Advertisement

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಭಾರತ : ಒಂದು ಅವಲೋಕನ

05:22 PM Aug 14, 2020 | Hari Prasad |

ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳಲ್ಲಿ ಭದ್ರತಾ ಮಂಡಳಿ ಬಹಳ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಅಂಗಸಂಸ್ಥೆಯಾಗಿದೆ.

Advertisement

ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15 (ಖಾಯಂ 5 ರಾಷ್ಟ್ರಗಳು + ಖಾಯಂ ಅಲ್ಲದ 10 ರಾಷ್ಟ್ರಗಳು) ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಳಾಗಿವೆ.

ಖಾಯಂ ಅಲ್ಲದ 10 ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆ 02 ವರ್ಷಗಳ ಕಾಲವಧಿಗೆ ಚುನಾಯಿಸುತ್ತದೆ.2021 ಜನವರಿ 1ರಿಂದ 2022 ಡಿಸೆಂಬರ್ 31ರವರೆಗಿನ ಎರಡು ವರ್ಷಗಳ ಅವಧಿಗೆ ಏಷ್ಯಾ ಫೆಸಿಪಿಕ್ ಪ್ರದೇಶದಿಂದ ಭಾರತವು ವಿಶ್ವಸಂಸ್ಥೆಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುತ್ತದೆ.

1950-51ರಲ್ಲಿ ಭಾರತವು ಭದ್ರತಾ ಮಂಡಳಿಯ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಮೊದಲ ಬಾರಿಗೆ ಪಡೆದುಕೊಂಡಿತ್ತು. 2021-22 ನೇ ಅವಧಿಯು ಸೇರಿದರೆ ಭಾರತವು ಒಟ್ಟು 08 ಬಾರಿ ಈ ತಾತ್ಕಾಲಿಕ ಅವಧಿಯ ಸದಸ್ಯತ್ವವನ್ನು ಹೊಂದಿದ ಹಾಗೆ ಆಗುತ್ತದೆ.

ಅಂತರಾಷ್ಟ್ರೀಯ ಶಾಂತಿ ಸುಭದ್ರತೆಯ ಅಡಿಪಾಯಗಳು ಅಲುಗಾಡುತ್ತಿರುವ ಪ್ರಸ್ತುತ ಸನ್ನಿವೇಷದಲ್ಲಿ ಭಾರತದ ಈ ಸದಸ್ಯತ್ವ ಜಾಗತಿಕವಾಗಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಗಮನಿಸಬೇಕಾಗಿರುವ ಪ್ರಮುಖವಾದ ಅಂಶವೆಂದರೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಭಾರತದ ಈ ಉಮೇದುವಾರಿಕೆಯನ್ನು ಬೆಂಬಲಿಸಿರುವುದರ ಹಿಂದೆ ತಂತ್ರವಿರುವುದು ಸ್ಪಷ್ಟ.

Advertisement

ವೀಟೋ ಅಧಿಕಾರ ಚಲಾಯಿಸುವಲ್ಲಿ ಲೋಪ, ಜಾಗತಿಕ ಆಡಳಿತಾತ್ಮಕ ನಿರ್ಧಾರಗಳಲ್ಲಿ ಎಡವಿರುವುದು, ನೀತಿ-ನಿಯಮ ರೂಪಿಸುವಲ್ಲಿ ಆಪಾರದರ್ಶಕತೆ ಹಾಗೂ ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವುದು ಹೀಗೆ ಹಲವಾರು ದೋಷಾರೋಪಣೆಗಳು ಭದ್ರತಾ ಮಂಡಳಿಯ ಮೇಲಿದೆ.

ಸ್ಥಾಪನೆಯಾಗಿ 70 ವರ್ಷ ಕಳೆದರೂ ಭದ್ರತಾ ಮಂಡಳಿ ಇಂತಹ ಲೋಪಗಳಿಂದ ಮುಕ್ತವಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಭಾರತದ ರಚನಾತ್ಮಕ ಸಲಹೆಗಳು ಮತ್ತು ಜಾಗತಿಕ ತಿಳುವಳಿಕೆಯ ಉತ್ಕ್ರಷ್ಟತೆ ಭದ್ರತಾ ಮಂಡಳಿಗೆ ಅತ್ಯವಶ್ಯವಾಗಿದೆ .ಭಾರತದ ಈ ಸಾಮರ್ಥ್ಯವನ್ನು ಅರ್ಥೈಸುವ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸ ಅವಶ್ಯವಾಗಿ ಜರುಗಬೇಕಾಗಿದೆ.

ಜಾಗತಿಕ ಭಯೋತ್ಪದನೆ, ಶಾಂತಿ ಪಾಲನ ಪಡೆಯ ಕಾರ್ಯನಿರ್ವಹಣೆ, ರಾಷ್ಟ್ರಗಳ ನಡುವೆ ಉಲ್ಬಣಿಸಿರುವ ಬಿಕ್ಕಟ್ಟು, ಯುದ್ದ ದಾಹದ ಹಪಾಹಪಿ ಹೀಗೆ ಹಲವಾರು ಸಮಸ್ಯೆಗಳು ವಿಶ್ವಸಂಸ್ಥೆಯ ಒಂದೊಂದೆ ಮೆಟ್ಟಿಲುಗಳನ್ನು ತುಳಿಯುತ್ತಿವೆ. ಸಮಸ್ಯೆಗಳನ್ನು ಬೃಹದಾಕರಿಸದೆ, ಸುಧಾರಿಸುವ, ಉಪಶಮನ ಮಾಡುವ ಲೋಕೌಷಧಿ ಭಾರತದ ಬಳಿಯಿದೆ.

ಆದರೆ ಭಾರತದ ಈ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಸಹಿಸಲಾಗದ ಕೆಲವು ಜಾಗತಿಕ ಶಕ್ತಿಗಳು ಭಾರತಕ್ಕೆ ನಾಯಕತ್ವ ವಹಿಸುವುದನ್ನು ಬಹು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿವೆ. ಆದ್ದರಿಂದಲೇ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ಸ್ಥಾನ ಭಾರತದ ಕೈ ತಪ್ಪುತ್ತಿರುವುದು.

ಅತ್ಯಂತ ಸುಸ್ಪಷ್ಟವಾಗಿ ಹೇಳಬೇಕೆಂದರೆ ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ಯ ಖಾಯಂ ಸದಸ್ಯತ್ವದ ಸ್ಥಾನವನ್ನು ಭಾರತ ಅಲಂಕರಿಸುವ ಕಾಲ ಸನಿಹವಾಗಿದೆ ಹಾಗೆಯೇ ಭಾರತದ ವಿರೋಧಿ ಶಕ್ತಿಗಳು ತೊಡುಕುಗಳ ಕುಂಟು ನೆಪವನ್ನು ಸೃಷ್ಟಿಸುತ್ತಿವೆ’.

ಸಿ.ಟಿ.ಬಿ.ಟಿ ಒಪ್ಪಂದಕ್ಕೆ ಸಹಿ ಮಾಡದಿರುವುದು, ಜಿ-4 ರಾಷ್ಟ್ರಗಳ ಪೈಪೋಟಿ, ಕೆಲವು ಮಿಲಿಟರಿ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳಿಗೆ ಅನ್ಯ ದೇಶದ ಮೇಲೆ ಅವಲಂಬನೆ, ವೀಟೋ ಪವರ್ ಹೊಂದಿರುವ ಚೀನಾದ ಅಡೆತಡೆ, ಇವು ವಿರೋಧಿಗಳು ಸೃಷ್ಟಿಸಿರುವಂತೆ ಭದ್ರತಾ ಮಂಡಳಿಯಲ್ಲಿ ಭಾರತ ಖಾಯಂ ಸದಸ್ಯತ್ವ ಹೊಂದಲು ಇರುವ ತೊಡಕುಗಳ ಕುಂಟು ನೆಪಗಳು.

ಸದಾ ವಿಶ್ವಶಾಂತಿಗೆ ಹಾತೋರೆಯುವ ಭಾರತಕ್ಕೆ ಈ ಖಾಯಂ ಸ್ಥಾನಮಾನ ಬಹಳ ಹಿಂದೆಯೇ ಸಿಗಬೇಕಾಗಿತ್ತು, ಸುಮಾರು 70 ವರ್ಷಗಳ ಹಿಂದೆಯೇ ಆಲಿಪ್ತ ನೀತಿಯ ಮೂಲಕ ವಿಶ್ವ ಶಾಂತಿಯ ಮಂತ್ರವನ್ನು ಜಪಿಸಿದವರು ನಾವು, ಉದಾರವಾದಿಗಳಾಗಿ ಮತ್ತು ತ್ಯಾಗಿಗಳಾಗಿ ವಿಸ್ತರಣವಾದಿಗಳಿಗೆ ಮತ್ತು ಆಕ್ರಮಣವಾದಿಗಳಿಗೆ ಈ ಸ್ಥಾನಮಾನ ಅಲಂಕರಿಸಲು ಬೆಂಬಲಿಸಿದೆವು ಆದರೆ ಇದೇ ವಿಸ್ತರಣವಾದಿಗಳು ಮತ್ತು ಆಕ್ರಮಣವಾದಿಗಳು ಜಪಿಸುತ್ತಿರುವ ಮಂತ್ರದ ಮಹಿಮೆಯಿಂದ ಭಾರತಕ್ಕೆ ಈ ಖಾಯಂ ಸದಸ್ಯತ್ವದ ಅವಕಾಶ ನಿರಂತರ ತಪ್ಪುತ್ತಲೇ ಬರುತ್ತಿದೆ.

ಪ್ರಸ್ತುತ ಸನ್ನಿವೇಷದಲ್ಲಿ ಇದೇ ವಿಸ್ತರಣವಾದಿಗಳ ಮತ್ತು ಆಕ್ರಮಣವಾದಿಗಳ ಕುತಂತ್ರ ಜಗತ್ತಿಗೆ ಬಯಲಾಗಿರುವ ಈ ಸಂದರ್ಭದಲ್ಲಿ ಜಾಗತಿಕವಾಗಿ ಈ ಭದ್ರತಾ ಮಂಡಳಿಯ ಖಾಯಂ ಸ್ಥಾನಮಾನ ಭಾರತಕ್ಕೆ ನೀಡಬೇಕೆಂಬ ಕೂಗೂ ಗಟ್ಟಿಗೊಳ್ಳುತ್ತಿದೆ.

ಹಲವಾರು ಜಾಗತಿಕ ಆಯಾಮಗಳು ಭಾರತವನ್ನು ಬೆಂಬಲಿಸುತ್ತಿರುವ ಇಂತಹ ಸುಸಂದರ್ಭವನ್ನು ಭಾರತವು ಸೂಕ್ತವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳಲಿದೆ ಎನ್ನುವುದು ಭಾರತವನ್ನು ಪ್ರೀತಿಸುವ ಆರಾಧಿಸುವ ಜನಗಳ ಮುಗ್ದ ಆಸೆ.


– ರಘುನಂದನ್ ಸೌಪರ್ಣಿಕ

Advertisement

Udayavani is now on Telegram. Click here to join our channel and stay updated with the latest news.

Next