್ಕೆ ಮಹಾರಾಷ್ಟ್ರದ ನಾಗಪುರ ಹೆಚ್ಚಿನ ಕೊಡುಗೆ ನೀಡುತ್ತಿದೆ. ನಾಗಪುರದಿಂದ ಮೂರೇ ತಿಂಗಳಿನಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕಗಳು ವಿದೇಶಗಳಿಗೆ ಮಾರಾಟವಾಗಿದೆ. ಏನಿದು ಸ್ಫೋಟಕಗಳ ಮಾರುಕಟ್ಟೆ, ನಾಗಪುರದ ಕೊಡುಗೆ ಏನು, ಭಾರತದಲ್ಲಿ ಯಾವೆಲ್ಲ ಕಂಪೆನಿಗಳು ಶಸ್ತ್ರಾಸ್ತ್ರ ಉತ್ಪಾದನೆ ಮಾಡುತ್ತಿವೆ ಎಂಬ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಎರಡು ವರ್ಷಗಳ ಹಿಂದೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಹಲವು ದೇಶಗಳ ಕಣ್ಣು ಭಾರತದ ನಾಗಪುರದತ್ತ ಹೊರಳಿತ್ತು. ಯುದ್ಧಭೂಮಿ­ಯಿಂದ ಬರೋಬ್ಬರಿ 4,500 ಕಿ.ಮೀ. ದೂರದಲ್ಲಿರುವ ನಾಗಪುರದಲ್ಲಿ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಹೆಚ್ಚಾಯಿತು. ಯುರೋಪ್‌ನ ಬಹುತೇಕ ರಾಷ್ಟ್ರಗಳು ನಾಗಪುರಕ್ಕೆ ಭೇಟಿ ನೀಡಿ ಸ್ಫೋಟಕಗಳನ್ನು ಖರೀದಿಸಿದವು. ನಾಗಪುರದ ಹೊರವಲಯದಲ್ಲಿ ಸುಮಾರು 30 ಕಿ.ಮೀ. ಪ್ರದೇಶದಲ್ಲಿ ಈ ಸ್ಫೋಟಕಗಳನ್ನು ತಯಾರು ಮಾಡುವ ಕೈಗಾರಿಕೆಗಳಿದ್ದು, ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸಲು ಹೊರಟಿರುವ ಭಾರತಕ್ಕೆ ಇಲ್ಲಿನ ಕೊಡುಗೆ ಅಪಾರವಾದುದಾಗಿದೆ.

900 ಕೋ.ರೂ. ಮೌಲ್ಯದ ಸ್ಫೋಟಕ ಮಾರಾಟ
ನಾಗಪುರದಲ್ಲಿ ತಯಾರಾಗುವ ಹೌವಿಟ್ಜರ್‌ ಗನ್‌ಗಳಿಂದ ಹಾರಿಸಬಲ್ಲ 155 ಮಿ.ಮೀ. ಕ್ಯಾಲಿಬರ್‌ನ ಶೆಲ್‌, ಭುಜದ ಮೇಲಿಟ್ಟು ಹಾರಿಸಬಲ್ಲ ರಾಕೆಟ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ. ಇಲ್ಲಿರುವ ಕೈಗಾರಿಕೆಗಳು ಕೇವಲ 3 ತಿಂಗಳಿನಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕಗಳನ್ನು ಮಾರಾಟ ಮಾಡಿವೆ. ಇನ್ನೂ 3,000 ಕೋಟಿ ರೂ. ಮೌಲ್ಯದ ಸ್ಫೋಟಕಗಳಿಗೆ ಆರ್ಡರ್‌ ಸ್ವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಸ್ಫೋಟಕಗಳಷ್ಟೇ ಅಲ್ಲದೇ ಸ್ಫೋಟಕಕ್ಕೆ ಬಳಕೆ ಮಾಡಲಾಗುವ ಕಚ್ಚಾವಸ್ತುಗಳನ್ನು ಸಹ ನಾಗಪುರದ ಕೈಗಾರಿಕೆಗಳು ಮಾರಾಟ ಮಾಡುತ್ತವೆ.

ಯುರೋಪ್‌, ಆಫ್ರಿಕಾ, ಮಧ್ಯಪ್ರಾಚ್ಯ ದೇಶಗಳಿಂದ ಖರೀದಿ
ನಾಗಪುರದಲ್ಲಿ ತಯಾರಾಗುವ ಸ್ಫೋಟಕಗಳಿಗೆ ಯುರೋಪ್‌, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಬಲ್ಗೇರಿಯಾ, ಸ್ಪೇನ್‌, ಜರ್ಮನಿ, ದಕ್ಷಿಣ ಆಫ್ರಿಕಾ, ವಿಯೆಟ್ನಾಂ, ಪೋಲೆಂಡ್‌, ಬ್ರೆಜಿಲ್‌ ಮತ್ತು ಸೌದಿ ಅರೇಬಿಯಾ ದೇಶಗಳು ನಾಗಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತವೆ. ನಾಗಪುರದಲ್ಲಿ ಸ್ಫೋಟಕಗಳನ್ನು ಖರೀದಿ ಮಾಡುತ್ತಿರುವ ರಾಷ್ಟ್ರಗಳು ಯಾವುದೇ ಯುದ್ಧದಲ್ಲಿ ತೊಡಗಿಕೊಂಡಿಲ್ಲ.

ಆರ್‌ಡಿಎಕ್ಸ್‌, ಟಿಎನ್‌ಟಿ, ರಾಕೆಟ್‌ಗೆ ಭಾರೀ ಬೇಡಿಕೆ
ಇಲ್ಲಿ ತಯಾರಾಗುವ ಪ್ರಮುಖ ಸ್ಫೋಟಕಗಳೆಂದರೆ ಆರ್‌ಡಿಎಕ್ಸ್‌ ಮತ್ತು ಟಿಎನ್‌ಟಿ. ಅಲ್ಲದೇ ಭುಜದ ಮೇಲಿಟ್ಟು ಹಾರಿಸಬಲ್ಲ ರಾಕೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. 155 ಮಿ.ಮೀ. ಕ್ಯಾಲಿಬರ್‌ ಶೆಲ್‌ ಹಾಗೂ 40 ಮಿ.ಮೀ. ಗುಂಡುಗಳು ಇಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತದೆ. ಅಲ್ಲದೇ ಸ್ಫೋಟಕ ತಯಾರು ಮಾಡುವಲ್ಲಿ ಬಳಕೆಯಾ ಗುವ ಕಚ್ಚಾವಸ್ತುಗಳಾದ ಆರ್‌ಡಿಎಕ್ಸ್‌, ಟಿಎನ್‌ಟಿ, ಎಚ್‌ಎಂಎಕ್ಸ್‌ಗಳೂ ರಫ್ತಾಗುತ್ತವೆ.

Advertisement

ಯುದ್ಧದಲ್ಲಿ ತೊಡಗಿಲ್ಲದ ರಾಷ್ಟ್ರಗಳಿಗಷ್ಟೇ ಮಾರಾಟ ಇಲ್ಲಿನ ಬಹುತೇಕ ಕಂಪೆನಿಗೆ ರಫ್ತು ಮಾಡಲು ಅವಕಾಶ ಇದ್ದರೂ ಯುದ್ಧದಲ್ಲಿ ತೊಡಗಿಲ್ಲದ ರಾಷ್ಟ್ರಗಳಿಗೆ ಮಾತ್ರ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿವೆ.

ಯುದ್ಧದಿಂದ ಭಾರತದ ಶಸ್ತ್ರಾಸ್ತ್ರ ಕಂಪೆನಿಗಳು ಲಾಭ ಮಾಡಲು ಬಯಸುವುದಿಲ್ಲ ಎಂದು ಅವು ಹೇಳಿವೆ. ಇಲ್ಲಿರುವ ಬಹುತೇಕ ಕಂಪೆನಿಗಳಿಗೆ ರಫ್ತು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ರಾಷ್ಟ್ರಗಳಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಶಸ್ತ್ರಾಸ್ತ್ರ ಆಮದು ರಾಷ್ಟ್ರದಿಂದ ರಫ್ತು
ರಾಷ್ಟ್ರವಾಗಿ ಬದಲಾದ ಭಾರತ
ವಿದೇಶಗಳ ಮೇಲೆ ಭಾರತದ ಅವಲಂಬನೆ ಕಡಿಮೆ ಮಾಡ ಬೇಕು ಎಂಬ ಕಾರಣಕ್ಕೆ ಆರಂಭಿಸಲಾದ ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮ ನಿರ್ಭರ ಯೋಜನೆಗಳು ರಕ್ಷಣ ವಲಯದಲ್ಲೂ ಫ‌ಲ ಕೊಟ್ಟಿವೆ. ಕಳೆದ 1 ದಶಕದಲ್ಲಿ ಶಸ್ತ್ರಾಸ್ತ್ರ ಖರೀದಿ ಮಾಡುವುದರಿಂದ ಮಾರಾಟ ಮಾಡುವ ದಿಕ್ಕಿನತ್ತ ಭಾರತ ಬೆಳವಣಿಗೆ ಕಂಡಿದೆ. 2023-24ನೇ ಸಾಲಿನಲ್ಲಿ ಭಾರತದ ರಕ್ಷಣ ವಸ್ತುಗಳ ರಫ್ತು ಪ್ರಮಾಣ 21,083 ಕೋಟಿ ರೂ. ತಲುಪಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.32.5ರಷ್ಟು ಏರಿಕೆಯಾಗಿದೆ.

ಆತ್ಮನಿರ್ಭರತೆಯಲ್ಲಿ ಖಾಸಗಿ
ಕಂಪೆನಿಗಳ ಪಾತ್ರವೂ ಹಿರಿದು
ರಕ್ಷಣ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಸಾಧಿಸಲು ಹೊರಟಿರುವ ಭಾರತಕ್ಕೆ ಖಾಸಗಿ ಕಂಪೆನಿಗಳೂ ಸಹ ಹೆಚ್ಚಿನ ನೆರವು ನೀಡು ತ್ತಿವೆ. ಎಲ್‌ ಆ್ಯಂಡ್‌ ಟಿ, ಅದಾನಿ ಮತ್ತು ಗೋದ್ರೇಜ್‌ ಕಂಪೆನಿ ಗಳು ಪ್ರಮುಖ ಪಾತ್ರ ವಹಿಸಿವೆ. ಅಲ್ಲದೇ ಶಸ್ತ್ರಾಸ್ತ್ರ ಉತ್ಪಾದನೆ ಮಾಡುವ ಸ್ಟಾರ್ಟ್‌ಅಪ್‌ಗ್ಳಿಗೆ ಕೇಂದ್ರ ಹೆಚ್ಚಿನ ಪ್ರೋತ್ಸಾಹ ಒದಗಿಸುತ್ತಿದೆ. ಇಂತಹ ಸುಮಾರು 45 ಕಂಪೆನಿಗಳಿಗೆ ಒಪ್ಪಿಗೆ ಸಹ ನೀಡಿದೆ. ಕಚ್ಚಾವಸ್ತು, ನಿರ್ಣಾಯಕ ಬಿಡಿಭಾಗಗಳು ಸೇರಿದಂತೆ ಭಾರತ ಗುರುತಿಸಿರುವ 4,666 ವಸ್ತುಗಳಲ್ಲಿ 2,920 ವಸ್ತುಗಳನ್ನು ದೇಶೀಯವಾಗಿ ತಯಾರು ಮಾಡಲಾಗುತ್ತಿದೆ.

ಮಿಲಿಟರಿ ವೆಚ್ಚದಲ್ಲಿ ಭಾರತಕ್ಕೆ 4ನೇ ಸ್ಥಾನ
ಜಗತ್ತಿನಲ್ಲಿ ಮಿಲಿಟರಿಗಾಗಿ ವೆಚ್ಚ ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. ಭಾರತದಲ್ಲಿ 14 ಲಕ್ಷ ಮಂದಿ ಸೈನಿಕರಿದ್ದು, 2023ರಲ್ಲಿ ಭಾರತದ ಮಿಲಿಟರಿ ಬಜೆಟ್‌ ಗಾತ್ರ 5.94 ಲಕ್ಷ ಕೋಟಿ ರೂ.ನಷ್ಟಿತ್ತು. 75.11 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿರುವ ಅಮೆರಿಕ ಮೊದಲ ಸ್ಥಾನದಲ್ಲಿದೆ. ಚೀನ 33.78 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದ್ದು 2ನೇ ಸ್ಥಾನದಲ್ಲಿದೆ. 24.4 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿರುವ ರಷ್ಯಾ 3ನೇ ಸ್ಥಾನದಲ್ಲಿದೆ. ಅಲ್ಲದೇ ಮಿಲಿಟರಿ ಉಪಕರಣ ಆಮದಿನಲ್ಲೂ ಸಹ ಭಾರತ 2ನೇ ಸ್ಥಾನದಲ್ಲಿದೆ.

ರಫ್ತು ಮಾರ್ಕೆಟ್‌ ಶೇ. 700ರಷ್ಟು ವೃದ್ಧಿ
2014ರಿಂದ ಭಾರತದ ಶಸ್ತ್ರಾಸ್ತ್ರ ರಫ್ತು ಮಾರುಕಟ್ಟೆ ವೃದ್ಧಿಯಾಗುತ್ತಿದ್ದು. ಶೇ.700ರಷ್ಟು ಏರಿಕೆ ಕಂಡಿದೆ. 2024ರಲ್ಲಿ ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯ ಒಟ್ಟು ಮೌಲ್ಯ 1.44 ಲಕ್ಷ ಕೋಟಿ ರೂ. ನಷ್ಟಿದ್ದು, 2029ರ ವೇಳೆಗೆ ಇದು 2 ಲಕ್ಷ ಕೋಟಿ ರೂ.ಗೆ ಏರಿಕೆ ಯಾಗಲಿದೆ ಎಂದು ಅಂದಾಜಿಸಲಾಗಿದೆ. 3 ರಕ್ಷಣ ಉತ್ಪಾದನ ಕಂಪೆನಿಗಳು ಅಂತಾರಾಷ್ಟ್ರೀಯ ಮಟ್ಟದ 100 ಕಂಪೆನಿಗಳಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ಸ್ಟಾಕ್‌ಹೋಮ್‌ ಸಂಶೋಧನ ಸಂಸ್ಥೆಯೊಂದು ಹೇಳಿದೆ.

ಅಗ್ರ 5 ಶಸ್ತ್ರಾಸ್ತ್ರ
ರಫ್ತು ರಾಷ್ಟ್ರಗಳು
1.ಅಮೆರಿಕ: ಅಮೆರಿಕ ಜಗತ್ತಿನ ಅತೀದೊಡ್ಡ ಶಸ್ತ್ರಾಸ್ತ್ರ ರಫ್ತು ರಾಷ್ಟ್ರ. 2023ರಲ್ಲಿ ಜಗತ್ತಿನ ಒಟ್ಟು ಶಸ್ತ್ರಾಸ್ತ್ರಗಳ ರಫ್ತು ಪೈಕಿ ಶೇ.40ರಷ್ಟು ಅಮೆರಿಕವೇ ಮಾಡಿದೆ.
2.ರಷ್ಯಾ: ಜಾಗತಿಕ ಒಟ್ಟು ಶಸ್ತ್ರಾಸ್ತ್ರ ರಫ್ತು ಪೈಕಿ ರಷ್ಯಾ ಪಾಲು ಶೇ.16ರಷ್ಟಿದೆ. ಭಾರತ, ಚೀನ ಮತ್ತು ಈಜಿಪ್ಟ್ಗೆ ಹೆಚ್ಚು ರಫ್ತು.
3.ಫ್ರಾನ್ಸ್‌: ಜಾಗತಿಕ ಶಸ್ತ್ರಾಸ್ತ್ರ ರಫ್ತು ಪೈಕಿ ಫ್ರಾನ್ಸ್‌ ಪಾಲು ಶೇ.11. ಏಷ್ಯಾ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು.
4.ಚೀನ: ಚೀನ ವಾರ್ಷಿಕ ಶೇ.5.2 ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತದೆ. ಪಾಕಿಸ್ಥಾನ ಸೇರಿದಂತೆ ಇತರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತದೆ.
5.ಜರ್ಮನಿ: ಶಸ್ತ್ರಾಸ್ತ್ರ ರಫ್ತಿನಲ್ಲಿ ಜರ್ಮನಿ ಕೂಡ ಹಿಂದೆ ಬಿದ್ದಿಲ್ಲ. ಜರ್ಮನಿಯ ಜಾಗತಿಕ ಶಸ್ತ್ರಾಸ್ತ್ರ ರಫ್ತು ಪಾಲು ಶೇ.4.2ರಷ್ಟಿದೆ. ಯುರೋಪ್‌ ಮತ್ತು ಏಷ್ಯಾ ರಾಷ್ಟ್ರಗಳಿಗೆ ರಫ್ತು ಹೆಚ್ಚು.

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next