Advertisement

ಮೆಮೋರಿ ಚಾಂಪಿಯನ್‌ಶಿಪ್‌ನಲ್ಲಿ ಅನನ್ಯ ಸಾಧನೆ

11:34 AM Dec 28, 2018 | Team Udayavani |

ಬೆಂಗಳೂರು: ಒಬ್ಬ ವ್ಯಕ್ತಿ ಎಷ್ಟು ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬಹುದು? ಹತ್ತು, ಅಬ್ಬಬ್ಟಾ ಎಂದರೆ ಇಪ್ಪತ್ತು. ಆದರೆ, ಈ ಬಾಲಕಿ ಏಕಕಾಲದಲ್ಲಿ ಐದು ಸಾವಿರ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾಳೆ. ಇತಿಹಾಸದ ಘಟನಾವಳಿಗಳನ್ನು ಅರಳು ಹುರಿದಂತೆ ಇಸವಿ ಸಹಿತ ಚಟಪಟನೆ ಹೇಳುತ್ತಾಳೆ!

Advertisement

ಹೌದು, ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿ ಅನನ್ಯಾ ಸ್ಮರಣ ಶಕ್ತಿ ಕಂಪ್ಯೂಟರಿನಂತೆ ಕೆಲಸ ಮಾಡುತ್ತದೆ. ಏಕಕಾಲದಲ್ಲಿ ಸಾವಿರಾರು ಸಂಖ್ಯೆಗಳು ಮತ್ತು ಪದಗಳನ್ನು ನೆನಪಿಟ್ಟುಕೊಂಡು ಯಥಾವತ್ತಾಗಿ ಮಂಡಿಸುತ್ತಾಳೆ. ಈ ಸಾಮರ್ಥ್ಯದಿಂದ ಚೀನಾದ ಹಾಂಗ್‌ಕಾಂಗ್‌ನಲ್ಲಿ ಈಚೆಗೆ ನಡೆದ “27ನೇ ವರ್ಲ್ಡ್ ಮೆಮೋರಿ ಚಾಂಪಿಯನ್‌ಶಿಪ್‌’ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾಳೆ.

18 ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಚಾಂಪಿಯನ್‌ಶಿಪ್‌ನ ಜೂನಿಯರ್‌ ವಿಭಾಗದಲ್ಲಿ ಅನನ್ಯಾ 23ನೇ ರ್‍ಯಾಂಕ್‌ ಗಳಿಸಿದ್ದಾಳೆ. ಸ್ಪರ್ಧೆಯಲ್ಲಿದ್ದ ಹತ್ತು ರೌಂಡ್‌ಗಳ ಪೈಕಿ ಮೂರು ಸುತ್ತುಗಳಲ್ಲಿ 8ನೇ ತರಗತಿಯ ಅನನ್ಯಾ ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾಳೆ. ಇನ್ನು ಭಾರತದಿಂದ ಭಾಗವಹಿಸಿದ್ದ ಸ್ಪರ್ಧಾಳುಗಳಲ್ಲಿ ಮೂರನೇ ಅತಿ ಹೆಚ್ಚು (3,783) ಪಾಯಿಂಟ್‌ ಗಳಿಸಿದ್ದಾಳೆ.

ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನಿಂದ ಇಬ್ಬರು ಹಾಗೂ ಕಾರ್ಮೆಲ್‌ನಿಂದ ಒಬ್ಬರು ಸೇರಿದಂತೆ ಕರ್ನಾಟಕದಿಂದ ಮೂವರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸೌಮ್ಯನಾಥ ಸ್ವಾಮೀಜಿ, ಶಾಲೆಯ ಇಬ್ಬರೂ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 

15 ನಿಮಿಷಗಳಲ್ಲಿ 200 ಪದ!: ನಂತರ ಸುದ್ದಿಗಾರರೊಂದಿಗೆ ತನ್ನ ಅನುಭವ ಹಂಚಿಕೊಂಡ ಅನನ್ಯಾ, “ಸ್ಮರಣ ಶಕ್ತಿ ವೃದ್ಧಿಗೆ ವಿಶೇಷ ತರಬೇತಿ ಪಡೆದಿದ್ದು, 15 ನಿಮಿಷಗಳಲ್ಲಿ 200 ಪದಗಳನ್ನು ನಾನು ಅನಾಯಾಸವಾಗಿ ಹೇಳುತ್ತೇನೆ. ಇದರಿಂದ ನನ್ನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲ ಆಗಲಿದೆ. ಸಮಾಜ ವಿಜ್ಞಾನ, ಗಣಿತ ಮತ್ತಿತರ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಇದರಿಂದ ಸಾಧ್ಯವಾಗಲಿದೆ.

Advertisement

ಸ್ಪರ್ಧೆಯಲ್ಲಿನ ಸಾಧನೆ ಖುಷಿ ಕೊಡುವುದರ ಜತೆಗೆ ಅದ್ಭುತ ಅನುಭವ ನೀಡಿದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನ ಮತ್ತೂಬ್ಬ ವಿದ್ಯಾರ್ಥಿ ಚಿನ್ಮಯ ಮಾತನಾಡಿ, “ಸಾಧನೆ ತೃಪ್ತಿ ತಂದಿದೆ. ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿ ನಾನು ಭಾಗವಹಿಸಿದ್ದೆ. ಮುಂದಿನ ಸ್ಪರ್ಧೆಯಲ್ಲಿ ನಾನು ಪದಕ ತೆಗೆದುಕೊಂಡೇ ಬರುತ್ತೇನೆ’ ಎಂದು ಹೇಳಿದರು. 

ಎಲ್ಲ ಶಾಲೆಗಳಲ್ಲಿ ಅಳವಡಿಸಿ: “ಮೆಮೋರಿ ಗುರು’ ಡಾ.ಫ್ರ್ಯಾನ್ಸಿಸ್‌ ಕೆವಿಯರ್ ಮಾತನಾಡಿ, ಪ್ರತಿ ಮಗುವಿನಲ್ಲೂ ಅಗಾಧ ಸ್ಮರಣೆ ಶಕ್ತಿ ಇರುತ್ತದೆ. ಅದಕ್ಕೆ ಪೂರಕ ತರಬೇತಿ ಮತ್ತು ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಇಂದು ಹೆಚ್ಚು ಅಂಕ ಗಳಿಕೆಗೆ ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ, ಸ್ಮರಣ ಶಕ್ತಿ ವೃದ್ಧಿಗೆ “ಕ್ರಿಯೇಟಿವ್‌ ವಿಜ್ಯುಲೈಸೇಷನ್‌’ನಂತಹ ಹಲವಾರು ತಂತ್ರಗಳು ಲಭ್ಯ ಇವೆ.

ಅವುಗಳನ್ನು ಶಾಲಾ-ಕಾಲೇಜುಗಳು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಮಾಡಿಕೊಂಡು ಬರುತ್ತಿದೆ. ಅದರ ಫ‌ಲವೇ ಅನನ್ಯಾ ಮತ್ತು ಚಿನ್ಮಯ.

ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ವಿಂಗ್‌ ಕಮಾಂಡರ್‌ ರಂಜಿತ್‌ ಕುಮಾರ್‌ ಮಂಡಲ್‌, ವರ್ಲ್ಡ್ ಮೆಮೊರಿ ಕೌನ್ಸಿಲ್‌ ಆಫ್ ಇಂಡಿಯಾ ಅಧ್ಯಕ್ಷ ಜಯಸಿಂಹ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next