Advertisement

ರಾಷ್ಟ್ರಧ್ವಜದ ರಕ್ಷಣೆಯ ಆಪಾದನೆ ಹೆಮ್ಮೆಯ ವಿಚಾರ

06:35 AM Sep 10, 2017 | Team Udayavani |

ಬೆಂಗಳೂರು: ಈ ನೆಲದ ಇತಿಹಾಸ, ಧರ್ಮ, ಸಂಪ್ರದಾಯ ಹಾಗೂ ರಾಷ್ಟ್ರೀಯತೆಯ ಕಲ್ಪನೆ ಇಲ್ಲದ, ಯಾರೋ ಕೊಟ್ಟ ದುಡ್ಡಿಗೆ ಅಕ್ಷರಗಳನ್ನು ಮಾರಾಟ ಮಾಡುವ ಉದ್ಯೋಗ ಅವಲಂಬಿಸಿರುವವರ ದೃಷ್ಟಿಯಲ್ಲಿ ನಾನೊಬ್ಬ ಅಪರಾಧಿ. ಹೌದು, ದೇಶದ ಮಣ್ಣು ಮತ್ತು ಧ್ವಜಕ್ಕಾಗಿ ಆಪಾದನೆ ಎದುರಿಸುತ್ತಿರುವುದೇ ನನಗೆ ಹೆಮ್ಮೆ….

Advertisement

ಇದು ಇತ್ತೀಚೆಗೆ ಕೇಂದ್ರ ಕೌಶಲಾಭಿವೃದ್ಧಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅನಂತ್‌ ಕುಮಾರ್‌ ಹೆಗಡೆಯವರ ಖಡಕ್‌ ನುಡಿಗಳು.

ಶನಿವಾರ ಬಿಜೆಪಿ ಕಚೇರಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉತ್ತರ ಕನ್ನಡದ ಜನರ ಪ್ರೀತಿ ಮರೆಯಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು, ಹಿತೈಶಿಗಳು, ಈ ತತ್ವ ಸಿದ್ಧಾಂತ ನಂಬಿ ಕೆಲಸ ಮಾಡುತ್ತಿರುವವರು ಯಾವತ್ತು ತಲೆ ತಗ್ಗಿಸುವ ಕೆಲಸವನ್ನು ನಾನು ರಾಜಕೀಯ ಹಾಗೂ ವೈಯಕ್ತಿಕ ಬದುಕಿನಲ್ಲಿ ಮಾಡುವುದಿಲ್ಲ ಎಂದು ಹೇಳಿದರು.

ಸಾಮಾನ್ಯ ಕಾರ್ಯಕರ್ತನಾಗಿರುವ ನನ್ನನ್ನು ಗುರುತಿಸಿ ನೀಡಿರುವ ಮಹತ್ತರ ಜವಾಬ್ದಾರಿಗೆ ಪ್ರಮಾಣಿಕವಾಗಿ ಶಕ್ತಿ ತುಂಬಿ, ನ್ಯಾಯ ಒದಗಿಸುತ್ತೇನೆ. ರಾಜಕಾರಣ ಎಂದರೆ ಜಾತಿ ಮತ್ತು ದುಡ್ಡು ಎನ್ನುತ್ತಾರೆ. ಆದರೆ, 5 ಬಾರಿ ಸಂಸದನಾದರೂ ನಯಾ ಪೈ ಖರ್ಚು ಮಾಡಿಲ್ಲ. ಬೇರೆಯವರು ಚುನಾವಣೆಗೆ ಎಷ್ಟು ಖರ್ಚು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಪ್ರಧಾನಿಯವರು ಹಾಗೂ ಪಕ್ಷದ ವರಿಷ್ಠರು ಮೇಲೆ ವಿಶ್ವಾಸ ಇಟ್ಟು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಜವಾಬ್ದಾರಿ ನೀಡಿದ್ದಾರೆ. ಮೋದಿಯವರ ಕಲ್ಪನೆ ದೊಡ್ಡದಿದ್ದು, ಬಹಳಷ್ಟು ಕೆಲಸ ಮಾಡಲು ಬಾಕಿ ಇದೆ. ನಮ್ಮ ಇಲಾಖೆಯ ಎಲ್ಲ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅನೇಕ ಕಾರ್ಯಕ್ರಮ ಜಾರಿಯಲ್ಲಿದೆ. ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಸ್ಕಿಲ್‌ ಇಂಡಿಯಾ ಎಂದರೆ, ಆಕಾಶದಿಂದ ಉದ್ಯೋಗ ಮತ್ತು ಅವಕಾಶ ಉದುರುವುದಿಲ್ಲ. ಪರಿಶ್ರಮದಿಂದಲೇ ಜಗತ್ತು ಗೆಲ್ಲಬೇಕು. ಸುಲಭವಾಗಿ ಗಿಟ್ಟಿಸಿಕೊಂಡ ಅವಕಾಶ ಬಹುದಿನ ಇರುವುದಿಲ್ಲ ಮತ್ತು ಅದು ಉತ್ತಮ ಮಾರ್ಗವೂ ಅಲ್ಲ ಎಂದು ಹೇಳಿದರು.

Advertisement

ಹೊಸ ಕೌಶಲ್ಯ ಕಲಿಸುವುದು, ಈಗ ಇರುವ ಕೌಶಲ್ಯಕ್ಕೆ ಗುರುತು ನೀಡುವುದು. ಸಸ್ಯಜನ್ಯ ರಾಸಾಯನಿಕ ಬಳಸಿ ಔಷಧ ಉತ್ಪತ್ತಿಗೆ ಹೆಚ್ಚಿನ ಆದ್ಯತೆ ನೀಡುವುದು, ತಂತ್ರಜ್ಞಾನ, ವಿಜ್ಞಾನದಲ್ಲಿರುವ  ಕೌಶಲ್ಯವನ್ನು ಮಾರ್ಪಾಡು ಮಾಡಲು ಬೇಕಾದ ನೀತಿಯನ್ನು ಸಿದ್ಧಪಡಿಸುತ್ತಿದ್ದೇವೆ. ಜನರ ಬದುಕಿಗೆ ಹತ್ತಿರದಲ್ಲಿರುವ ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಿದ್ದೇವೆ ಎಂದರು.ಶಾಸಕರಾದ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌, ಮುನಿರಾಜು, ಸಂಸದ ಪಿ.ಸಿ.ಮೋಹನ್‌ ಉಪಸ್ಥಿತರಿದ್ದರು.

ನಾನು ರಾಷ್ಟ್ರೀಯ ವಾದಿ…
*ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅನಂತ್‌ ಕುಮಾರ್‌ ಹೆಗಡೆ, ನಾನು ಹಿಂದುತ್ವ ವಾದಿಯಲ್ಲ, ರಾಷ್ಟ್ರೀಯ ವಾದಿ. ನನ್ನನ್ನು ಕೇಂದ್ರ ಸಂಪುಟಕ್ಕೆ ಆಯ್ಕೆ ಮಾಡಿದ್ದರ ಹಿಂದಿನ ರಹಸ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ವರಿಷ್ಠರಿಗೆ ಮಾತ್ರ ಗೊತ್ತು. ನಾನು  ರಾಜ್ಯ ರಾಜಕೀಯಕ್ಕೆ ಬರುವ ಕನಸು ಕಂಡವನಲ್ಲ. ಕನಸುಗಾರನೂ ಅಲ್ಲ ಎಂದ ಅವರು, ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ನಕ್ಸಲ್‌ ಕುರಿತಾದ ಯಾವುದೇ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದರು.

ನಾಟಕ ಮಾಡಲು ಬರುವುದಿಲ್ಲ. ಇದ್ದದ್ದನ್ನು ಇದ್ದ ಹಾಗೇ ಹೇಳುತ್ತೇವೆ. ನಂಬಿಕೊಂಡ ಸಿದ್ಧಾಂತದ ಜತೆಗೆ ವ್ಯವಹಾರಿಕ ಮತ್ತು ವೈಚಾರಿಕವಾಗಿ ಸ್ಪಷ್ಟವಾಗಿದೆ ಮತ್ತು ಅದರಂತೆ ಕೆಲಸ ಮಾಡುತ್ತಿದ್ದೇವೆ. 2018ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಲೇಬೇಕು. ವಿಜಯ ಕಡೆಗೆ ಹೆಜ್ಜೆ ಇಟ್ಟಿದ್ದು ಎಲ್ಲರೂ ಒಟ್ಟಾಗಿ ಸಾಗೋಣ.
– ಅನಂತ್‌ ಕುಮಾರ್‌ ಹೆಗಡೆ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next