ಹಾಸನ: ಲೋಕಸಭೆಯಲ್ಲಿ ಫೆ.1 ರಂದು ಕೇಂದ್ರ ಸರ್ಕಾರದ 2024-25ನೇ ಸಾಲಿನ ಬಜೆಟ್ ಮಂಡನೆಯಾಗಲಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 10ನೇ ಬಜೆಟ್ ಮಂಡನೆಯ ಈ ಸಂದರ್ಭದಲ್ಲಿ ಕಳೆದ 5 ವರ್ಷಗಳಲ್ಲಿ ಕೇಂದ್ರದಿಂದ ಹಾಸನ ಜಿಲ್ಲೆಗೆ ಮಂಜೂರಾದ ಹಾಗೂ ಅವುಗಳ ಅನುಷ್ಠಾನದ ಬಗ್ಗೆ ಅವಲೋಕನ ಮಾಡಿದರೆ ಅಭಿವೃದ್ಧಿ ಯೋಜನೆಗಳ ಮಂಜೂರಾತಿಯ ಬಗ್ಗೆ ಜಿಲ್ಲೆಯ ಜನರಿಗೆ ಸಮಾಧಾನವಿದೆ. ಆದರೆ, ಅವುಗಳ ಅನುಷ್ಠಾನ ಮಾತ್ರ ಆಮೆ ವೇಗದಲ್ಲಿದೆ ಎಂಬ ಅಸಮಾಧಾನವೂ ಇದೆ.
Advertisement
ನಿರೀಕ್ಷೆಗೂ ಮೀರಿ ಯೋಜನೆಗಳು ಮಂಜೂರು:ಕೇಂದ್ರ ಸರ್ಕಾರದಿಂದ ಜನರು ನಿರೀಕ್ಷೆ ಮಾಡುವುದು ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ದೂರ ಸಂಪರ್ಕ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತಿತರ ಬೃಹತ್ ಯೋಜನೆಗಳು. ಆ ಪೈಕಿ ನಿರೀಕ್ಷೆ ಮೀರಿ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳೂ ಮಂಜೂರಾಗಿವೆ. ಹೊಸ ರೈಲು ಸಂಚಾರವೂ ಆರಂಭವಾಗಿವೆ. ವಿಶೇಷವಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರವೂ ಹಾಸನದಲ್ಲಿ ಆರಂಭವಾಗಿದೆ.
Related Articles
ಪೂರ್ಣ: ಹಾಸನ-ಮಂಗಳೂರು ನಡುವೆ ಚತುಷ್ಪಥ ನಿರ್ಮಾಣ ಮಾತ್ರ ಕುಂಟುತ್ತಾ ಸಾಗಿತ್ತು. ಆದರೆ, ಈಗ ಹಾಸನ-ಸಕಲೇಶಪುರ ನಡುವಿನ ಮಾರ್ಗ ಬಹುತೇಕ ಪೂರ್ಣಗೊಂಡಿದೆ. ಇನ್ನು ಸಕಲೇಶಪುರ- ಶಿರಾಡಿ ಘಾಟ್ ನಡುವಿನ ಸುಮಾರು 15 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆನಂತರ ಬೆಂಗಳೂರು-ಹಾಸನ-ಮಂಗಳೂರು ನಡುವೆ ಚತುಷ್ಪಥ ರಾ.ಹೆ. ನಿರ್ಮಾಣ ಪರಿಪೂರ್ಣವಾಗಲಿದೆ.
Advertisement
780 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ನಿರ್ಮಾಣ:ಹಾಸನ ಜಿಲ್ಲೆಯ ಪಾಲಿಗೆ ಮತ್ತೂಂದು ರಾಷ್ಟ್ರೀಯ ಹೆದ್ದಾರಿ ಬಿಳಿಕೆರೆ (ಮೈಸೂರು)-ಹಾಸನ-ಬೇಲೂರು -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 373 ಮಂಜೂರಾಗಿ 5 ವರ್ಷಗಳು ಕಳೆದಿವೆ. ಈ ಹೆದ್ದಾರಿ ದ್ವಿಪಥದಿಂದ ಚತುಷ್ಪಥ ನಿರ್ಮಾಣ ಯೋಜನೆ ಮಂಜೂರಾಗಿ ಎರಡು ವರ್ಷಗಳು ಕಳೆದಿವೆ. ಈ ಮಾರ್ಗದಲ್ಲಿ ಈಗಾಗಲೇ ಹಾಸನ-ಹೊಳೆನರಸೀಪುರ ನಡುವೆ 780 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ನಿರ್ಮಾಣವಾಗಿದೆ. ದ್ವಿಪಥದ ರಸ್ತೆ ನಿರ್ವಹಣೆ ಸಮರ್ಪಕವಾಗಿಲ್ಲ:
ಬೆಂಗಳೂರು-ಹೊನ್ನಾವರ ರಾ.ಹೆ.-206 ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಹಾದು ಹೋಗುತ್ತದೆ. ತಿಪಟೂರು-ಕಡೂರು ನಡುವೆ ಅರಸೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಅರಸೀಕೆರೆ ಬೈಪಾಸ್ ಚತುಷ್ಪಥ ರಸ್ತೆಯೂ ಪೂರ್ಣಗೊಂಡಿದೆ. ಇನ್ನು ಬಿ.ಸಿ. ರೋಡ್-ತಿರುವಣ್ಣಾಮಲೈ ರಾ.ಹೆ.-234 ಜಿಲ್ಲೆಯ ಬೇಲೂರು-ಹಳೆಬೀಡು-ಬಾಣಾವರ ಮೂಲಕ ಹಾದು ಹೋಗುತ್ತದೆ. ದ್ವಿಪಥದ ಈ ರಸ್ತೆ ದಶಕದ ಹಿಂದೆಯೇ ನಿರ್ಮಾಣವಾದರೂ ಅದರ ನಿರ್ವಹಣೆ ಸಮರ್ಪಕವಾಗಿಲ್ಲ. ರೈಲ್ವೆ ಯೋಜನೆಗಳು: ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಪೈಕಿ ಹಾಸನ-ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ಮಹತ್ವದ ಯೋಜನೆ. ಈಗಾಗಲೇ ಚಿಕ್ಕಮಗಳೂರು-ಬೇಲೂರು ನಡುವೆ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಆದರೆ, ಬೇಲೂರು-ಆಲೂರು ನಡುವೆ ಇನ್ನೂ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷಾಂತ್ಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆನಂತರವಷ್ಟೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಮೇಲ್ಸೇತುವೆ; ಮೇ ಗೆ ಪೂರ್ಣಗೊಳಿಸುವ ಗುರಿ
ರೈಲ್ವೆ ಮೇಲ್ಸೇತುವೆಗಳ ಪೈಕಿ ಹೊಳೆನರಸೀಪುರದ ರೈಲ್ವೆ ಮೇಲ್ಸೇತುವೆ ಪೂರ್ಣಗೊಂಡಿದೆ. ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಂಡರೂ ಕಳಪೆ ಕಾಮಗಾರಿಯಿಂದ ಕುಸಿದ ಪರಿಣಾಮ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮೇ ತಿಂಗಳ ವೇಳೆಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ. ಹಾಸನದ ಚತುಷ್ಪಥ ಮೇಲ್ಸೇತುವೆಯ ಪೈಕಿ ದ್ವಿಪಥ ಪೂರ್ಣಗೊಂಡಿದೆ. ಇನೊಂದು ದ್ವಿ ಪಥದ ಬಹುಪಾಲು ಕಾಮಗಾರಿ ಪೂರ್ಣಗೊಂಡಿದೆಯಾದರೂ ರಾಜ್ಯ ಸರ್ಕಾರದ
ವಂತಿಕೆ 47 ಕೋಟಿ ರೂ. ಬಿಡುಗಡೆಯಾಗದೆ ಕಾಮಗಾರಿ ಸ್ಥಗಿತಗೊಂಡಿದೆ. ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ
ಇನ್ನು ಹೊಳೆನಸೀಪುರ-ಮೈಸೂರು (ಬಿಳಿಕೆರೆ) ನಡುವೆ 960 ಕೋಟಿ ರೂ. ಮತ್ತು ಹಾಸನ-ಬೇಲೂರು ನಡುವಿನ 680 ಕೋಟಿ ರೂ. ಚತುಷ್ಪಥ ಯೋಜನೆ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಹಾಸನ – ಬೇಲೂರು ನಡುವೆ ಚತುಷ್ಪಥಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಾಗಿದೆ. ಹೊಳೆನಸೀಪುರ-ಮೈಸೂರು (ಬಿಳಿಕೆರೆ) ನಡುವಿನ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಯೂ ಆರಂಭವಾಗಿಲ್ಲ. ದೇವೇಗೌಡರ ಪ್ರಭಾವ
ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳು ಕೇಂದ್ರ ಸರ್ಕಾರದಿಂದ ಮಂಜೂರಾಗಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ಪ್ರಭಾವವೇ ಕಾರಣ. ದೇವೇಗೌಡರ ಪ್ರಭಾವ ಬಳಸಿಕೊಂಡು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು
ಬಂದಿರುವ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ ಅವರು ಅವುಗಳ ಅನುಷ್ಠಾನಕ್ಕೂ ಪ್ರಯತ್ನಿಸುವ ನಿಟ್ಟಿನಲ್ಲಿ ದಿಶಾ ಸಭೆ ಸೇರಿ ಆಗಿಂದಾಗ್ಗೆ ಅಧಿಕಾರಿಗಳ ಸಭೆ ನಡೆಸಿದರೂ ನಿರೀಕ್ಷಿತ ವೇಗ ಮಾತ್ರ ಕಾಣುತ್ತಿಲ್ಲ. ಅದಕ್ಕೆ ಅಧಿಕಾರಿಗಳ ಅಸಹಕಾರ ಎಂದು ಹೇಳಬಹುದಾಗಿದೆ. ಐಐಟಿ ಹಾಸನಕ್ಕೆ ಮರೀಚಿಕೆ
ಹಾಸನದಲ್ಲಿ ಐಐಟಿ ಆರಂಭಕ್ಕೆ ಎರಡು ದಶಕಗಳಿಂದಲೂ ಪ್ರಯತ್ನ ನಡೆದಿದೆ. ಐಐಟಿಗಾಗಿಯೇ 1057 ಎಕರೆ
ಸ್ವಾಧೀನಪಡಿಸಿಕೊಂಡು ಒಂದು ದಶಕ ಕಳೆದಿದೆ. ಹಾಸನಕ್ಕೆ ಮಂಜೂರಾಗಬೇಕಾಗಿದ್ದ ಐಐಟಿ ಧಾರವಾಡದ ಪಾಲಾಯಿತು. ಆ ನಂತರವೂ ಐಐಟಿಗಾಗಿ ಪ್ರಯತ್ನ ನಡೆದೇ ಇದೆ. ಹಾಸನಕ್ಕೆ ಐಐಟಿ ಮಾಜಿ ಪ್ರಧಾನಿ ದೇವೇಗೌಡರ ಕನಸು. ಅದಕ್ಕಾಗಿ ಈಗಲೂ ಪ್ರಯತ್ನ ನಿಂತಿಲ್ಲ. ಆದರೆ, ಐಐಟಿ ಮಾತ್ರ ಹಾಸನಕ್ಕೆ ಮರೀಚಿಕೆಯಾಗಿಯೇ ಉಳಿದಿದೆ. ಮತ್ತೊಂದು ರಾ.ಹೆ.ಯೋಜನೆ ಮಂಜೂರು
ಕಳೆದ ವರ್ಷ ಮತ್ತೊಂದು ಮಹತ್ವದ ರಾಷ್ಟ್ರೀಯ ಹೆದ್ದಾರಿ ಭಾರತ ಮಾಲಾ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಹಾಸನ ತಾಲೂಕು ಶಾಂತಿಗ್ರಾಮದ ಬಳಿಯಿಂದ (ಹಾಸನ ನಗರದಿಂದ 12 ಕಿ.ಮೀ. ದೂರ) ಅರಸೀಕೆರೆ ಮಾರ್ಗವಾಗಿ ಹಿರಿಯೂರು ಸಂಪರ್ಕಿಸುವ 1,556 ಕೋಟಿ ರೂ. ಅಂದಾಜಿನ ಯೋಜನೆ
ಮಂಜೂರಾಗಿದೆ. ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಭೂ ಪರಿಹಾರ ನಿಗದಿ ಹಂತದಲ್ಲಿದೆ. ಈ ವರ್ಷವೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ತಾತ್ವಿಕ ಅನುಮೋದನೆ
ಹಿರೀಸಾವೆ-ಶ್ರವಣಬೆಳಗೊಳ- ಚನ್ನರಾಯಪಟ್ಟಣ-ಹೊಳೆನರಸೀಪುರ-ಅರಕಲಗೂಡು-ಸೋಮವಾರ ಪೇಟೆ ಮಾರ್ಗವಾಗಿ ಕೇರಳದ ಮಾಕುಟ್ಟ ಸೇರುವ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಾ.ಹೆ.ನಿರ್ಮಾಣಕ್ಕೂ ಕೇಂದ್ರ ಭೂ ಸಾರಿಗೆ ಸಚಿವಾಲಯ ತಾತ್ವಿಕ ಅನುಮೋದನೆ ನೀಡಿದೆ. ಆದರೆ, ಇನ್ನು ಅಧಿಕೃತ ಮಂಜೂರಾತಿ ಬಾಕಿಯಿದೆ. ಗ್ರಾಮ್ ಸಡಕ್ ಯೋಜನೆ
ಗ್ರಾಮೀಣ ರಸ್ತೆಗಳ ನಿರ್ಮಾಣದ ಪ್ರಧಾನಮಂತ್ರಿ ಗಾಮ್ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಯೋಜನೆಯಡಿ 226 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ 280 ಕೋಟಿ ರೂ ಅನುದಾನ ಈ ವರ್ಷ (2023 -24) ಹಾಸನ ಜಿಲ್ಲೆಗೆ ಮಂಜೂರಾಗಿದೆ. ರೈಲು ನಿಲ್ದಾಣಗಳ ಆಧುನೀಕರಣ
ರೈಲು ನಿಲ್ದಾಣಗಳ ಆಧುನೀಕರಣದ ಯೋಜನೆಯಲ್ಲಿ ಅರಸೀಕೆರೆ, ಹಾಸನ, ಶ್ರವಣಬೆಳಗೊಳ, ಹೊಳೆನರಸೀಪುರ ರೈಲು
ನಿಲ್ದಾಣಗಳು ಆಯ್ಕೆಯಾಗಿವೆ. ಈ ನಿಲ್ದಾಣಗಳ ಕಾಮಗಾರಿಗಳು ಆರಂಭವಾಗಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬಹುದು. ರೈಲು ಮಾರ್ಗಗಳ ವಿದ್ಯುದ್ದೀಕರಣವೂ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ವಿದ್ಯುತ್ ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ. ಇನ್ನು ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ವಿದ್ಯುತ್ ಎಂಜಿನ್ ಗಳ ಬಳಕೆಗೆ ನಿರೀಕ್ಷಿಸಲಾಗಿದೆ. ಪಾಸ್‌ಪೋರ್ಟ್ ಸೇವಾಕೇಂದ್ರ ಪುನಾರಂಭ
ಹಾಸನದ ಪ್ರಧಾನ ಅಂಚೆ ಕಚೇರಿಯಲ್ಲಿದ್ದ ಪಾಸ್‌ಪೋರ್ಟ್ ಸೇವಾ ಕೇಂದ್ರ ರದ್ದಾಗಿತ್ತು. ಹಾಗಾಗಿ ಜಿಲ್ಲೆಯ ಜನರು ಪಾಸ್‌ಪೋರ್ಟ್ ಗಾಗಿ ಬೆಂಗಳೂರು, ಮಂಗಳೂರಿಗೆ ಅಲೆಯಬೇಕಾಗಿತ್ತು. ಕಳೆದೊಂದು ವರ್ಷದಿಂದ ಮತ್ತೆ ಹಾಸನದ ಪ್ರಧಾನ ಅಂಚೆ ಕಚೇರಿಯಲ್ಲಿಯೇ ಪಾರ್ಸ್‌ಪೋರ್ಟ್ ಸೇವಾ ಕೇಂದ್ರ ಪುನಾರಂಭವಾಗಿದೆ. *ಎನ್.ನಂಜುಂಡೇಗೌಡ