Advertisement
ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಬಿಜೆಪಿಯ ಹಿರಿಯ ನಾಯಕರ ದಿಢೀರ್ ಅಗಲಿಕೆಯಿಂದ ರಾಜ್ಯ ರಾಜಕಾರಣದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗಿದೆ. ಅನಂತಕುಮಾರ್ ಅವರ ಅಕಾಲಿಕ ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರು, ಎಲ್ಲ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ.
Related Articles
Advertisement
ಅನಂತ ಕುಮಾರ್ ಅವರಿಗೆ ಜನವರಿ ಅಥವ ಫೆಬ್ರುವರಿಯಲ್ಲಿ ಅವರಿಗೆ ಕಾನ್ಸರ್ ಬಂದಿರಬಹುದು. ಆದರೆ ಜೂನ್ ಹೊತ್ತಿಗೆ ಪತ್ತೆಯಾಯಿತು. ಆ ಹೊತ್ತಿಗಾಗಲೇ ಕ್ಯಾನ್ಸರ್ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಕ್ಯಾನ್ಸರ್ ಪತ್ತೆಯಾದ ಬಳಿಕ ಅಮೆರಿಕದಲ್ಲಿ ಸುಧಾರಿತ ಸಂಶೋಧನಾ ಚಿಕಿತ್ಸೆ ಪಡೆದರಾದರೂ, ಅದು ಅವರ ದೇಹಸ್ಥಿತಿಗೆ ಒಗ್ಗಲಿಲ್ಲ. ಹಾಗಾಗಿ ನಂತರ ಬೆಂಗಳೂರಿಗೆ ಹಿಂತಿರುಗಿದ್ದರು. ಇಲ್ಲೂ ಚಿಕಿತ್ಸೆ ನೀಡಲಾಯಿತು. ಆದರೆ, ಫಲಕಾರಿಯಾಗಲಿಲ್ಲ ಎಂದು ಅನಂತ್ ಕುಮಾರ್ ಅವರ ದೀರ್ಘಕಾಲದ ಆಪ್ತ ಸ್ನೇಹಿತರಾದ ಶಂಕರ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಬಿ.ಎಸ್.ಶ್ರೀನಾಥ್ ಹೇಳುತ್ತಾರೆ.
ನಸುಕಿನಲ್ಲಿ ಕೊನೆಯುಸಿರು:ಸೋಮವಾರ ನಸುಕಿನ 1.45ರ ಹೊತ್ತಿಗೆ ಅನಂತಕುಮಾರ್ ವಿಧಿವಶರಾದರು. ಬಳಿಕ ಪಾರ್ಥಿವ ಶರೀರವನ್ನು ನಸುಕಿನ 4 ಗಂಟೆ ಹೊತ್ತಿಗೆ ಲಾಲ್‌ಬಾಗ್ ಪಶ್ವಿಮ ದ್ವಾರ ಬಳಿಯ ಅವರ ನಿವಾಸಕ್ಕೆ ರವಾನಿಸಲಾಯಿತು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮುಂಜಾನೆಯಿಂದಲೇ ಸಾಗರದೋಪಾದಿಯಲ್ಲಿ ಆಪ್ತರು, ನಾನಾ ಪಕ್ಷಗಳ ನಾಯಕರು, ಮುಖಂಡರು, ಬೆಂಬಲಿಗರು, ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಹೋರಾಟಗಾರರು, ಚಳವಳಿಗಾರರು, ಚಿತ್ರರಂಗ, ಕಿರುತೆರೆ ಕಲಾವಿದರು, ಸಂಘ ಸಂಸ್ಥೆಗಳು, ಉದ್ಯಮ ವಲಯದವರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಅಂತಿಮ ನಮನ
ಸೋಮವಾರ ಇಡೀ ದಿನ
ಸೋಮವಾರ ನಸುಕು 5 ಗಂಟೆಯಿಂದಲೇ ಅನಂತ್ ನಿವಾಸ “ಸುಮೇರು’ ವಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡ ಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಾದಿಯಾಗಿ ಗಣ್ಯರು ಅಂತಿನ ನಮನ ಸಲ್ಲಿಸಿದರು. ನ.13, ಮಂಗಳವಾರ
ಬೆ. 8ರಿಂದ: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನ
ಬೆ. 10ರಿಂದ :ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ
ಮಧ್ಯಾಹ್ನ 1: ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಇಂದು ಅಡ್ವಾಣಿ, ಶಾ ಆಗಮನ
ಅನಂತ್ ಗುರು ಎಲ್ ಕೆ ಅಡ್ವಾಣಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಕಾಶ್ ಜಾಬ್ಡೇಕರ್, ಪಿಯೂಷ್ ಗೋಯಲ್, ಡಾ.ಹರ್ಷವರ್ಧನ್ ಮತ್ತಿತರರು ಮಂಗಳವಾರ ಅಂತಿಮ ದರ್ಶನ ಪಡೆಯಲಿದ್ದಾರೆ. ನಮ್ಮಿಬ್ಬರದ್ದು ಹೊಂದಾಣಿಕೆಯ ಹೆಜ್ಜೆ
ನಾನು ಮತ್ತು ಅನಂತಕುಮಾರ್ ಎಂದೂ ಸ್ಪರ್ಧಿಗಳಾಗಿರಲಿಲ್ಲ. ಜೀವನದ ಎಲ್ಲ ಹೋರಾಟಗಳಲ್ಲೂ ಹೊಂದಾಣಿಕೆಯಿಂದಲೇ ನಡೆದುಕೊಂಡು ಬಂದಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಮೂಲ ಕಾರಣೀಕರ್ತರಲ್ಲಿ ಅನಂತಕುಮಾರ್ ಕೂಡ ಒಬ್ಬರು. ಅವರೇ ಖುದ್ದಾಗಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಈ ವಿಚಾರವನ್ನು ಚರ್ಚಿಸಿ, ಅವರ ಮನವೊಲಿಸಿದ್ದರು ಎಂದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ಅವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೇಂದ್ರ ಸಚಿವರಾಗಿ ತಮಗೆ ವಹಿಸಿದ ಎಲ್ಲ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೇಷ್ಠ ನಾಯಕ. ನಾನು ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿದ್ದರಿಂದ ನಮ್ಮಿಬ್ಬರ ನಡುವೆ ಯಾವುದೇ ಸ್ಪರ್ಧೆ ಇರಲೇ ಇಲ್ಲ. ಬಿಜೆಪಿಯನ್ನು ಸಂಘಟಿಸಲು ನಾವಿಬ್ಬರು ಜಂಟಿಯಾಗಿ ಅದೆಷ್ಟೋ ಪ್ರವಾಸ, ಹೋರಾಟ ಮಾಡಿದ್ದೇವೆ. ಒಂದೇ ಒಂದು ದಿನವೂ ವಿಶ್ರಾಂತಿ ಬೇಕು ಎನಿಸಿರಲಿಲ್ಲ. ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಖಾತೆಯನ್ನು ಅವರೇ ಒತ್ತಾಯದಿಂದ ನೀಡಿ, ಸದಾ ಅಗತ್ಯ ಸಲಹೆ ನೀಡುತ್ತಾ ಅತ್ಯುತ್ತಮ ಬಜೆಟ್ ಮಂಡಿಸಲು ಸಾಧ್ಯವಾಗಿತ್ತು. ಅನಂತಕುಮಾರ್ ಅವರ ದಿಢೀರ್ ನಿಧನ ಪಕ್ಷ ಹಾಗೂ ರಾಷ್ಟ್ರ ರಾಜಕಾರಣಕ್ಕೆ ತುಂಬಲಾದ ನಷ್ಟ ಎಂದರು. ಕೇಂದ್ರ ಸಚಿವ ಹಾಗೂ ಅನುಭವಿ ಸಂಸದ ಅನಂತಕುಮಾರ್ ಅವರು ದೈವಾಧೀನರಾದ ಸುದ್ದಿ ತಿಳಿದು ದುಃಖವಾಗಿದೆ. ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಜನತೆಗೆ ತುಂಬಲಾರದ ನಷ್ಟ.
– ರಾಮನಾಥ ಕೋವಿಂದ್, ರಾಷ್ಟ್ರಪತಿ ನನ್ನ ಸಹೋದ್ಯೋಗಿ ಮತ್ತು ಗೆಳೆಯ ಶ್ರೀ ಅನಂತ ಕುಮಾರ್ ಜೀ ಅವರ ನಿಧನದಿಂದ ಅತೀವ ದುಃಖವಾಗಿದೆ. ಚಿಕ್ಕವಯಸ್ಸಿನಲ್ಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು ಅತ್ಯಂತ ಶ್ರದ್ಧೆ ಮತ್ತು ಸಹಾನುಭೂತಿಯಿಂದ ಸಮಾಜ ಸೇವೆಗೈದರು. ತಮ್ಮ ಉತ್ತಮ ಕೆಲಸಗಳಿಂದ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ.
– ನರೇಂದ್ರ ಮೋದಿ, ಪ್ರಧಾನಿ ಅನಂತನ ನಿಧನ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಅಂತಹ ನಾಯಕನನ್ನು ಕಳೆದುಕೊಂಡಿದ್ದು ಪಕ್ಷಕ್ಕೂ ತುಂಬಲಾಗದ ನಷ್ಟ.
– ಲಾಲ್‌ಕೃಷ್ಣ ಅಡ್ವಾಣಿ, ಬಿಜೆಪಿ ನಾಯಕ ಅನಂತಕುಮಾರ್ ವಿಧಿವಶರಾಗಿರುವ ಸುದ್ದಿ ತುಂಬಾ ನೋವನ್ನುಂಟುಮಾಡಿದೆ. ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಓಂ ಶಾಂತಿ.
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ರಾಜಕಾರಣ ಮೀರಿದ ಸ್ನೇಹ ನಮ್ಮ ಕುಟುಂಬದ ಜತೆ ಇತ್ತು. ಅವರ ಅಗಲಿಕೆಯಿಂದ ಓರ್ವ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದ ಅನಂತಕುಮಾರ್, ಕೇಂದ್ರ ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಜನಪರ ಕಾಳಜಿ, ಕಾರ್ಯ ಚಟುವಟಿಕೆಗಳಿಂದ ಬೆಂಗಳೂರಿಗರ ಕಣ್ಮಣಿಯಾಗಿದ್ದರು.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಆರ್‌ಎಸ್‌ಎಸ್ ಸಕ್ರಿಯ ಸದಸ್ಯರಾಗಿದ್ದ ಅನಂತಕುಮಾರ್ ಎಬಿವಿಪಿ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿ ರಾಷ್ಟ್ರ ರಾಜಕಾರಣದಲ್ಲಿ ಬೆಳೆದವರು. ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಕರ್ನಾಟಕದ ಯಾವುದೇ ಸಮಸ್ಯೆ ಬಂದರೂ ಕೂಡ ಕರ್ನಾಟಕವನ್ನು ಸಮರ್ಥಿಸಿ ನಿಲ್ಲುತ್ತಿದ್ದರು.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಚಿತ್ರ: ಫಕ್ರುದ್ದೀನ್ ಎಚ್.