Advertisement

ಅಮೆರಿಕ-ಇರಾನ್‌ ಪತ್ರ ಸಮರ; ವಿಶ್ವಸಂಸ್ಥೆಯಲ್ಲಿ ತಮ್ಮ ನಿಲುವು ಸಮರ್ಥಿಸಿಕೊಂಡ ರಾಷ್ಟ್ರಗಳು

10:18 AM Jan 11, 2020 | Hari Prasad |

ಹೊಸದಿಲ್ಲಿ/ಟೆಹರಾನ್‌/ವಾಷಿಂಗ್ಟನ್‌: ಅಮೆರಿಕ – ಇರಾನ್‌ ನಡುವಿನ ಜಗಳ ಏಕಾಏಕಿ ತಣ್ಣಗಾದಂತೆ ಕಂಡು ಬರುತ್ತಿದೆ. ಇದೀಗ ಎರಡೂ ರಾಷ್ಟ್ರಗಳೂ ವಿಶ್ವಸಂಸ್ಥೆಗೆ ಪತ್ರ ಬರೆದು, ತಮ್ಮ ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡಿವೆ. ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಕೆಲ್ಲಿ ಕ್ರಾಫ್ಟ್ ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ಇರಾನ್‌ ಜತೆ ಮಾತುಕತೆಗೆ ಟ್ರಂಪ್‌ ಸರಕಾರ ಸಿದ್ಧಗೊಂಡಿತ್ತು’ ಎಂದಿದ್ದಾರೆ. ಆದರೆ ಇರಾನ್‌ ಸೇನೆಯ ಹಿರಿಯ ಕಮಾಂಡರ್‌ ಸುಲೈಮನಿಯನ್ನು ಹತ್ಯೆ ಮಾಡಿದ್ದು ಸರಿಯಾಗಿದೆ. ಮಧ್ಯಪ್ರಾ ಚ್ಯದಲ್ಲಿ ತನ್ನ ಸೈನಿಕರ ಮತ್ತು ಹಿತಾಸಕ್ತಿ ಕಾಪಾಡಿಕೊಳ್ಳಲು ಆತನನ್ನು ಸಂಹರಿಸಬೇಕಾಯಿತು ಎಂದು ಬರೆದಿದ್ದಾರೆ.

Advertisement

ಆದರೆ ವಿಶ್ವಸಂಸ್ಥೆಯಲ್ಲಿನ ಇರಾನ್‌ ರಾಯಭಾರಿ ಮಜೀದ್‌ ತಖ್ತ್ ರವಾಂಚಿ, ಮಾತುಕತೆಗೆ ಟ್ರಂಪ್‌ ಸರಕಾರ ಸಿದ್ಧಗೊಂಡಿತ್ತು ಎಂಬ ಅಂಶ ನಂಬಲು ಅನರ್ಹವಾಗಿದೆ ಎಂದಿದ್ದಾರೆ. ಏಕೆಂದರೆ ಅಮೆರಿಕ ಸರಕಾರ ತಮ್ಮ ದೇಶದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುತ್ತಲೇ ಬಂದಿದೆ ಎಂದು ಅವರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ವಾದಿಸಿದ್ದಾರೆ. ಇರಾಕ್‌ನಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಅಮೆರಿಕ ಮುಂದಿಟ್ಟ ಸ್ವಯಂ ರಕ್ಷಣೆಯ ವಾದವನ್ನೇ ಬಳಸಿ ಇರಾನ್‌ ತಿರುಗೇಟು ನೀಡಿದೆ.

ಸುಲೈಮನಿ ಹತ್ಯೆ ಬಳಿಕ ತನಗೆ ಪ್ರತಿ ದಾಳಿ ನಡೆಸುವುದು ಅನಿವಾರ್ಯವಾಯಿತು. ಆದರೆ ಟ್ರಂಪ್‌ ಆಡಳಿತದ ಜತೆಗೆ ಸಂಘರ್ಷ ಮಾಡಿಕೊಳ್ಳಲು ಬಯಸುವುದಿಲ್ಲ. ಆ ಉದ್ದೇಶಕ್ಕಾಗಿಯೇ ನಾಗರಿಕರಿಗೆ ಮತ್ತು ಅವರ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೇನಾ ನೆಲೆಗಳಿಗೆ ಗುರಿ ಇರಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಬುಧವಾರವಷ್ಟೇ ಹಿರಿಯ ಸೇನಾಧಿಕಾರಿ ಜ.ಖಾಸಿಮ್‌ ಸುಲೈಮನಿ ಹತ್ಯೆಗೆ ಪ್ರತೀಕಾರವಾಗಿ ಇರಾಕ್‌ನಲ್ಲಿನ ಅಮೆರಿಕದ ಸೇನಾ ನೆಲೆಗಳಲ್ಲಿ ರುವ ಖಾಲಿ ಪ್ರದೇಶಕ್ಕೆ 22 ಕ್ಷಿಪಣಿಗಳನ್ನು ಸಿಡಿಸಿ ಇರಾನ್‌ ‘ಎಚ್ಚರಿಕೆ’ ನೀಡಿತ್ತು. ಅದಕ್ಕೆ ಪ್ರತಿಯಾಗಿ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ವಿರುದ್ಧ ಕಠಿಣಾತಿ ಕಠಿನ ಆರ್ಥಿಕ ದಿಗ್ಬಂಧನೆಯ ಕ್ರಮಗಳನ್ನು ಪ್ರಕಟಿಸಿದ್ದರು.

ಆದರೆ, ಇರಾನ್‌ ವಿರುದ್ಧ ಸೇನಾ ಕ್ರಮದ ಬಗ್ಗೆ ಯಾವುದೇ ಮಾತುಗಳನ್ನು ಪ್ರಸ್ತಾವ ಮಾಡಿರಲಿಲ್ಲ. ಅಲ್ಲದೆ, ಇರಾನ್‌ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತದೆ. ಅದು ವಿಶ್ವಕ್ಕೇ ಸಮಾಧಾನ ತರುತ್ತದೆ ಎಂಬ ಮಾತುಗಳನ್ನೂ ಅವರು ಆಡಿದ್ದರು.

Advertisement

ಅತೃಪ್ತಿ: ಸೋಲೆಮನಿಯನ್ನು ಕೊಂದಿರುವ ಅಮೆರಿಕದ ಕ್ರಮದ ಬಗ್ಗೆ ಡೆಮಾಕ್ರಾಟ್‌, ರಿಪಬ್ಲಿಕನ್‌ ಸಂಸದರು ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ರಿಪಬ್ಲಿಕನ್‌ ಸಂಸದ ಮೈಕ್‌ ಲೀ 9 ವರ್ಷ ಗಳ ಅವಧಿಯಲ್ಲಿ ಮಿಲಿಟರಿ ವಿಚಾರಗಳ ಬಗ್ಗೆ ಅತ್ಯಂತ ಕೆಟ್ಟ ನಿರ್ಧಾರ ಇದಾಗಿದೆ.

ಇರಾನ್‌ ವಿಚಾರವಾಗಿ ಟ್ರಂಪ್‌ ಕೈಗೊಳ್ಳುವ ನಿರ್ಧಾರಕ್ಕೆ ತಡೆಯೊಡ್ಡಬೇಕು ಎಂದಿದ್ದಾರೆ.
ರಾಕೆಟ್‌ ದಾಳಿ: ಬಾಗ್ಧಾದ್‌ನ ಹಸಿರು ವಲಯದ ಮೇಲೆ ಇರಾನ್‌ ಎರಡು ರಾಕೆಟ್‌ಗಳನ್ನು ಉಡಾಯಿಸಿದ್ದು, ಇದು ಅಲ್ಪ ತೀವ್ರತೆಯದ್ದಾಗಿದ್ದ ಕಾರಣ ಯಾವುದೇ ಹಾನಿ ಉಂಟಾಗಲಿಲ್ಲ.

ಟ್ರಂಪ್‌ ಪ್ರಸ್ತಾವಕ್ಕೆ ತಿರಸ್ಕಾರ: ಇರಾನ್‌ ಜತೆಗೆ ಸದ್ಯ ಮಾಡಿಕೊಂಡಿರುವ ಪರಮಾಣು ಒಪ್ಪಂದ ತಿರಸ್ಕರಿಸಿ, ಹೊಸತು ಮಾಡುವ ಟ್ರಂಪ್‌ ಪ್ರಸ್ತಾಪವನ್ನು ಚೀನ ಒಪ್ಪಿಕೊಂಡಿಲ್ಲ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾಗಿರುವ ಅಮೆರಿಕ, ಯು.ಕೆ., ರಷ್ಯಾ, ಫ್ರಾನ್ಸ್‌, ಚೀನ ಮತ್ತು ಜರ್ಮನಿ ಹಲವು ವರ್ಷಗಳ ಕಾಲ ಶ್ರಮ ವಹಿಸಿ ಅದನ್ನು ರೂಪಿಸಿವೆ ಎಂದು ಪ್ರತಿಕ್ರಿಯೆ ನೀಡಿದೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಇದೆ ಎಂದಿದೆ.

ರೇಡಿಯೋ ಕಾಲ್‌ ಮಾಡಿರಲಿಲ್ಲ: ಇರಾನ್‌ ಅಮೆರಿಕ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಸಿಡಿಸಿದ ಕ್ಷಿಪಣಿಗಳೇ ಉಕ್ರೇನ್‌ ವಿಮಾನ ಪತನಕ್ಕೆ ಕಾರಣ ಎಂಬ ಶಂಕೆಗಳ ನಡುವೆಯೇ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೈಲಟ್‌ ವಾಪಸ್‌ ಏರ್‌ಪೋರ್ಟ್‌ಗೆ ಹಿಂತಿರುಗಿಸುತ್ತಿದ್ದಾಗ ಅದು ಪತನವಾಗಿದೆ.

ಈ ಸಂದರ್ಭದಲ್ಲಿ ವಿಮಾನದಲ್ಲಿ ರೇಡಿಯೋ ಕಾಲ್‌ ಮಾಡಲಾಗಿರಲಿಲ್ಲ ಎಂದು ಉಕ್ರೇನ್‌ ಸರಕಾರದ ತನಿಖಾ ವರದಿ ಹೇಳಿದೆ. ಟೇಕಾಫ್ ಆಗುವ ಸಂದರ್ಭದಲ್ಲಿಯೇ ಅದರಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತು ಎಂದು ಕಂಡುಕೊಳ್ಳಲಾಗಿದೆ.

ಬಿಕ್ಕಟ್ಟು ತಗ್ಗಲಿ ಎನ್ನುವುದೇ ಆಶಯ: ಅಮೆರಿಕ ಮತ್ತು ಇರಾನ್‌ ನಡುವಿನ ಉದ್ವಿಗ್ನ ಸ್ಥಿತಿ ತಗ್ಗಬೇಕು ಎನ್ನುವುದೇ ಭಾರತದ ಆಶಯವಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ. ಕೊಲ್ಲಿ ಪ್ರದೇಶದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಗಮನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚಿನ್ನ, ಬೆಳ್ಳಿ, ಕಚ್ಚಾ ತೈಲ ದರ ಇಳಿಮುಖ
ಹೊಸದಿಲ್ಲಿ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 766 ರೂ., ಪ್ರತಿ ಕೆಜಿ ಬೆಳ್ಳಿಗೆ 1,148 ರೂ. ಇಳಿಕೆಯಾಗಿದೆ. ಇದರಿಂದಾಗಿ ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 40,634 ರೂ. ಆಗಿದೆ. ಬುಧವಾರ 41,400 ರೂ. ಇತ್ತು. ಪ್ರತಿ ಕೆಜಿ ಬೆಳ್ಳಿಗೆ 49, 080 ರೂ.ಗಳಿಂದ 47, 932 ರೂ.ಗೆ ತಗ್ಗಿದೆ.

ಇದೇ ವೇಳೆ, ನ್ಯೂಯಾರ್ಕ್‌ ಮರ್ಕೆಂಟೈಲ್‌ ಎಕ್ಸ್‌ ಚೇಂಜ್‌ನಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 60.05 ಡಾಲರ್‌ಗೆ ಏರಿಕೆಯಾಗಿ 59.61 ಡಾಲರ್‌ಗೆ ಇಳಿಕೆಯಾಗಿದೆ. ಲಂಡನ್‌ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಬ್ಯಾರೆಲ್‌ಗೆ 65.96 ಡಾಲರ್‌ಗೆ ಏರಿಕೆಯಾಗಿ 65.44 ಡಾಲರ್‌ಗೆ ತಗ್ಗಿದೆ.

ಜಿಗಿದ ಬಿಎಸ್‌ಇ ಸೂಚ್ಯಂಕ
ಅಮೆರಿಕ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ತಣ್ಣಗಾಗುವ ಲಕ್ಷಣಗಳು ಗೋಚರವಾಗುತ್ತಲೇ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಸೂಚ್ಯಂಕ 635, ನಿಫ್ಟಿ 190 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿದೆ. ದಿನದ ಅಂತ್ಯಕ್ಕೆ ಸೂಚ್ಯಂಕ 41,452.35ರಲ್ಲಿ ಮುಕ್ತಾಯವಾಗಿದೆ. ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಎಂಆ್ಯಂಡ್‌ಎಂ, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ ಸುಜುಕಿ, ಏಷ್ಯನ್‌ ಪೇಂಟ್ಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರಮುಖವಾಗಿ ಲಾಭ ಪಡೆದುಕೊಂಡಿವೆ.

ಜತೆಗೆ ಚೀನದ ಉಪ ಪ್ರಧಾನಿ ಲ್ಯು ಹಿ ಮುಂದಿನ ವಾರ ಸುಂಕ ವಿಚಾರವಾಗಿ ವಾಷಿಂಗ್ಟನ್‌ಗೆ ಮಾತುಕತೆ ನಡೆಸಲು ಭೇಟಿ ನೀಡಲಿರುವುದು ಕೂಡ ಷೇರು ಸೂಚ್ಯಂಕ ನೆಗೆಯಲು ಕಾರಣವಾಗಿದೆ. ಲಂಡನ್‌ ಎಫ್ಟಿಎಸ್‌ಇ, ಟೋಕಿಯೋ, ಹಾಂಕಾಂಗ್‌, ಶಾಂಘೈ, ಸಿಯೋಲ್‌, ತೈವಾನ್‌ ಮತ್ತು ಆಗ್ನೇಯ ಏಷ್ಯಾದ ಷೇರು ಮಾರು ಕಟ್ಟೆಗಳಲ್ಲಿ ವಹಿವಾಟು ತೃಪ್ತಿಕರವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next