Advertisement
ಈ ತೆರನಾದ ವಾತಾವರಣ ಸಹಜವಾಗಿಯೇ ದಿಲ್ಲಿಯ ನಿವಾಸಿಗರನ್ನು ಆತಂಕಿತರನ್ನಾಗಿಸಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಎಲ್ಲ ಸಾಧ್ಯತೆಗಳಿವೆ.ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಇತ್ತೀಚಿನ ಸಮಸ್ಯೆಯೇನಲ್ಲವಾಗಿದ್ದು, ಜಾಗತಿಕ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ವಿಶ್ವದ ಬೃಹತ್ ನಗರಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯ ಸ್ಥಾನವನ್ನು ಕಾಯ್ದುಕೊಂಡು ಬಂದಿರುವುದು ರಾಜಧಾನಿಗೆ ಅಂಟಿರುವ ಬಲುದೊಡ್ಡ ಕಳಂಕ.
ವಾಯುಮಾಲಿನ್ಯ, ದಿಲ್ಲಿ ಮತ್ತು ಆಸುಪಾಸಿನ ಪ್ರದೇಶಗಳ ವಾರ್ಷಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ವಾಯುಮಾಲಿನ್ಯ ಮಿತಿಮೀರಿದಾಗ ಪಟಾಕಿ ನಿಷೇಧ, ತಮ್ಮ ಹೊಲಗಳಲ್ಲಿ ಕಳೆ ಸುಡದಂತೆ ಹರಿಯಾಣ, ಪಂಜಾಬ್ ರೈತರಿಗೆ ಮನವಿ, ಖಾಸಗಿ ವಾಹನಗಳ ಓಡಾಟಕ್ಕೆ ಕೆಲವು ನಿರ್ಬಂಧದಂತಹ ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ನಗರಾಡಳಿತ ಸಂಸ್ಥೆ ಮತ್ತು ಸರಕಾರ ಮೊರೆ ಹೋಗುತ್ತಲೇ ಬಂದಿವೆ ವಿನಾ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಮುಂದಾಗದಿರುವುದು ವಿಪರ್ಯಾಸವೇ ಸರಿ. ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುತೇಕ ನಗರಗಳಲ್ಲಿಯೂ ವಾಯುಮಾಲಿನ್ಯ ಹೆಚ್ಚುತ್ತಲೇ ಸಾಗಿದೆ. ಕೋಲ್ಕತಾ, ಮುಂಬಯಿ ಆಗಾಗ ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ವಾಯುಮಾಲಿನ್ಯವನ್ನು ನಿಯಂತ್ರಿಸಲು ನಗರಾ ಡಳಿತ ಸಂಸ್ಥೆಗಳು ಮತ್ತು ಸರಕಾರ ಒಂದಿಷ್ಟು ಕಠಿನ ಮತ್ತು ಪರಿಣಾಮಕಾರಿ ಕ್ರಮ ಗಳನ್ನು ಕೈಗೊಳ್ಳಬೇಕಿರುವುದು ಈಗಿನ ತುರ್ತು. ವರ್ಷಗಳುರುಳಿದಂತೆಯೇ ನಗರ ಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ಪ್ರತೀ ಮನೆಯಲ್ಲಿ ಕನಿಷ್ಠ 2-3 ವಾಹನಗಳಾದರೂ ಇವೆ. ಇವೆಲ್ಲವೂ ರಸ್ತೆಗಿಳಿದರೆ ನಗರದಲ್ಲಿನ ಸಂಚಾರ ವ್ಯವಸ್ಥೆ ಹೇಗಾಗಬೇಡ. ನಗರ ನಿವಾಸಿಗಳ ಈ ಚಾಳಿಗೆ ಕಡಿವಾಣ ಹಾಕಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸಬೇಕು.
Related Articles
ಇನ್ನು ನಗರ ವ್ಯಾಪ್ತಿಯಲ್ಲಿರುವ ಎಲ್ಲ ಕೈಗಾರಿಕೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ಸರಕಾರ ಅಗತ್ಯ ಯೋಜನೆ ರೂಪಿಸಬೇಕು. ಇದು ಸಾಧ್ಯವಾದಲ್ಲಿ ವಾಯುಮಾಲಿನ್ಯ ಸಮಸ್ಯೆ ಬಹುತೇಕ ನಿವಾರಣೆಗೊಳ್ಳಲು ಸಾಧ್ಯ. ನಗರದ ಹೊರವಲಯದಲ್ಲಿ ಕೈಗಾರಿಕೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟದ್ದೇ ಆದಲ್ಲಿ ಕೈಗಾರಿಕೋದ್ಯಮಿಗಳು ಕೂಡ ನಗರದ ಹೊರಗಡೆ ತಮ್ಮ ಉದ್ದಿಮೆಗಳನ್ನು ತೆರೆಯಲು ಆಸಕ್ತಿ ತೋರಿಯಾರು.
Advertisement
ಇವೆಲ್ಲವೂ ಒಂದಿಷ್ಟು ತ್ರಾಸದಾಯಕ ಮತ್ತು ವೆಚ್ಚದಾಯಕ ಪರಿಹಾರ ಕ್ರಮಗಳಾದರೂ ಇದರ ಪರಿಣಾಮವನ್ನು ಪರಿಗಣಿಸಿದರೆ ಇವೆಲ್ಲವೂ ತೃಣಮಾತ್ರ ಎಂದೆನಿಸದೇ ಇರಲಾರದು. ಆದರೆ ಎಲ್ಲದಕ್ಕೂ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಧೈರ್ಯ, ಛಾತಿಯನ್ನು ಸರಕಾರ ತೋರಬೇಕು. ಆಗ ಮಾತ್ರ ವಾಯುಮಾಲಿನ್ಯದಂತಹ ಸಮಸ್ಯೆಯಿಂದ ನಗರಗಳ ಜನತೆ ಮುಕ್ತಿ ಹೊಂದಲು ಸಾಧ್ಯ.