Advertisement

ಡ್ರಗ್ಸ್‌ ಜಾಲದ ವಿರುದ್ಧ ಕಠಿನ ಕ್ರಮ: ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಎಚ್ಚರಿಕೆ

01:45 AM Dec 22, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮಾದಕ ವಸ್ತುಗಳ ಪೂರೈಕೆ ಜಾಲದ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಡ್ರಗ್ಸ್‌ ಮಾರಾಟದಿಂದ ಬರುವ ಹಣ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಈ ಪಿಡುಗು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ನಾರ್ಕೋ ಕೋ- ಆರ್ಡಿನೇಶನ್‌ ಸೆಂಟರ್‌ ಅನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಡ್ರಗ್ಸ್‌ ಜಾಲವನ್ನು ಮಟ್ಟ ಹಾಕಬೇಕಾಗಿದೆ ಎಂದರು.

“ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಮಾದಕ ದ್ರವ್ಯ ಜಾಲವನ್ನು ನಾವು ತಿಳಿದುಕೊಂಡಿದ್ದೇವೆ. ಅದರಲ್ಲಿ ತೊಡಗಿಸಿ ಕೊಂಡಿರುವ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಮುಂದಿನ ಎರಡು ವರ್ಷಗಳಲ್ಲಿ ಅಂಥ ಜಾಲವನ್ನು ಮುನ್ನಡೆಸುವವರನ್ನು ಜೈಲಿಗೆ ಹಾಕಲಾಗುತ್ತದೆ’ ಎಂದು ಹೇಳಿದ್ದಾರೆ. 2014ರಿಂದ 2022ರ ಅವಧಿಯಲ್ಲಿ 97 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ. 2006 ಮತ್ತು 2013ರ ನಡುವೆ 23 ಸಾವಿರ ಕೋಟಿ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದರು.

ಕೋಪಗೊಂಡ ಅಮಿತ್‌ ಶಾ: ಅಮಿತ್‌ ಶಾ ಮಾತನಾಡುತ್ತಿದ್ದ ವೇಳೆ, ಟಿಎಂಸಿ ಸಂಸದ ಸುಗತ ರಾಯ್‌ ಪದೇ ಪದೆ ಅಡ್ಡಿಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಕೋಪಗೊಂಡ ಶಾ “ಒಂದೋ ನೀವು ಮಾತನಾಡಿ. ಇಲ್ಲದಿದ್ದರೆ ನೀವೇ ಮಾತು ಮುಂದುವರಿಸಿ’ ಎಂದರು. ಹಿರಿಯರಾಗಿರುವ ನೀವು ಈ ರೀತಿ ವರ್ತಿಸಬಾರದು ಎಂದರು.

ಒಬಿಸಿಗಳಿಗೆ ಇರಲಿ ಅವಕಾಶ; ಸಮಿತಿ: ಬಿಎಸ್‌ಎನ್‌ಎಲ್‌, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕೆನರಾ ಬ್ಯಾಂಕ್‌, ಭಾರತೀಯ ನೈಸರ್ಗಿಕ ಅನಿಲ ನಿಗಮ ನಿಯಮಿತ (ಗೈಲ್‌), ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್‌ಗಳ ಉನ್ನತ ಆಡಳಿತ ಮಂಡಳಿಯಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ದವರಿಗೆ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಿ. ಹೀಗೆಂದು ಸಂಸತ್‌ನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ಸದ್ಯ ಒಬಿಸಿಯವರಿಗೆ ಪ್ರಾತಿನಿಧ್ಯ ಇಲ್ಲ ಎಂಬುದನ್ನೂ ಬೆಟ್ಟು ಮಾಡಿ ತೋರಿಸಿದೆ.

Advertisement

ಕಾಂಗ್ರೆಸ್‌ ಸಭೆ: ಈ ನಡುವೆ ಕಾಂಗ್ರೆಸ್‌ ಸಂಸದೀಯ ಮಂಡಳಿ ಸಭೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸತ್‌ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಉದ್ದೇಶಪೂರ್ವಕವಾಗಿಯೇ ಸರಕಾರ ಸಂಸತ್‌ನಲ್ಲಿ ಚೀನ ವಿಚಾರ ಚರ್ಚೆಗೆ ಮುಂದಾಗುತ್ತಿಲ್ಲ ಎಂದು ದೂರಿದರು.

ಸುಸ್ತಿದಾರರ ಪಟ್ಟಿಯಲ್ಲಿ ಚೋಸ್ಕಿ ಮೊದಲು
2022ರ ಮಾ. 31ರ ವರೆಗಿನ ಮಾಹಿತಿ ಪ್ರಕಾರ ಟಾಪ್‌ 50 ಉದ್ದೇಶ ಪೂರ್ವಕ ಸುಸ್ತಿದಾರರು ಬ್ಯಾಂಕ್‌ಗಳಿಗೆ 92,570 ಕೋಟಿ ರೂ. ವಂಚಿಸಿ ದ್ದಾರೆ ಎಂದು ಕೇಂದ್ರ ಸರಕಾರ ಸಂಸತ್‌ಗೆ ಮಾಹಿತಿ ನೀಡಿದೆ. ಈ ಬಗ್ಗೆ ಲೋಕಸಭೆಗೆ ಲಿಖೀತ ಉತ್ತರ ನೀಡಿದ ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್‌ ಕರಾಡ್‌, ಮೆಹುಲ್‌ ಚೋಸ್ಕಿ ಒಡೆತನದ ಗೀತಂಜಲಿ ಜೆಮ್ಸ್‌ ಅತ್ಯಧಿಕ ಎಂದರೆ 7,848 ಕೋಟಿ ರೂ. ವಂಚಿಸಿ ಬ್ಯಾಂಕ್‌ಗಳಿಗೆ ಸಾಲ ವಾಪಸ್‌ ಮಾಡಿಲ್ಲ ಎಂದು ಹೇಳಿದ್ದಾರೆ.

ಖರ್ಗೆ ನೇತೃತ್ವದಲ್ಲಿ ಪ್ರತಿಭಟನೆ
ತವಾಂಗ್‌ನಲ್ಲಿ ಚೀನ ಸೈನಿಕರು ನಡೆಸಿದ ದಾಳಿ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಕೇಂದ್ರ ಸರಕಾರ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲವೆಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಂಸತ್‌ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ಚಿದಂಬರಂ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಡಿಎಂಕೆ ನಾಯಕ ಟಿ.ಆರ್‌. ಬಾಲು, ಎನ್‌ಸಿಪಿಯ ಸುಪ್ರಿಯಾ ಸುಳೆ ಸಹಿತ ವಿಪಕ್ಷಗಳ ಪ್ರಮುಖ ನಾಯಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next