Advertisement

ಭಾರತದಲ್ಲೂ ಹಿಜುಬ್‌ ಕರಿನೆರಳು!ಕೇಂದ್ರ ಸರಕಾರದಿಂದ ನಿಷೇಧ

01:05 AM Oct 25, 2024 | Team Udayavani |

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಶೇಖ್‌ ಹಸೀನಾ ವಿರುದ್ಧದ ವಿದ್ಯಾರ್ಥಿ ಹೋರಾಟವನ್ನು ಹೈಜಾಕ್‌ ಮಾಡಿದೆ ಎಂದು ಆರೋಪಿಸಲಾದ ಹಿಜುಬ್‌ ಉತ್‌ ತಾಹಿರ್‌ (ಎಚ್‌ಯುಟಿ) ಸಂಘಟನೆಯನ್ನು ಭಾರತ ಸರಕಾರ ಭಯೋತ್ಪಾದಕ ಗುಂಪು ಎಂದು ಈಚೆಗೆ ಅಧಿಕೃತವಾಗಿ ಘೋಷಿಸಿದೆ.

Advertisement

ವಿಶ್ವಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೆಡವಿ ಇಸ್ಲಾಮಿಕ್‌ ಖಲೀಫ‌ತ್‌ ಸ್ಥಾಪಿಸುವ ದುರುದ್ದೇಶ ಈ ಸಂಘಟನೆಯದು. ಬಾಂಗ್ಲಾ ಮಾತ್ರವಲ್ಲದೇ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಪ್ರಭಾವ ಹೊಂದಿರುವ ಈ ಸಂಘಟನೆಯು ಭಾರತಕ್ಕೆ ತಂದೊಡ್ಡಬಹುದಾದ ಅಪಾಯಗಳು ಮತ್ತು ಇನ್ನಿತರ ಮಾಹಿತಿಗಳು ಇಲ್ಲಿದೆ.

ಹಿಜುಬ್‌ ಉತ್‌ ತಾಹಿರ್‌ ಎಂದರೆ ವಿಮೋಚನಾ ಪಕ್ಷ. ಜಾಗತಿಕ ಇಸ್ಲಾಮಿಕ್‌ ರಾಜಕೀಯ ಮತ್ತು ಸಲಾಫಿ ಸಿದ್ಧಾಂತಗಳನ್ನು ಹೊಂದಿರುವ ಈ ಸಂಘಟನೆಯು ಶರಿಯಾ ಕಾನೂನುಗಳ ಆಧಾರದಲ್ಲಿ ಜಾಗತಿಕವಾಗಿ ಖಲೀಫ‌ತ್‌ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ. ಅಲ್ಲದೇ ಇದಕ್ಕಾಗಿ ಪ್ರತ್ಯೇಕ ಸಂವಿಧಾನವನ್ನೇ ರಚಿಸಿದೆ. ಈ ಸಂಘಟನೆಯನ್ನು ರಾಜಕೀಯ ಪಕ್ಷವೆಂದೂ ಪರಿಗಣಿಸಬಹುದಾಗಿದೆ. 1953ರಲ್ಲಿ ತಖೀ ಅಲ್‌-ದಿನ್‌ ಅಲ್‌ ನಭಾನಿ ಎಂಬ ಇಸ್ಲಾಮಿಕ್‌ ವಿದ್ವಾಂಸ ಈ ಸಂಘಟನೆಯನ್ನು ರಾಜಕೀಯ ಶಕ್ತಿಯಾಗಿ ಜೋರ್ಡಾನ್‌ ಪ್ರಭಾವದಲ್ಲಿದ್ದ ಜೆರುಸಲೇಂನಲ್ಲಿ ಸ್ಥಾಪನೆ ಮಾಡಿದ. 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾನೂನಾತ್ಮಕವಾಗಿ ಮತ್ತು ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಸಂಘಟನೆಯು ಅಹಿಂಸಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಳ್ಳುತ್ತದೆ.

ವಿದ್ಯಾರ್ಥಿಗಳು, ವಿದ್ಯಾವಂತ ಯುವಜನತೆ ಮತ್ತು ಇಸ್ಲಾಂ ಧಾರ್ಮಿಕ ವಿದ್ವಾಂಸರು ಈ ಸಂಘಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ತೀವ್ರಗಾಮಿ ಸಿದ್ಧಾಂತಗಳ ಪ್ರತಿಪಾದನೆ, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಮತ್ತು ಜಿಹಾದ್‌ ಅನ್ನು ಈ ಸಂಘಟನೆಯು ಪ್ರತಿಪಾದಿಸುತ್ತದೆ. ಅಲ್ಲದೇ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಪಾಶ್ಚಾತ್ಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿರಸ್ಕರಿಸಿ ಖಲೀಫ‌ತ್‌ ಆಧಾರದಲ್ಲಿ ಒಗ್ಗೂಡಬೇಕು ಎಂಬ ಸಿದ್ಧಾಂತಗಳನ್ನು ಯುವಜನತೆಯ ಮುಖಾಂತರ ಪ್ರಚುರಪಡಿಸಿ ಹಲವು ರಾಷ್ಟ್ರಗಳಲ್ಲಿ ರಾಜಕೀಯ ಅಶಾಂತತೆಗೆ ಕಾರಣವಾಗುವ ಮೂಲಕ ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಭಾರತದಲ್ಲಿಯೂ ಎಚ್‌ಯುಟಿ ಕರಿನೆರಳು!
ರಾಷ್ಟ್ರೀಯ ತನಿಖಾ ದಳವು ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ ಎಚ್‌ಯುಟಿ ಸಂಘಟನೆಯ ಶಂಕಿತ ಸದಸ್ಯರನ್ನು ಬಂಧಿಸಿದೆ. ಅ.9ರಂದು ತಮಿಳುನಾಡಿನಲ್ಲಿ ಸಂಘ ಟನೆಯ ಪ್ರಮುಖ ನಾಯಕನ್ನೂ ಶಂಕೆಯ ಮೇರೆಗೆ ಬಂಧಿಸ ಲಾಗಿದೆ. ಬಂಧಿತರೆಲ್ಲರೂ ಭಾರತ ವಿರೋಧಿ ಸಿದ್ಧಾಂತ ಹೊಂದಿ ದ್ದಲ್ಲದೇ ಖಲೀಫ‌ತ್‌ ಸ್ಥಾಪನೆಯ ಪಿತೂರಿ ಮತ್ತು ಕಾಶ್ಮೀರವನ್ನು ಮುಕ್ತಗೊಳಿಸಲು ಪಾಕಿಸ್ಥಾನದ ನೆರವು ಕೋರಿ ಪ್ರತ್ಯೇಕವಾದವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ನಿಷೇಧಕ್ಕೆ ಕಾರಣಗಳೇನು?
ಭಾರತದಲ್ಲಿ ಎಚ್‌ಯುಟಿ ದೊಡ್ಡ ಮಟ್ಟದಲ್ಲಿ ಸಂಘಟನೆ ಹೊಂದಿರದಿರಬಹುದು. ಆದರೆ ದಿನೇ ದಿನೆ ಬೇರೂರುತ್ತಾ ಅಪಾಯಕಾರಿ ವೇಗದಲ್ಲಿ ಬೆಳೆಯುತ್ತಿರುವುದು ಸುಳ್ಳಲ್ಲ. ಹೀಗಾಗಿ ಭಾರತದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ರಾಷ್ಟ್ರ ವಿರೋಧಿ ಮನಃಸ್ಥಿತಿ ಬೆಳೆಯಲು ಈ ಸಂಘಟನೆ ನೆರವಾಗುತ್ತಿದೆ. ಹೀಗಾಗಿ ಭಾರತದಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪಿಸುವ ಹುನ್ನಾರವನ್ನು ಎಚ್‌ಯುಟಿ ಸಂಘಟನೆ ಹೊಂದಿದೆ. ಮತ್ತು ತನ್ನ ದುರುದ್ದೇಶಗಳನ್ನು ಜಾರಿಗೊಳಿಸಲು ಯುವಜನತೆಯ ದಿಕ್ಕು ತಪ್ಪಿಸುವ ಕಾರ್ಯವನ್ನು ಎಚ್‌ಯುಟಿ ಮಾಡುತ್ತಿದೆ. ಐಸಿಸ್‌ನಂತಹ ಇತರೆ ಮೂಲಭೂತವಾದಿ ಸಂಘಟನೆಯೊಂದಿಗೆ ಗುರುತಿಸಿಕೊಳ್ಳುವಂತೆ ಯುವಜನತೆಗೆ ಪ್ರಚೋದಿಸುತ್ತಿದೆ ಎಂದು ಆರೋಪಿಸಿ, ಭಾರತದ ಗೃಹ ಸಚಿವಾಲಯವು ಎಚ್‌ಯುಟಿ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಆ.10ರಂದು ಘೋಷಿಸಿ ಕಾರ್ಯ ಚಟುವಟಿಕೆಗಳಿಗೆ ನಿಷೇಧ ಹೇರಿದೆ.

ಬಾಂಗ್ಲಾದೇಶದಲ್ಲಿ ಎಚ್‌ಯುಟಿ ಮಾಡಿದ್ದೇನು?
2000ದಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ಎಚ್‌ಯುಟಿ, ತನ್ನ ತೀವ್ರಗಾಮಿ ಸಿದ್ಧಾಂತಗಳ ಕಾರಣ 2009ರಲ್ಲಿ ನಿಷೇಧಕ್ಕೊಳಪಟ್ಟಿತು. ಆದರೂ ಕಾನೂನುಬಾಹಿರವಾಗಿ ಬಾಂಗ್ಲಾದಲ್ಲಿ ಕಾರ್ಯಾಚರಣೆ ಮುಂದುವರೆಸಿದ ಈ ಸಂಘಟನೆ ಬಾಂಗ್ಲಾದ ಇತರ ಉಗ್ರ ಸಂಘಟನೆಗಳಿಗೆ ವಿರುದ್ಧವಾಗಿ ವಿದ್ಯಾವಂತರನ್ನೇ ತನ್ನ ಭಾಗವಾಗಿ ಮಾಡಿಕೊಳ್ಳುತ್ತಿದೆ. ಮತ್ತು ಇತ್ತೀಚೆಗೆ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಮುಷ್ಕರಗಳ ಹಿಂದೆ ಎಚ್‌ಯುಟಿಯ ಕಾಣದ ಕೈಗಳು ಕೆಲಸ ಮಾಡಿವೆ ಎನ್ನಲಾಗಿದೆ. ಅಲ್ಲದೇ ಹಸೀನಾ ಪದಚ್ಯುತಿಯ ಬಳಿಕ ಬಾಂಗ್ಲಾದಲ್ಲಿ ಬಹಿರಂಗ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಎಚ್‌ಯುಟಿ ತನ್ನ ಮೇಲಿರುವ ನಿಷೇಧ ತೆಗೆದುಹಾಕಲು ಒತ್ತಾಯಿಸಿದೆ. ಜಾಗತಿಕ ಉಗ್ರ ಸಂಘಟನೆ ಐಸಿಸ್‌ ಸಂಘಟನೆಯ ಧ್ವಜ ಮೆರವಣಿಗೆಗಳನ್ನು ನಡೆಸಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದಲ್ಲೂ ಎಚ್‌ಯುಟಿ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ಹಿಜುಬ್‌ ನಿಷೇಧಿಸಿರುವ ರಾಷ್ಟ್ರಗಳು
ಭಾರತ, ಬಾಂಗ್ಲಾದೇಶ, ಚೀನ, ರಷ್ಯಾ, ಪಾಕಿಸ್ಥಾನ, ಜರ್ಮನಿ, ಟರ್ಕಿ, ಯುಕೆ, ಕಜಕಿಸ್ಥಾನ ಮತ್ತು ಇಂಡೋನೇಷ್ಯಾ.
ಅರಬ್‌ ರಾಷ್ಟ್ರಗಳಲ್ಲಿ ಲೆಬನಾನ್‌, ಯೆಮನ್‌, ಯುಎಇ ಹೊರತುಪಡಿಸಿ ಇತರ ಎಲ್ಲ ದೇಶಗಳು ಹಿಜುಬ್‌ ನಿಷೇಧಿಸಿವೆ.

ಭಾರತದಲ್ಲಿ ಉಗ್ರವಾದ ಹೆಚ್ಚಳ ಸಾಧ್ಯತೆ
ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ದಿನೇ ದಿನೆ ಪ್ರಭಾವ ಬೆಳೆಸಿಕೊಳ್ಳುತ್ತಿ ರುವ ಎಚ್‌ಯುಟಿ ಭಾರತದ ಪಾಲಿಗೆ ಎಂದೆಂದಿಗೂ ಮಡಿಲಿನಲ್ಲಿಟ್ಟ ಕೆಂಡವೇ ಆಗಿದೆ. ಅಕ್ರಮ ಗಡಿ ನುಸುಳುವಿಕೆಗೆ ಕುಖ್ಯಾತವಾಗಿರುವ ಬಾಂಗ್ಲಾದೇಶಿಯರು ತಮ್ಮೊಡನೆ ಉಗ್ರವಾದವನ್ನು ಭಾರತಕ್ಕೆ ಹೊತ್ತು ತರಬಹುದು. ಅಲ್ಲದೇ ಈ ಸಂಘಟನೆಯು ಭಾರತದಲ್ಲಿರುವ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿದರೆ ಅಥವಾ ಭಾರತ ಪ್ರವೇಶಿಸಲು ಹೊಂಚು ಹಾಕುತ್ತಿರುವವರಿಗೆ ನೆರವಾದರೆ ಭಾರತಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಅಲ್ಲದೇ ಈ ಸಂಘಟನೆಯಿಂ ದಾಗಿ ದೇಶದಲ್ಲಿ ಭಯೋತ್ಪಾದನ ಚಟುವಟಿಕೆಗಳು ಹೆಚ್ಚಾಗಬಹುದು.

ಭಾರತಕ್ಕೆ ಸವಾಲಾಗಿರುವ ಬಾಂಗ್ಲಾ ಮೂಲದ ಇತರ ಉಗ್ರ ಸಂಘಟನೆಗಳು
ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಮ್‌ಬಿ) – ಭಾರತ 2019ರಲ್ಲಿ ನಿಷೇಧ ಹೇರಿದೆ.
ಅನ್ಸರ್‌ ಅಲ್‌ ಇಸ್ಲಾಮ್‌ – ಬಾಂಗ್ಲಾ ದೇಶ 2015ರಲ್ಲಿ ನಿಷೇಧ ಹೇರಿದೆ.
ಹರ್ಕತ್‌ ಉಲ್‌ ಜೆಹಾದ್‌ ಅಲ್‌ ಇಸ್ಲಾಮಿ ಬಾಂಗ್ಲಾದೇಶ್‌
ಜಾಗೃತ ಮುಸ್ಲಿಂ ಜನತಾ ಬಾಂಗ್ಲಾದೇಶ್‌ (ಜೆಎಮ್‌ಜೆಬಿ)
ಪರ್ಬಾ ಬಾಂಗ್ಲಾರ್‌ ಕಮ್ಯೂನಿಸ್ಟ್‌ ಪಾರ್ಟಿ ( ಪಿಬಿಸಿಪಿ)
ಇಸ್ಲಾಮಿ ಛಾತ್ರಾ ಶಿಬಿರ್‌ (ಐಸಿಎಸ್‌)
ಅನ್ಸರುಲ್ಲಾ ಬಾಂಗ್ಲಾ ಟೀಮ್‌ (ಎಬಿಟಿ)

ಹಿಜುಬ್‌ ಹಿನ್ನೆಲೆ
ಹಿಜುಬ್‌ ಉತ್‌ ತಾಹಿರ್‌ನ ಪ್ರಸಕ್ತ ನಾಯಕ: ಅತಾ ಅಬು ರಶಾ¤
ಹಿಜುಬ್‌ ಉತ್‌ ತಾಹಿರ್‌ನ ಸ್ಥಾಪಕ: ತಖೀ ಅಲ್‌-ದಿನ್‌ ಅಲ್‌ ನಭಾನಿ
ಸಂಘಟನೆಯ ಮುಖ್ಯ ಕಚೇರಿ ಲೆಬನಾನ್‌ನ ಬೈರೂತ್‌ನಲ್ಲಿದೆ.
ಸಂಘಟನೆಯು ಸ್ಥಾಪನೆಯಾದ ವರ್ಷ: 1953
50ಕ್ಕೂ ಅಧಿಕ ರಾಷ್ಟಗಳಲ್ಲಿ ಎಚ್‌ ಯುಟಿ ಕಾರ್ಯ ನಿರ್ವಹಿಸುತ್ತಿದೆ.

-ಅನುರಾಗ್‌ ಗೌಡ .ಬಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next